More

    ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ ಆಚರಣೆ

    ಶಿಗ್ಗಾಂವಿ(ಗ್ರಾ): ಮುಸ್ಲಿಂ ಸಮುದಾಯ ಇಲ್ಲದಿದ್ದರೂ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಹಿಂದುಗಳೇ ಭಕ್ತಿ ಭಾವದಿಂದ ಮೊಹರಂ ಹಬ್ಬ ಆಚರಿಸುವ ಮೂಲಕ ಭಾವೈಕ್ಯ ಮೆರೆಯುತ್ತಾ ಬಂದಿದ್ದಾರೆ.

    ಸುಮಾರು ವರ್ಷಗಳ ಹಿಂದೆ ಪ್ಲೇಗ್ ರೋಗಕ್ಕೆ ಹೆದರಿ ಹಲವು ಕುಟುಂಬಗಳು ಗ್ರಾಮ ತೊರೆದಿವೆ. ಅವರಲ್ಲಿ ಮುಸ್ಲಿಂ ಸಮುದಾಯದ ಎಲ್ಲ ಕುಟುಂಬಗಳು ಗ್ರಾಮ ತೊರೆದ ಕಾರಣ ಗ್ರಾಮದಲ್ಲಿ ಕೇವಲ ಮಸೀದಿ ಮಾತ್ರ ಇದೆ. ಸುಮಾರು ವರ್ಷಗಳಿಂದ ಹಿಂದುಗಳೇ ಮೊಹರಂ ಹಬ್ಬ ಆಚರಿಸುತ್ತಾ ಬಂದಿದ್ದಾರೆ.

    ಮೊಹರಂ ಹಬ್ಬದ ನಿಮಿತ್ತ ಹಿಂದುಗಳೇ ಪಾಂಜಾಗಳನ್ನು ಸ್ಥಾಪಿಸಿ ಭಕ್ತಿಯಿಂದ ಪೂಜೆ ನೆರವೇರಿಸುತ್ತಾರೆ. ಅಲ್ಲಿ ಅಲಾಯಿ ಕುಣಿ ತೋಡಿ ಅಲಾಯಿ ಗುಂಡಿಗೆ ಕಟ್ಟಿಗೆ ತಂದು ಬೆಂಕಿ ಹಾಕಿ ಉಪ್ಪು ಸುರಿದು ಹರಕೆ ತೀರಿಸುತ್ತಾರೆ. ಹಬ್ಬದ ಕೊನೆ ದಿನ ರಾತ್ರಿ ಪಾಂಜಾಗಳಿಗೆ ಪೂಜೆ ಸಲ್ಲಿಸಿ ಮುಸ್ಲಿಂ ಧರ್ಮದಂತೆ ಸಕ್ಕರೆ ಓದಿಸಿ, ಅಗ್ನಿಕುಂಡ ಹಾಯುವುದನ್ನು ನೆರವೇರಿಸುತ್ತಾರೆ. ಸುಮಾರು ದಶಕಗಳಿಂದ ಮೊಹರಂ ಹಬ್ಬದ ಆಚರಣೆಯಲ್ಲಿ ಗ್ರಾಮದ ಪ್ರತಿಯೊಬ್ಬರೂ ಸಕ್ರಿಯರಾಗಿರುವುದು ಇಲ್ಲಿಯ ವಿಶೇಷ.

    2015ರಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಮಸೀದಿಯನ್ನು ಹೊಸದಾಗಿ ನಿರ್ಮಿಸಿದ್ದಾರೆ. ಸ್ವಂತ ಖರ್ಚಿನಲ್ಲಿ ಮಸೀದಿ ಕಟ್ಟಿಸಿರುವುದು ಗ್ರಾಮದ ಇನ್ನೊಂದು ವಿಶೇಷ. ಮೊಹರಂ ಆಚರಣೆಯಿಂದ ಬದುಕಿನ ಎಲ್ಲ ಕಷ್ಟಗಳು ಕಳೆದು ಹೋಗುತ್ತವೆ. ಗ್ರಾಮದ ಜನರಿಗೆ ನೆಮ್ಮದಿ ಸಿಕ್ಕಿದೆ. ಹಿಂದುಗಳ ಹಬ್ಬ ಎಷ್ಟು ಸಡಗರದಿಂದ ನಡೆಯತ್ತವೆಯೋ ಅಷ್ಟೇ ಸಡಗರದಿಂದ ಮೊಹರಂ ಆಚರಿಸುತ್ತೇವೆ. ಈ ಹಬ್ಬದ ಆಚರಣೆಯಲ್ಲಿ ಇಂದಿಗೂ ಗ್ರಾಮಸ್ಥರಲ್ಲಿರುವ ಸಂಭ್ರಮ ಕಿಂಚಿತ್ತೂ ಕುಂದಿಲ್ಲ ಎನ್ನುತ್ತಾರೆ ಗ್ರಾಮದ ಹಿರಿಯರಾದ ಗಂಗಾಧರ ಗಡ್ಡೆ, ಶಂಕರಗೌಡ ಪಾಟೀಲ, ಕಲ್ಲಪ್ಪ ಮೆಳ್ಳಳ್ಳಿ, ಶಿವಲಿಂಗಪ್ಪ ಕೊಳಲ ಇತರರು.

    ಪ್ರತಿವರ್ಷದಂತೆ ಪಕ್ಕದ ಹೋತನಹಳ್ಳಿಯ ತಾಜುದ್ದೀನ್ ಕಲ್ಯಾಣ ಅವರನ್ನು ಗ್ರಾಮಕ್ಕೆ ಆಹ್ವಾನಿಸಿ, ಶನಿವಾರ ಸಂಪ್ರದಾಯದಂತೆ ಪಾಂಜಾಗಳಿಗೆ ಪೂಜೆ ಸಲ್ಲಿಸಿದರು. ಸಂಜೆ ಹಬ್ಬ ಸಮಾಪ್ತಿಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts