More

    ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ

    ಸೇಡಂ: ನಮ್ಮದು ಗಡಿ ಭಾಗವಾಗಿದ್ದು, ಪೊಲೀಸ್ ಇಲಾಖೆ ಸಾಕಷ್ಟು ಕಟ್ಟೆಚ್ಚರ ವಹಿಸಿ ಕೆಲಸ ಮಾಡಬೇಕು. ಸಾರ್ವಜನಿಕರೊಂದಿಗೆ ಉತ್ತಮವಾಗಿ ವರ್ತಿಸುವುದನ್ನು ಕಲಿಯಿರಿ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಉದ್ಯಮಶೀಲತೆ, ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

    ಮುಧೋಳದಲ್ಲಿ ಪೊಲೀಸ್ ಠಾಣೆಯ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ. ಕ್ಷೇತ್ರದಲ್ಲಿ ಕಾನೂನು ಬಾಹಿರ ಸಂಪೂರ್ಣ ನಿಲ್ಲಬೇಕು. ಸಮಾಜ ದ್ರೋಹಿ ಕೆಲಸ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಅಪರಾಧ ಮಾಡಿದವರು ಯಾರೇ ಆಗಿರಲಿ, ತಕ್ಷಣ ಕ್ರಮ ಕೈಗೊಳ್ಳಿ. ಅಂದಾಗಲೇ ಕ್ರೈಂ ನಿಲ್ಲಲು ಸಾಧ್ಯ ಎಂದರು.

    ಈಗಲೂ ಜನರು ಪೊಲೀಸರನ್ನು ಕಂಡರೆ ಭಯ ಬೀಳುತ್ತಾರೆ, ಠಾಣೆಗೆ ಬರಲು ಹೆದರುತ್ತಾರೆ. ಈ ನಿಟ್ಟಿನಲ್ಲಿ ಪೊಲೀಸರು ಜನರೊಂದಿಗೆ ಗೌರವದಿಂದ ವರ್ತಿಸಬೇಕು. ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಸಮಾಜದ ಸ್ವಾಸ್ತ್ಯ ಹಾಳು ಮಾಡುವವರಿಗೆ ಪೊಲೀಸ್ ಭಾಷೆಯಲ್ಲಿ ಪಾಠ ಕಲಿಸಿ ಎಂದು ಸಲಹೆ ಸೂಚನೆ ನೀಡಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಾತನಾಡಿ, ಮುಧೋಳದಲ್ಲಿ ೧೯೮೩ರಲ್ಲಿ ಪೊಲೀಸ್ ಠಾಣೆ ನಿರ್ಮಿಸಲಾಗಿತ್ತು. ತುಂಬಾ ಹಳೆಯ ಕಟ್ಟಡವಾಗಿದ್ದು, ಸಂಪೂರ್ಣ ಶಿಥಿಲಾವಸ್ತೆ ತಲುಪಿದೆ. ಇದೀಗ ಸುಮಾರು ೧.೪೬ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿರುವುದು ಖುಷಿ ತಂದಿದೆ. ಪೊಲೀಸರಿಗೂ ಅನುಕೂಲವಾಗಿದ್ದು, ಜವಾಬ್ದಾರಿ ಹೆಚ್ಚಾಗಿದೆ. ಕಾನೂನು, ಸುವ್ಯವಸ್ಥೆ ಹದಗೆಡದಂತೆ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜಿಬಾಯಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ, ಭೂದಾನಿ ಮಧುಸೂಧನರೆಡ್ಡಿ ಮಾಲಿಪಾಟೀಲ್, ತಹಸೀಲ್ದಾರ್ ಶಿವಾನಂದ ಮೇತ್ರೆ, ಚಿಂಚೋಳಿ ಡಿವೈಎಸ್‌ಪಿ ಸಂಗಮನಾಥ ಹಿರೇಮಠ, ಎಇ ಶ್ರೀದೇವಿ ಪಾಟೀಲ್, ಸಿಪಿಐಗಳಾದ ಮಂಜುನಾಥ (ಸೇಡಂ), ಎಲ್.ಎಂ.ಗೌಂಡಿ (ಸುಲೇಪೇಟ), ಮುಧೋಳ ಪಿಐ ದೌಲತ್ ಎನ್.ಕುರಿ ಇತರರಿದ್ದರು.

    ತಾಲೂಕು ಸೇರಿ ಜಿಲ್ಲೆಯಲ್ಲಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅಪರಾಧ ಚಟುವಟಿಕೆ ತಡೆಯಲು ಯಾರ ಒತ್ತಡವೂ ಇಲ್ಲ. ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದು, ಅದರ ಬಳಕೆ ಮಾಡಿಕೊಳ್ಳಿ. ಗಡಿ ಭಾಗದಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವಲ್ಲಿ ಮುಧೋಳ ಠಾಣೆ ಪ್ರಮುಖ ಪಾತ್ರ ವಹಿಸಲಿದೆ.
    | ಡಾ.ಶರಣಪ್ರಕಾಶ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts