More

    ಮೂಕಪ್ರಾಣಿಗಳ ಬದುಕಿಗ ಸಂಚಕಾರ

    ಧಾರವಾಡ: ಮದ್ಯ ಮತ್ತು ಬಿಯರ್ ಶೀಶೆಗಳು ಖಾಲಿಯಾದ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಒಡೆದು ಬಾಕಾಬಿಟ್ಟಿ ಬಿಸಾಕುವ ಹಲವರ ಅನುಚಿತ ವರ್ತನೆಯಿಂದ ಮೂಕಪ್ರಾಣಿಗಳ ಜೀವಕ್ಕೆ ಸಂಚಕಾರ ಬಂದೊದಗಿದೆ.

    ನಗರದ ಗಾಯತ್ರಿಪುರಂ ಬಡಾವಣೆ, ಮಂಜುನಾಥಪುರ, ಕಲ್ಯಾಣನಗರ ಸೇರಿ ಅನೇಕ ಕಡೆಗಳಲ್ಲಿ ಬೀದಿ ದೀಪಗಳು ಬೆಳಗದಿರುವುದು ಪುಂಡರಿಗೆ ಸಾಕಷ್ಟು ಸಹಕಾರಿಯಾಗಿದೆ. ದೀಪ ಇಲ್ಲದ ಕಾರಣಕ್ಕೆ ನಿತ್ಯರಾತ್ರಿ ಅನೇಕ ಯುವಕರು ರಸ್ತೆ ತಿರುವಿನ ಪೂಲ್​ಗಳ ಮೇಲೆ ಕುಳಿತು, ಕುಡಿದು ಕುಪ್ಪಳಿಸಿದ ಬಳಿಕ ಬಾಟಲಿಗಳನ್ನು ಒಡೆದು ಹಾಕುತ್ತಿರುವುದು ಸ್ಥಳೀಯ ನಿವಾಸಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

    ಇಂತಹ ಸ್ಥಳಗಳಲ್ಲಿ ಓಡಾಡುವ ಜನರು ಮಾತ್ರವಲ್ಲದೆ, ಮೂಕ ಪ್ರಾಣಿಗಳ ಜೀವಕ್ಕೂ ಕುತ್ತು ಬರುವಂತಾಗಿವೆ. ಇಂತಹ ಅನೇಕ ಪ್ರಕರಣಗಳೂ ನಡೆದಿವೆ. ಉದಯ ಹಾಸ್ಟೇಲ್ ಪಕ್ಕದ ಗಟಾರಿನಲ್ಲಿ ಬಿಡಾಡಿ ನಾಯಿಮರಿ ಆಹಾರ ಅರಸಿ ಹೋಗಿ ಕಾಲಿಗೆ ಗಾಜು ಚುಚ್ಚಿ ಗಾಯವಾಗಿದ್ದರೆ, ಕಲ್ಯಾಣನಗರದ ರೇಲ್ವೆ ಗೇಟಿನ ಅಕೇಷಿಯಾ ನೆಡುತೋಪಿನ ಮಧ್ಯದ ರಸ್ತೆಯಲ್ಲಿ ಕೆರೆಹಾವು ಮದ್ಯದ ಟೆಟ್ರಾ ಪ್ಯಾಕ್​ನಲ್ಲಿ ಮುಖ ತೂರಿಸಿ, ಒದ್ದಾಡಿ ಅಸುನೀಗಿದೆ.

    ಕೆಲಗೇರಿ ಕೆರೆ, ದಂಡೆ ಮೇಲೆ ಮತ್ತು ರಸ್ತೆಗುಂಟ, ಪೂಲ್​ನಿಂದ ಆಂಜನೇಯ ನಗರದ ಬೈಪಾಸ್ ರಸ್ತೆವರೆಗೆ ಸಾವಿರಾರು ಸಾರಾಯಿ ಬಾಟಲಿಗಳು ಬಿದ್ದಿದ್ದು, ಅನೇಕ ಪಾದಚಾರಿಗಳು, ಈಜುಗಾರರ ಕೈ ಮತ್ತು ಪಾದಗಳಿಗೆ ಗಾಯಗಳಾಗಿವೆ. ಆಂಜನೇಯನಗರ ಮತ್ತು ಶಿವಶಕ್ತಿನಗರದಿಂದ ಹರಿದು ಬರುವ ಗಟಾರು ನೀರು ನೇರವಾಗಿ ಕೆರೆಗೆ ಸೇರುತ್ತಿದ್ದು, ತೇಲಿ ಬರುವ ಬಿಯರ್ ಬಾಟಲಿಗಳು ಬುಡಮೇಲಾಗಿ, ಬಾಯ್ದೆರೆದು ಕೆರೆ ದಂಡೆಗುಂಟ ನೂರಾರು ಸಂಖ್ಯೆಯಲ್ಲಿ ತೇಲುತ್ತಿವೆ.

    ಹೀಗೆ ತಂಪು ಪಾನೀಯಗಳೂ ಸೇರಿ ಮದ್ಯದ ಟಿನ್ ಡಬ್ಬಿ, ಬಾಟಲಿಗಳನ್ನು ಬಳಸಿದ ಬಳಿಕ ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ. ಬಹುತೇಕ ಸಾರ್ವಜನಿಕ ಸ್ಥಳಗಳಲ್ಲಿ ಕಾಲುಬುಡದಲ್ಲೇ ಹತ್ತಾರು ಪ್ಲಾಸ್ಟಿಕ್ ಚೀಲಗಳಲ್ಲೂ ವಿಲೇವಾರಿ ಅಸಹನೀಯ ಮಟ್ಟ ತಲುಪಿದೆ. ಪರಿಣಾಮ ಮೂಕ ಪ್ರಾಣಿಗಳ ಜೀವಕ್ಕೆ ಒಡೆದ ಬಾಟಲಿಗಳು ಎರವಾಗುತ್ತಿವೆ. ಈ ಉಪಟಳಕ್ಕೆ ನಿಯಂತ್ರಣ ಹೇರಬೇಕಿದೆ ಎಂದು ಒತ್ತಯಿಸುತ್ತಾರೆ ಪರಿಸರ ಪ್ರೇಮಿ ಡಾ. ಹರ್ಷವರ್ಧನ ಶೀಲವಂತ ಅವರು.

    ಕಳೆದ ನಾಲ್ಕು ವಾರಗಳಲ್ಲಿ ನಗರದ 3 ಬಡಾವಣೆಗಳ ಗಟಾರುಗಳಲ್ಲಿ ಮೂರು ಬೀದಿ ನಾಯಿಗಳಿಗೆ ಒಡೆದ ಸಾರಾಯಿ ಬಾಟಲಿಗಳು ಕಾಲಿಗೆ ಚುಚ್ಚಿ ಗಾಯವಾಗಿದೆ. ಸದ್ಯ ಹೊಲಿಗೆ ಹಾಕಿ ಉಪಚರಿಸಲಾಗಿದೆ. ಬಂತು. ಈ ಅನಾಗರಿಕ ನಡಾವಳಿಗೆ ಕಡಿವಾಣ ಹಾಕುವ ದಾರಿಗಳಾವವು? ಮನೆ ಅಂಗಳದ ಗೇಟಿನ ಗ್ರಿಲ್​ಗಳೂ ನಟ್ಟು, ಮಂಗ, ನಾಯಿ, ಬೆಕ್ಕುಗಳಿಗೆ ಆಳವಾದ ಗಾಯಗಳಾಗಿವೆ. ಚೂಪಾದ ಗ್ರಿಲ್​ಗಳು ನಮಗೆ ಬೇಕೆ?

    | ಸೋಮಶೇಖರ ಚೆನ್ನಶೆಟ್ಟಿ, ಪ್ರಾಣಿ ಪ್ರಿಯರು

    ಅವಳಿ ನಗರದ ಕೆರೆ ದಂಡೆ, ಉದ್ಯಾನಗಳಲ್ಲಿ ಕುಟುಂಬದೊಂದಿಗೆ ವಿಹರಿಸುವ ಸ್ಥಿತಿ ಇಲ್ಲ. ಕಾವಲಿರದ ಸ್ಥಳಗಳಲ್ಲಂತೂ ಮರ್ಯಾದಸ್ತರು ವಾಯುವಿಹಾರಕ್ಕೆ ಹೋಗುವಂತಿಲ್ಲ. ಸಂಜೆ ವೇಳೆಗೆ ಶುರುವಾಗಿ ಮಧ್ಯ ರಾತ್ರಿವರೆಗೆ ನಿತ್ಯ ಹಾವಳಿ ಕುಡುಕರದ್ದು. ಗುಟ್ಖಾ, ಸಿಗರೇಟ್, ಕುರುಕಲು ತಿಂಡಿಗಳ ಖಾಲಿ ಚೀಟು, ಒಡೆದ ಸಾರಾಯಿ ಬಾಟಲಿ. ಇವುಗಳ ನಿರ್ವಹಣೆ ಹೊಣೆ ಹೊತ್ತವರು ತುಸು ಎಚ್ಚರವಾದರೆ, ಸಾರ್ವಜನಿಕ ಸ್ಥಳಗಳಲ್ಲಿ ಗೌರವಯುತ ನಡವಳಿಕೆ ನಿರೀಕ್ಷಿಸಬಹುದು.

    | ಯಲ್ಲಪ್ಪ ಮುರಗೋಡ, ಕೆಲಗೇರಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts