More

    ಪ್ರಯಾಣಿಕರನ್ನು ಕಾಡುವ ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳು!

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಮಾಡುವುದು ಕಳೆದ ಹಲವು ದಿನಗಳಿಂದ ದುಸ್ತರವಾಗಿದೆ. ಒಂದೆಡೆ ಕಳಪೆ ಕಾಮಗಾರಿ, ಮತ್ತೊಂದೆಡೆ ಹೆದ್ದಾರಿ ವಿಸ್ತರಣೆ ಕಾರ್ಯದಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.

    ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಅಂಡರ್‌ಪಾಸ್ ಅವ್ಯವಸ್ಥೆಯಿಂದ ಕೂಡಿದ್ದು, ಬೃಹತ್ ಹೊಂಡ-ಗುಂಡಿ ನಿರ್ಮಾಣವಾಗಿದೆ. ಬೀರಿ, ತಲಪಾಡಿ ಬಳಿ ಹೆದ್ದಾರಿ ಮಧ್ಯೆ ಹೊಂಡ ನಿರ್ಮಾಣಗೊಂಡಿದೆ. ಮಳೆ ನೀರು ನಿಂತ ಪರಿಣಾಮ ಬೈಕ್ ಹಾಗೂ ಸಣ್ಣ ವಾಹನಗಳ ಸವಾರರಿಗೆ ಮುಳುವಾಗಿದೆ. ರಾಷ್ಟ್ರೀಯ ಹೆದ್ದಾರಿ ತೊಕ್ಕೊಟ್ಟು ಓವರ್‌ಬ್ರಿಡ್ಜ್‌ನಿಂದ ಕುಂಪಲ ತನಕ ಬೈಪಾಸ್ ರಸ್ತೆಯಂತೂ ಇದ್ದೂ ಇಲ್ಲದ ಸ್ಥಿತಿಯಲ್ಲಿದೆ.

    ನಿರಂತರ ಮಳೆಯಿಂದಾಗಿ ಕೊಟ್ಟಾರಚೌಕಿಯಿಂದ ಕುಳಾಯಿ ತನಕ (ಸುಮಾರು 6 ಕಿ.ಮೀ.) ಸಂಚಾರ ಕಷ್ಟಸಾಧ್ಯವಾಗಿದೆ. ಉಡುಪಿಯಿಂದ ಮಂಗಳೂರಿಗೆ ಬರುವ ರಸ್ತೆಯಲ್ಲಿ ಕುಳಾಯಿ ಸೇತುವೆ ನಂತರದ ಪೊಲೀಸ್ ಚೌಕಿ ಇರುವ ತಿರುವಿನಲ್ಲಿ ಕಾಂಕ್ರೀಟ್ ಮತ್ತು ಡಾಂಬರು ರಸ್ತೆ ಸೇರುವ ಜಾಗದಲ್ಲಿ ಉದ್ದಕ್ಕೂ ಗುಂಡಿ ಬಿದ್ದಿದೆ. ಕೂಳೂರು ಮೇಲ್ಸೇತುವೆ, ಪಣಂಬೂರಿನಲ್ಲಿ ಎನ್‌ಎಂಪಿಟಿ ಸಮೀಪ ಮತ್ತು ಔದ್ಯೋಗಿಕ ವಲಯಕ್ಕೆ ತಿರುಗುವಲ್ಲಿ ಗುಂಡಿಗಳಿದ್ದು, ನಿತ್ಯವೂ ವಾಹನ ಸವಾರರು ಹೆದ್ದಾರಿ ಇಲಾಖೆಗೆ ಶಾಪ ಹಾಕುತ್ತಿದ್ದಾರೆ.

    ಹಾರಿಹೋದ ಜಲ್ಲಿಪುಡಿ

    ಮಗಳೂರಿನಿಂದ ಉಡುಪಿ ಕಡೆ ಹೋಗುವ ರಸ್ತೆ ಹೆಚ್ಚು ಹದಗೆಟ್ಟಿದೆ. ಉಡುಪಿಯಿಂದ ಮಂಗಳೂರಿಗೆ ಬರುವ ರಸ್ತೆಯಲ್ಲಿ ಕುಳಾಯಿ ಸೇತುವೆ ದಾಟಿದ ಕೂಡಲೇ ಸಿಗುವ ಪೊಲೀಸ್ ಚೌಕಿ ಇರುವ ತಿರುವಿನಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಡಾಂಬರು ರಸ್ತೆ ಸೇರುವ ಜಾಗದಲ್ಲಿ ಉದ್ದಕ್ಕೂ ಗುಂಡಿ ಬಿದ್ದಿದೆ. ಬೇಸಿಗೆಯಲ್ಲಿ ಇಲ್ಲಿ ಬಿರುಕು ಇತ್ತು. ಮಳೆಗಾಲ ಶುರುವಾಗುತ್ತಿದ್ದಂತೆ ಈ ಬಿರುಕು ಅಗಲವಾಗಿ ಈಗ ದೊಡ್ಡ ಗುಂಡಿಯಾಗಿದೆ. ಕೆಲ ದಿನಗಳ ಹಿಂದೆ ಇಲ್ಲಿ ಒಂದಷ್ಟು ಜಲ್ಲಿಪುಡಿ ತಂದು ಸುರಿದಿದ್ದರು. ಅದೂ ಹಾರಿಹೋಗಿ ಗುಂಡಿ ಮತ್ತೆ ದೊಡ್ಡದಾಗುತ್ತಿದೆ. ಇಲ್ಲಿಯೇ ರಸ್ತೆಯ ಬದಿಯಲ್ಲಿ ಕೂಡ ದೊಡ್ಡ ದೊಡ್ಡ ಗುಂಡಿಗಳಿವೆ.

    ಟ್ರಕ್‌ಗಳ ಪರದಾಟ:

    ಬಂದರಿನಿಂದ ಸರಕುಗಳನ್ನು ಹೊತ್ತುಕೊಂಡು ಬರುವ ಬೃಹತ್ ಟ್ರಕ್‌ಗಳು ಮಂಗಳೂರು ಕಡೆ ಹೋಗಲು ಇಲ್ಲಿಯ ತನಕ ಬಂದು ತಿರುವು ತೆಗೆದುಕೊಳ್ಳಬೇಕು. ಉದ್ದದ ಟ್ರಕ್‌ಗಳು ತಿರುಗುವಾಗ ಬಹುಭಾಗ ರಸ್ತೆ ಬಿಟ್ಟು ಕೆಳಗಿಳಿಯಬೇಕಾಗುತ್ತದೆ. ರಸ್ತೆ ಬದಿಯಲ್ಲಿ ಗುಂಡಿಗಳಿರುವುದರಿಂದ ಟ್ರಕ್‌ಗಳನ್ನು ತಿರುಗಿಸಲು ಚಾಲಕರು ಹೆಣಗಾಡಬೇಕಾಗುತ್ತದೆ. ಎನ್‌ಎಂಪಿಟಿ ಎದುರು ಮೊದಲ ಮಳೆಗೆ ರಸ್ತೆ ಗುಂಡಿ ಬೀಳಲು ಶುರುವಾಗಿದ್ದು, ಈಗ ಪೂರ್ಣ ಹದಗೆಟ್ಟಿದೆ. ವಾಹನಗಳ ಚಕ್ರ ಗುಂಡಿಯೊಳಗೆ ಇಳಿದೇ ಮುಂದೆ ಸಾಗಬೇಕು.

    ಕೂಳೂರು ಅದೇ ಗೋಳು

    ಕೂಳೂರಿನ ಫ್ಲೈಓವರ್ ಆಡಿಯಲ್ಲಿ ಬೇಸಿಗೆಯಲ್ಲಿ ಪೈಪ್‌ಲೈನ್ ಹಾಕಲು ಅಗೆದ ರಸ್ತೆಯನ್ನು ಒಂದಷ್ಟು ಡಾಂಬರು ಹಾಕಿ ತುಂಬಿಸಿದ್ದರು. ಮಳೆ ಶುರುವಾಗುತ್ತಿದ್ದಂತೆ ಈ ಡಾಂಬರು ಕಿತ್ತುಹೋಗಿ ಗುಂಡಿ ಬಿದ್ದಿದೆ. ಕೂಳೂರು ಸೇತುವೆಯದ್ದು ಪ್ರತಿ ಮಳೆಗಾಲದಲ್ಲಿ ಅದೇ ರಾಗ ಅದೇ ಹಾಡು ಎಂಬಂತಾಗಿದೆ. ಉಡುಪಿ ಕಡೆ ಹೋಗುವ ರಸ್ತೆಗೆ ಹಾಕಿದ್ದ ಡಾಂಬರು ತೇಪೆ ಕಿತ್ತು ಹೋಗಲಾರಂಭಿಸಿದ್ದು, ಒಳಗಿನ ಕಾಂಕ್ರೀಟ್ ಪದರ ಹೊರಗಿಣುಕುತ್ತಿದೆ.

    ಅನುದಾನ ಕೊರತೆ?

    ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಉಡುಪಿಯಿಂದ ಮಂಗಳೂರು ಕಡೆ ಬರುವ ಸೇತುವೆಗೆ ಡಾಂಬರು ಹಾಕಿದ್ದರಿಂದ ಈಗ ತಕ್ಕ ಮಟ್ಟಿಗೆ ಸುಸ್ಥಿಯಲ್ಲಿದೆ. ಇಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅನುದಾನ ಕೊರತೆ ಎಂದು ಹೇಳಲಾಗುತ್ತಿದೆ. ಈ ಸೇತುವೆ ಆಗುವ ತನಕ ಇಲ್ಲಿನ ರಸ್ತೆಯ ಗುಂಡಿಗಳ ಗೋಳಿಗೆ ಮುಕ್ತಿಯಿಲ್ಲ.

    ತುರ್ತು ತೇಪೆ ಭಾಗ್ಯ

    ಮಳೆ ಸುರಿಯುತ್ತಿರುವಂತೆಯೇ ಗುಂಡಿಗಳಿಗೆ ಜಲ್ಲಿ ಹುಡಿ ತಂದು ಸುರಿದು ತೇಪೆ ಹಾಕುವ ಕಾರ್ಯವೂ ನಡೆಯುತ್ತಿದೆ. ಎರಡು ದಿನದಲ್ಲಿ ಈ ಜಲ್ಲಿ ಪುಡಿ ಎದ್ದು ಹೋಗಿ ರಸ್ತೆ ಮತ್ತೆ ಪೂರ್ವ ಸ್ಥಿತಿಗೆ ಮರಳುತ್ತದೆ. ಮಳೆ ಶುರುವಾಗುವ ಮೊದಲೇ ಗುಂಡಿಗಳಿದ್ದ ಜಾಗಕ್ಕೆ ಡಾಂಬರು ತೇಪೆ ಹಾಕಿದ್ದರೆ ಮಳೆಗಾಲದಲ್ಲಿ ರಸ್ತೆ ಇಷ್ಟು ಹದಗೆಡುತ್ತಿರಲಿಲ್ಲ ಎಂಬ ಮಾತು ವಾಹನ ಸವಾರರದ್ದು.

    ಉರಿಯದ ಬೀದಿ ದೀಪ

    ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ರಾತ್ರಿ ಹೊತ್ತು ಬೀದಿ ದೀಪಗಳು ಉರಿಯುವುದಿಲ್ಲ. ಪಣಂಬೂರಿನಲ್ಲಿ ರಸ್ತೆ ಹದಗೆಟ್ಟಿರುವ ಸ್ಥಳದಲ್ಲೇ ಬೀದಿ ದೀಪಗಳು ಉರಿಯದ ಕಾರಣ ರಾತ್ರಿ ಹೊತ್ತಿನಲ್ಲಿ ಬಹಳ ಸಮಸ್ಯೆಯಾಗುತ್ತಿದೆ. ಗುಂಡಿ ಇರುವುದು ಆರಿವಾಗದೆ ಹಲವು ದ್ವಿಚಕ್ರ ವಾಹನಗಳು ಇಲ್ಲಿ ಪಲ್ಟಿಯಾಗಿವೆ. ಕೆಲವೆಡೆ ಬೀದಿ ದೀಪಗಳು ಬಹಳ ಮಂಕಾಗಿ ಉರಿಯುತ್ತಿವೆ.

    ಬಿ.ಸಿ.ರೋಡ್-ಶಿರಾಡಿ ಸಂಚಾರ ದೇವರಿಗೇ ಪ್ರೀತಿ

    ಬೆಂಗಳೂರಿನ ನೆಲಮಂಗಲದಿಂದ ಹಾಸನದವರೆಗೆ ಚತುಷ್ಪಥ ರಸ್ತೆ ಮಾಡಲಾಗಿದೆ. ಇದನ್ನು ಮಂಗಳೂರುವರೆಗೂ ವಿಸ್ತರಿಸುವ ಯೋಜನೆ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ-75ರ ಶಿರಾಡಿ ಘಾಟ್‌ನಲ್ಲಿ ಎರಡು ಹಂತದಲ್ಲಿ ಕಾಂಕ್ರೀಟ್ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಉಳಿದಂತೆ, ಹಾಸನದಿಂದ ಶಿರಾಡಿಯ ಮಾರನಹಳ್ಳಿಯವರೆಗೆ ಒಟ್ಟು 45 ಕಿ.ಮೀ. ಹಾಗೂ ಶಿರಾಡಿಯ ಅಡ್ಡಹೊಳೆಯಿಂದ ಬಂಟ್ವಾಳದವರೆಗೆ ಒಟ್ಟು 63 ಕಿ.ಮೀ. ಚತುಷ್ಪಥ ಯೋಜನೆ ಪ್ರಗತಿಯ ಹಂತದಲ್ಲಿದೆ. ಚತುಷ್ಪಥ ಕಾಮಗಾರಿಯಿಂದಾಗಿ ಶಿರಾಡಿಯಿಂದ ಉಪ್ಪಿನಂಗಡಿ- ಮಾಣಿ – ಕಲ್ಲಡ್ಕ ಮೂಲಕ ಬಿ.ಸಿ.ರೋಡ್ ತಲುಪುವುದೇ ಪ್ರಯಾಸವಾಗಿದೆ. ಬಹುತೇಕ ಕಡೆ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಿದರೂ, ಈ ಮಾರ್ಗದಲ್ಲಿ ರಸ್ತೆಗಿಂತ ಗುಂಡಿಗಳನ್ನೇ ಜಾಸ್ತಿ ದಾಟಿ ಬರಬೇಕಿದೆ. ಲಾರಿಗಳು ಇಲ್ಲಿ ಕೆಟ್ಟು ನಿಂತರಂತೂ ಕಿಲೋಮೀಟರ್ ಉದ್ದಕ್ಕೆ ವಾಹನಗಳ ಸರತಿ ಸಾಲಿರುತ್ತದೆ.

    ಸವಾರರಿಗೆ ಸಿಂಹಸ್ವಪ್ನ

    ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ-234ರ ಚಾರ್ಮಾಡಿ ಘಾಟ್ ವ್ಯಾಪ್ತಿಯ 12 ಕಿ.ಮೀ. ರಸ್ತೆ ಹಲವೆಡೆ ಉತ್ತಮವಾಗಿದ್ದರೂ ಘಾಟ್ ಕೆಳಭಾಗದ ಚಾರ್ಮಾಡಿ ವ್ಯಾಪ್ತಿಯಲ್ಲಿ ಹದಗೆಟ್ಟಿದೆ. ಮಳೆಯಿಂದಾಗಿ ರಸ್ತೆಗೆ ನೀರು ಹರಿದು ಮುಂಡಾಜೆ- ಉಜಿರೆ ಮಧ್ಯೆ ಅಲ್ಲಲ್ಲಿ ಹೊಂಡ ನಿರ್ಮಾಣಗೊಂಡಿದ್ದು, ಸವಾರರಿಗೆ ಜೀವಭಯ ಕಾಡುತ್ತದೆ. ಬೆಳ್ತಂಗಡಿಯ ಲಾಲ- ಸಂತೆಕಟ್ಟೆ- ಗುರುವಾಯನಕೆರೆ ಮಧ್ಯೆ ರಸ್ತೆ ಸಂಚಾರ ಉತ್ತಮವಾಗಿದೆ. ಅದನ್ನು ಬಿಟ್ಟರೆ ಗುರುವಾಯನಕೆರೆಯಿಂದ ಮಡಂತ್ಯಾರ್‌ವರೆಗೆ ಅಲ್ಪಸ್ವಲ್ಪ ರಸ್ತೆ ಹಾಳಾಗಿದೆ. ಪುಂಜಾಲಕಟ್ಟೆ ಕೇಂದ್ರ ಭಾಗದಲ್ಲಿ ರಸ್ತೆ ಗುಂಡಿ ಬಿದ್ದು ಸಂಚಾರಕ್ಕೆ ಕಷ್ಟವಾಗುತ್ತಿದೆ. ಪುಂಜಾಲಕಟ್ಟೆಯಿಂದ ಬಿ.ಸಿ. ರೋಡ್‌ವರೆಗೆ ಅಭಿವೃದ್ಧಿಗೊಂಡಿರುವ ಹೆದ್ದಾರಿ ಸುಸ್ಥಿತಿಯಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts