More

    ಕಲಿಸಲು ಸಕಲ ಸವಲತ್ತು ಹೊಂದಿದ ವಿಭಿನ್ನ ವಿನ್ಯಾಸದ ಮುಡಿಪು ಕಾಲೇಜು ಕಟ್ಟಡ ಸಿದ್ಧ

    ಅನ್ಸಾರ್ ಇನೋಳಿ ಉಳ್ಳಾಲ

    ಪಿಯು ಕಟ್ಟಡದಲ್ಲಿ ಶಿಫ್ಟ್ ರೂಪದಲ್ಲಿ ಆರಂಭಗೊಂಡ ಮುಡಿಪು ಪದವಿ ಕಾಲೇಜಿನ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಎಲ್ಲ ಸೌಕರ್ಯಗಳನ್ನು ಹೊಂದಲಿರುವ ವಿಭಿನ್ನ ವಿನ್ಯಾಸದ ಕಟ್ಟಡ, ಜತೆಗೆ ಸುಂದರ ರಸ್ತೆಯೂ ವಿದ್ಯಾರ್ಥಿಗಳ ಆಗಮನಕ್ಕೆ ಕಾಯುತ್ತಿದೆ.

    ರಾಜ್ಯ ಸರ್ಕಾರ 12 ವರ್ಷಗಳ ಬಳಿಕ ಅಂದರೆ 2014ರಲ್ಲಿ ಮುಡಿಪುವಿನಲ್ಲಿರುವ ಕುರ್ನಾಡು ಪದವಿ ಕಾಲೇಜಿಗೆ ಅನುಮತಿ ನೀಡಿತ್ತು. ಇಲ್ಲಿರುವ ಪಿಯು ಕಾಲೇಜಿನಲ್ಲಿ ವಿಜ್ಞ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳು ಇರುವುದರಿಂದ ಅದಕ್ಕೆ ಹೊಂದಿಕೆಯಾಗುವಂತೆ ಪದವಿಯಲ್ಲಿ ಬಿಎಸ್ಸಿಗೂ ಅನುಮತಿಗಾಗಿ ಬೇಡಿಕೆ ಸಲ್ಲಿಸಲಾಗಿತ್ತಾದರೂ ಸರ್ಕಾರ ಅನುಮತಿ ನೀಡದ ಕಾರಣ ಬಿಎ ಮತ್ತು ಬಿಕಾಂಗೆ ವಿಭಾಗಗಳು ಮಾತ್ರ ಇವೆ. ಕಾಲೇಜು ಆರಂಭಗೊಂಡಾಗ ಕಟ್ಟಡ, ವ್ಯವಸ್ಥೆ ಇಲ್ಲದಿದ್ದರೂ 246 ವಿದ್ಯಾರ್ಥಿಗಳು ದಾಖಲಾಗಿದ್ದರು. ಬಳಿಕ ಒಂದು ಕೋಣೆಯ ಕಟ್ಟಡ ನಿರ್ಮಾಣವಾಗಿ, ಪಿಯು ಕಾಲೇಜಿನಲ್ಲೇ ತರಗತಿ ನಡೆಸಲಾಗಿತ್ತು. ಇದೇ ವ್ಯವಸ್ಥೆಯಲ್ಲಿ ಈಗಾಗಲೇ ನಾಲ್ಕು ಬ್ಯಾಚ್‌ಗಳು ಮುಗಿದಿವೆ.

    ಶಾಸಕರ ಬೇಡಿಕೆಯಂತೆ ಕಾಲೇಜಿಗೆ ನೂತನ ಕಟ್ಟಡಕ್ಕೆ ಮೊದಲ ಹಂತದಲ್ಲಿ ಸರ್ಕಾರ ಎರಡು ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು, 2018ರ ನವೆಂಬರ್ ಮೊದಲ ವಾರ ಶಿಲಾನ್ಯಾಸ ನಡೆದಿತ್ತು. ಆದರೆ ಗುತ್ತಿಗೆದಾರರು ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಸಿರಲಿಲ್ಲ. ಇದರಿಂದ ಶಾಸಕ ಯು.ಟಿ.ಖಾದರ್ ಅಸಮಾಧಾನಗೊಂಡು ಗುತ್ತಿಗೆದಾರರು ಮತ್ತು ಇಂಜಿನಿಯರ್ ವಿರುದ್ಧ ಹರಿಹಾಯ್ದಿದ್ದರು. 2019ರ ಸೆಪ್ಟಂಬರ್‌ನಲ್ಲೇ ಮೊದಲ ಹಂತದ ಕಾಮಗಾರಿ ಮುಗಿಸಲು ಸೂಚಿಸಿದ್ದರು. ವಿವಿಧ ಕಾರಣಗಳಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿ ಕಳೆದ ವರ್ಷದ ಮಾರ್ಚ್‌ಗಾಗುವಾಗ ಕರೊನಾ ಕಾಟ ಶುರುವಾಯಿತು. ಆದರೂ ಕಾಲೇಜು ಅಭಿವೃದ್ಧಿ ಸಮಿತಿ ಮುತುವರ್ಜಿಯಿಂದ ಈಗ ನೆಲ ಅಂತಸ್ತಿನ ಕಾಮಗಾರಿ ಮುಗಿದಿದೆ.

    ಹೊಸ ಕಟ್ಟಡದಲ್ಲಿ ಕಲಿಯಲು ಸಜ್ಜು: ಪ್ರಸ್ತುತ ನಾಲ್ಕು ಕೋಟಿ ರೂ. ಮೊತ್ತದ ಕಾಮಗಾರಿ ಮುಗಿದಿದ್ದು, ಎರಡು ಕೋಟಿ ಲೋಕೋಪಯೋಗಿ ಇಲಾಖೆ ಮತ್ತು ಎರಡು ಕೋಟಿ ಹೌಸಿಂಗ್ ಬೋರ್ಡ್‌ನಿಂದ ನೀಡಲಾಗಿದೆ. ಸುತ್ತಲೂ ಕಟ್ಟಡ ಇದ್ದರೆ ಒಳಭಾಗದಲ್ಲಿ ಮೈದಾನವಿದ್ದು, ವೇದಿಕೆ, ಧ್ವಜಸ್ತಂಭ ಇದೆ. ನಾಲ್ಕು ಸ್ಮಾರ್ಟ್ ಕ್ಲಾಸ್ ಕೊಠಡಿಗಳು, ಆರು ತರಗತಿ ರೂಂ, ಕಂಪ್ಯೂಟರ್ ಲ್ಯಾಬ್, ವಿದ್ಯಾರ್ಥಿನಿಯರ ವಿಶ್ರಾಂತಿ ಕೊಠಡಿ, ಶಿಕ್ಷಕರ ಕೊಠಡಿಯೂ ಇದೆ. ಶಿಕ್ಷಕೇತರ ಸಿಬ್ಬಂದಿ ಕೊರತೆಯಿದ್ದರೂ ಶಿಕ್ಷಕರ ಕೊರತೆಯಿಲ್ಲ. ಎರಡು ವಿಭಾಗದಲ್ಲಿ 262 ವಿದ್ಯಾರ್ಥಿಗಳಿದ್ದು, ಎಲ್ಲರಿಗೂ ಟ್ಯಾಬ್ ವಿತರಿಸಲಾಗಿದೆ. ಸಣ್ಣಪುಟ್ಟ ಕೆಲಸ ಮಾತ್ರ ಬಾಕಿಯಿದ್ದು, ಹೊಸ ಕಟ್ಟಡದಲ್ಲಿ ಕಲಿಯಲು ವಿದ್ಯಾರ್ಥಿಗಳು ಸಿದ್ಧರಾಗಿದ್ದಾರೆ. ಮುಂದಕ್ಕೆ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುವ ನಿರೀಕ್ಷೆ ಇದೆ.

    ಲುಕ್ ನೀಡಿದ ರಸ್ತೆ: ಕಾಲೇಜು ಸಂಪರ್ಕಿಸಲು ಮುಡಿಪು ಗೋಪಾಲಕೃಷ್ಣ ಸಭಾಂಗಣ ಪಕ್ಕದಿಂದ ಹೋಗಲು ಕಾಲುದಾರಿ ಇದ್ದರೂ ರಸ್ತೆ ಇರಲಿಲ್ಲ. ಇಲ್ಲಿ ರಸ್ತೆ ನಿರ್ಮಿಸಲು ದೊಡ್ಡಮಟ್ಟದ ಅನುದಾನವೂ ಬೇಕಿತ್ತು. ಮುಡಿಪು ಸಂತ ಜೋಸೆಫ್ ಚರ್ಚ್ ರಸ್ತೆಯಾಗಿ ಕಾಲೇಜಿಗೆ ಹೋಗಬೇಕಾಗಿತ್ತು. ಇದನ್ನರಿತ ಇನ್ಫೋಸಿಸ್, ಸುಂದರ ರಸ್ತೆ ನಿರ್ಮಿಸಿಕೊಟ್ಟಿದ್ದು, ಕಾಲೇಜಿಗೆ ಹೊಸ ಲುಕ್ ನೀಡಿದೆ. ಕಟ್ಟಡದ ಸುತ್ತಲೂ ಆವರಣ ಗೋಡೆ ನಿರ್ಮಾಣವಾದರೆ ಮತ್ತಷ್ಟು ಕಳೆ ಬರಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

    ಐಟಿಐ ಬೇಡಿಕೆ: ಇಂದಿನ ವಿದ್ಯಾರ್ಥಿಗಳು ಮುಂದಿನ ಜೀವನ ಸುಲಲಿತವಾಗಬೇಕಾದರೆ ಪ್ರಸ್ತುತ ದಿನಗಳಲ್ಲಿ ಶಿಕ್ಷಣದ ಜತೆಗೆ ವೃತ್ತಿ ಆಧಾರಿತ ತರಬೇತಿಯ ಅವಶ್ಯಕತೆಯೂ ಇದೆ. ಈ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಅಥವಾ ಸಮೀಪದಲ್ಲೇ ಇರುವ ಕೈರಂಗಳ ಗ್ರಾಮದಲ್ಲಿ ವೃತ್ತಿ ಆಧಾರಿತ ತರಬೇತಿ ಕೇಂದ್ರ ಆರಂಭಿಸಬೇಕೆಂಬ ಬೇಡಿಕೆಯೂ ಇದೆ. ಶಾಸಕ ಖಾದರ್ ಅವರೂ ಬೇಡಿಕೆಗೆ ಮನ್ನಣೆ ನೀಡಿದ್ದು, ಶಿಕ್ಷಣದ ಜತೆ ವೃತ್ತಿ ತರಬೇತಿ ಒದಗಿಸಲು ಉತ್ಸುಕರಾಗಿದ್ದಾರೆ.

    ಬಡವರು, ಮಧ್ಯಮ ವರ್ಗದ ಶಿಕ್ಷಣದ ದೃಷ್ಟಿಯಿಂದ ಸುಸಜ್ಜಿತ ಪದವಿ ಕಾಲೇಜು ನಿರ್ಮಾಣ ಶಾಸಕರು, ನಮ್ಮೆಲ್ಲರ ಕನಸಿನ ಕೂಸು. ಮುಂದಕ್ಕೆ ಬಿಎಸ್ಸಿ ಮತ್ತು ವಿಜ್ಞಾನ ಲ್ಯಾಬ್‌ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮೇಲ್ತಂತಸ್ತಿನ ಕಟ್ಟಡ ಕಾಮಗಾರಿ, ಆವರಣ ಗೋಡೆ ನಿರ್ಮಾಣ ಆಗಬೇಕು. ಈ ನಿಟ್ಟಿನಲ್ಲಿ ಹಲವು ಬಾರಿ ಬೆಂಗಳೂರಿಗೆ ಹೋಗಿ ಶಿಕ್ಷಣ ಸಚಿವರಲ್ಲಿ ಮನವಿ ಮಾಡಲಾಗಿದೆ. ಮತ್ತೆ ಮನವಿ ಮಾಡುತ್ತೇವೆ.

    ಪ್ರಶಾಂತ್ ಕಾಜವ
    ಅಧ್ಯಕ್ಷ, ಕಾಲೇಜು ಅಭಿವೃದ್ಧಿ ಸಮಿತಿ

    ಬಿಎ, ಬಿಕಾಂ ಶಿಕ್ಷಣಕ್ಕೆ ಬೇಕಾದ ಎಲ್ಲ ಸವಲತ್ತುಗಳೂ ಇವೆ, ವಿಜ್ಞಾನ ತರಗತಿ, ಜತೆಗೆ ಸ್ನಾತಕೋತ್ತರ ವಿಭಾಗದ ಅವಶ್ಯಕತೆ ಇದೆ. ಕಾಲೇಜು ಈ ವರ್ಷ ನ್ಯಾಕ್ ಮಾನ್ಯತೆ ಹೋಗಲಿದೆ. ವೃತ್ತಿಪರ ಕೋರ್ಸ್ ಆರಂಭಿಸುವ ಬಗ್ಗೆಯೂ ಶಾಸಕರು ಯೋಚಿಸಿದ್ದು ಆ ಬಗ್ಗೆ ಮುಂದಕ್ಕೆ ಅಗತ್ಯ ಸೌಕರ್ಯ ಬರುವ ನಿರೀಕ್ಷೆ ಹೊಂದಲಾಗಿದೆ.

    ಗಿರಿಧರ್ ರಾವ್
    ಕಾಲೇಜು ಪ್ರಾಂಶುಪಾಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts