More

    ಬೀದಿ ದೀಪಗಳ ನಿರ್ವಹಣೆಗೆ ನಿರ್ಲಕ್ಷ್ಯ; ಕಪ್ಪುಪಟ್ಟಿಗೆ ಗುತ್ತಿಗೆದಾರರ ಸೇರ್ಪಡೆ: ಸೊರಬ ಪುರಸಭೆ ವಿಶೇಷ ಸಭೆಯಲ್ಲಿ ನಿರ್ಣಯ

    ಸೊರಬ: ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ ಬೀದಿ ದೀಪಗಳ ನಿರ್ವಹಣೆಗೆ ವಿಫಲರಾಗಿರುವ ಮತ್ತು ಈ ಹಿಂದೆ ಬೀದಿ ದೀಪಗಳ ನಿರ್ವಹಣೆಗೆ ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಅಧ್ಯಕ್ಷ ಈರೇಶ್ ಮೇಸ್ತ್ರಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪುರಸಭೆಯ ವಿಶೇಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
    ಕಪ್ಪುಪಟ್ಟಿಗೆ ಸೇರಿಸಿದ ಗುತ್ತಿಗೆದಾರರಿಗೆ ಪುನಃ ಟೆಂಡರ್ ಕೊಡದಂತೆ ಈ ಹಿಂದೆ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈಗ ಅವರು ಪುನಃ ಕಾಮಗಾರಿ ಟೆಂಡರ್‌ಗಳಿಗೆ ಅರ್ಜಿ ಹಾಕಿದ್ದಾರೆ. ಅವರಿಗೆ ಗುತ್ತಿಗೆ ಕೊಡಬೇಕೋ? ಬೇಡವೋ? ಎಂಬ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಅಂತಿಮವಾಗಿ ಅಂತಹ ಗುತ್ತಿಗೆದಾರರಿಗೆ ಕಾಮಗಾರಿ ನೀಡದಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
    ಪುರಸಭೆಯ ಟ್ರ್ಯಾಕ್ಟರ್ ನ ಟ್ರಾಲಿ ಈ ಹಿಂದೆ ಕಳುವಾಗಿದ್ದು, ಈ ಸಂಬಂಧ ಪೋಲಿಸರಿಗೆ ದೂರು ನೀಡಲಾಗಿತ್ತು. ಆದರೆ ಪೊಲೀಸ್ ಇಲಾಖೆಯಿಂದ ಸೂಕ್ತ ಸ್ಪಂದನೆ ದೊರೆಯದ ಕಾರಣ ಪುರಸಭಾ ಸದಸ್ಯರ ನಿಯೋಗವು ಎಸ್ಪಿ ಭೇಟಿ ಮಾಡಿ ಮನವಿ ಸಲ್ಲಿಸಲು ಸಭೆಯ ಒಪ್ಪಗೆ ಪಡೆಯಲಾಯಿತು.
    ಪುರಸಭೆಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಹಾಗೂ ಪಟ್ಟಣದ ವಿವಿಧೆಡೆ ಇರುವ ಮಳಿಗೆಗಳನ್ನು ಬಾಡಿಗೆಗೆ ನೀಡುವ ಟೆಂಡರ್ ಅನುಮೋದನೆಗಾಗಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ವಿವಿಧ ಅಭಿವೃದ್ಧಿ ಕಾಮಗಾರಿಗಳ ವಿಚಾರವಾಗಿ ಚರ್ಚೆ ನಡೆಸಲಾಯಿತು.
    ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಒಂದು ನಿಮಿಷ ಮೌನಾಚರಣೆ ನಡೆಸಿ ಸಂತಾಪ ಸೂಚಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts