More

    ಮುಧೋಳ ಭಂಡಾರ ಜಾತ್ರೆ ಸಂಪನ್ನ

    ಮುಧೋಳ: ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಭಂಡಾರ ಜಾತ್ರೆ ಎಂದೇ ಪ್ರಸಿದ್ಧವಾದ ನಗರದ ದ್ಯಾಮವ್ವ ದೇವಿ ಮತ್ತು ದುರ್ಗಾ ದೇವಿ ಜಾತ್ರೆ ಬುಧವಾರ ಸಂಪನ್ನಗೊಂಡಿತು.

    ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ದೇವಿಯರ ಮೂರ್ತಿಗಳನ್ನು ಮರಳಿ ದೇವಾಲಯದ ಗರ್ಭ ಗುಡಿಯೊಳಗೆ ಪ್ರತಿಷ್ಠಾಪನೆ ಮಾಡಿ ಜಾತ್ರೆಗೆ ತೆರೆ ಎಳೆಯಲಾಯಿತು. ಜತೆಗೆ ಸೀಮೆ ಲಕ್ಕವ್ವನನ್ನು ಬೀಳ್ಕೊಡಲಾಯಿತು.

    ಮಂಗಳವಾರ ನಾಲ್ಕನೇ ದಿನ ಗ್ರಾಮ ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಟ್ರ‍್ಯಾಕ್ಟರ್ ರ‍್ಯಾಲಿ ನಡೆಸಿ ಭಂಡಾರ ಎರೆಚುತ್ತ ಸಂಭ್ರಮಿಸಿದರು. ನಗರವೆಲ್ಲ ಭಂಡಾರ ಮಯವಾಗಿತ್ತು. ಯುವಕರು ಪರಸ್ಪರ ಎರೆಚುವ ದೃಶ್ಯಗಳು ಸಾಮಾನ್ಯವಾಗಿದ್ದವು. ಗಲ್ಲಿ ಗಲ್ಲಿಯ ಜನತೆ ಭಂಡಾರದಲ್ಲಿ ಮಿಂದೆದ್ದರು.

    ದೇವಿಯರಿಗೆ ಹರಕೆ ಹೊತ್ತ ಭಕ್ತರು ದೀರ್ಘ ದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು. ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಸಹಸ್ರಾರು ಭಕ್ತರು ಆಗಮಿಸಿ ದೇವಿಯರ ದರ್ಶನ ಪಡೆದು ಪುನೀತರಾದರು. ದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಹಿಡಿದರು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

    ಗಣ್ಯರು ಭಾಗಿ: ಜಾತ್ರೆ ನಿಮಿತ್ತ ಶುಕ್ರವಾರ ಹಾಗೂ ಮಂಗಳವಾರ ನಗರದ ಶಾಲೆ-ಕಾಲೇಜುಗಳಿಗೆ ಸ್ಥಾನಿಕ ರಜೆ ಘೋಷಣೆ ಮಾಡಲಾಗಿತ್ತು. ವರ್ತಕರು ಸ್ವಯಂ ಘೋಷಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಸಚಿವ ಗೋವಿಂದ ಕಾರಜೋಳ, ವಿಪ ಸದಸ್ಯರಾದ ಹಣಮಂತ ನಿರಾಣಿ, ಆರ್.ಬಿ.ತಿಮ್ಮಾಪುರ, ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ ಸೇರಿದಂತೆ ಗಣ್ಯರು ದೇವಿಯರ ದರ್ಶನ ಪಡೆದರು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸಿಪಿಐ ಅಯ್ಯನಗೌಡ ಪಾಟೀಲ, ಪಿಎಸ್‌ಐ ಸಂಗಮೇಶ ಹೊಸಮನಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts