More

    ರಾಜ್ಯ ಬೊಕ್ಕಸಕ್ಕೆ ಅಪಾರ ನಷ್ಟ

    ಮುಧೋಳ: ಒಂದೂವರೆ ವರ್ಷದ ಅವಧಿಯಲ್ಲಿ ಎರಡು ಬಾರಿ ಎದುರಾದ ಪ್ರವಾಹ ಹಾಗೂ ಕೋವಿಡ್ ಕಾರಣ ತೆರಿಗೆ ಸಂಗ್ರಹದಲ್ಲಿ ಆಗಿರುವ ಕೊರತೆಯಿಂದ ರಾಜ್ಯದ ಬೊಕ್ಕಸಕ್ಕೆ ಅಪಾರ ನಷ್ಟವಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ಮುಗಳಖೋಡ ಗ್ರಾಮ ವ್ಯಾಪ್ತಿಯಲ್ಲಿ 20 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಘಟಪ್ರಭಾ ಎಡದಂಡೆ ಕಾಲುವೆಗೆ ನೂತನವಾಗಿ ನಿರ್ಮಿಸಿರುವ ಸೇತುವೆ ಶನಿವಾರ ಉದ್ಘಾಟಿಸಿ ಮಾತನಾಡಿದರು.

    ಆದಾಯ ಕೊರತೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕನಸಿನ ಮಾದರಿ ರಾಜ್ಯ ನಿರ್ಮಾಣಕ್ಕೆ ತೊಂದರೆ ಆಗಿದೆ. ಈಗ ಪರಿಸ್ಥಿತಿ ಸುಧಾರಿಸುತ್ತಿದ್ದು, ಶೀಘ್ರ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಗಲಿದೆ ಎಂದರು.

    ಏಪ್ರಿಲ್ ಅಂತ್ಯದ ವೇಳೆಗೆ ತಾಲೂಕಿನಲ್ಲಿ ರಸ್ತೆ ನಿರ್ಮಾಣ ಸೇರಿ ಬೇರೆ ಬೇರೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮುಗಳಖೋಡ ಗ್ರಾಮದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಮನೆ ಮನೆಗೆ ಕುಡಿಯುವ ನೀರಿನ ನಳದ ಸಂಪರ್ಕ ಕಲ್ಪಿಸುವ ಕಾಮಗಾರಿ ಶೀಘ್ರ ಕೈಗೆತ್ತಿಕೊಳ್ಳಲಾಗುವುದು. ಗ್ರಾಮಸ್ಥರ ಮನವಿಯಂತೆ ಮುಗಳಖೋಡ-ಶಿರೋಳ ಸೇರಿ ಬೇರೆ ಬೇರೆ ರಸ್ತೆಗಳ ಕಾಮಗಾರಿಗಳನ್ನು ಅಧಿಕಾರಿಗಳು ಕೈಗೆತ್ತಿಕೊಳ್ಳಬೇಕು ಎಂದು ಹೇಳಿದರು.

    ಚಿನ್ಮಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕಾರಜೋಳ ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಇದ್ದು ಶೋಷಿತ ಸಮುದಾಯಗಳ ಪರವಾಗಿ ಆ ಸ್ಥಾನ ಅಲಂಕರಿಸಲಿ. ನುಡಿದಂತೆ ನಡೆವ ರಾಜಕಾರಣಿ ಅವರು. ಕ್ಷೇತ್ರದ ಅಭಿವೃದ್ಧಿಗೆ ಟೊಂಕ ಕಟ್ಟಿದ್ದಾರೆ ಎಂದರು.

    ಗ್ರಾಮ ಪಂಚಾಯಿತಿ ನೂತನ ಸದಸ್ಯರನ್ನು ಡಿಸಿಎಂ ಸನ್ಮಾನಿಸಿದರು. ಜಿಪಂ ಸದಸ್ಯ ಭೀಮನಗೌಡ ಪಾಟೀಲ, ಅಂಬಿಗರ ಚೌಡಯ್ಯ ನಿಗಮದ ನಿರ್ದೇಶಕ ನಾಗಪ್ಪ ಅಂಬಿ, ರಾಮಯ್ಯ ಸ್ವಾಮಿ, ಹನುಮಂತ ತುಳಸಿಗೇರಿ, ಪರಪ್ಪ ಜಗದಾಳ, ಸಂಗಪ್ಪ ಸುಣಗಾರ, ಬಸವರಾಜ ಜಮಖಂಡಿ, ಪರಸಪ್ಪ ಗಣಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts