More

    ಹಿಟ್ನಳ್ಳಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸ್ಥಳಾಂತರಿಸಿ

    ಮುದ್ದೇಬಿಹಾಳ: ವಿಜಯಪುರ ತಾಲೂಕಿನ ಹಿಟ್ನಳ್ಳಿಯಲ್ಲಿರುವ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸ್ಥಳಾಂತರ ವಿಷಯವೀಗ ಹೋರಾಟದ ಕಾವು ಪಡೆದುಕೊಂಡಿದೆ.

    ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಮುದ್ದೇಬಿಹಾಳ ತಾಲೂಕಿಗೆ ಸ್ಥಳಾಂತರಗೊಳ್ಳಲೇಬೇಕೆಂದು ವಿವಿಧ ಸಂಘಟನೆ ನಾಯಕರು, ರಾಜಕೀಯ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಧ್ವನಿ ಎತ್ತಿದ್ದಾರೆ.

    ಪಟ್ಟಣದಲ್ಲಿ ಗುರುವಾರ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸ್ಥಳಾಂತರದ ವಿಷಯವನ್ನಿಟ್ಟುಕೊಂಡೇ ಒಂದು ಸುದ್ದಿಗೋಷ್ಠಿ, ಎರಡು ಮನವಿ ಸಲ್ಲಿಕೆ ಆಗಿವೆ. ಪಟ್ಟಣದ ವಿವಿಧ ರೈತಪರ, ಪ್ರಗತಿಪರ ಸಂಘಟನೆ ಮುಖಂಡರು ಬಸವೇಶ್ವರ ವೃತ್ತದಿಂದ ಮಿನಿವಿಧಾನಸೌಧದವರೆಗೆ ಪಾದಯಾತ್ರೆ ನಡೆಸಿ ತಹಸೀಲ್ದಾರ್ ಮೂಲಕ ಕೃಷಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

    ರೈತ ಸಂಘಟನೆ ಮುಖಂಡರಾದ ಅರವಿಂದ ಕೊಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ಧನಗೌಡ ಬಿರಾದಾರ, ನ್ಯಾಯವಾದಿ ಕೆ.ಬಿ.ದೊಡಮನಿ, ಶೇಖರಗೌಡ ಬಿರಾದಾರ ಮಾತನಾಡಿ, ಇಂಡಿಯಲ್ಲಿ ಕೃಷಿ ವಿಜ್ಞಾನ ಕೇಂದ್ರ, ಸಿಂದಗಿಯಲ್ಲಿ ಕೃಷಿ ಸಂಶೋಧನಾ ಕೇಂದ್ರಗಳಿವೆ. ವಿಜಯಪುರದ ತಿಡಗುಂದಿ ಬಳಿ ತೋಟಗಾರಿಕೆ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಇದೆ. ಹೀಗಿರುವಾಗ ಬೇರೆ ತಾಲೂಕಿನ ರೈತ ಮುಖಂಡರು ನಿಮ್ಮದೇ ಸಹೋದರರಿಗೆ ಅನುಕೂಲವಾಗುವ ಕೇಂದ್ರದ ಸ್ಥಳಾಂತರಕ್ಕೆ ಯಾರದ್ದೋ ಒತ್ತಡಕ್ಕೆ ಒಳಗಾಗಿ ವಿರೋಧಿಸಬೇಡಿ ಎಂದು ಮನವಿ ಮಾಡಿದರು. ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಕ್ಕೆ ಬೇಕಾದ ಎಲ್ಲ ಮೂಲಸೌಕರ್ಯಗಳು ಮುದ್ದೇಬಿಹಾಳದಲ್ಲಿದ್ದು, ಧಾರವಾಡದ ಕುಲಪತಿಗಳಿಗೆ, ಸಿಎಂ ಅವರಿಗೆ ಒತ್ತಡ ಹೇರಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ನಿಡಗುಂದಿ, ಮುದ್ದೇಬಿಹಾಳ, ತಾಳಿಕೋಟೆ ತಾಲೂಕುಗಳ ರೈತರಿಗೆ ಅನುಕೂಲ ಒದಗಿಸಿಕೊಡಲು ಸಂಬಂಧಿಸಿದವರು ಅಡ್ಡಗಾಲು ಹಾಕಬಾರದು ಎಂದು ಹೇಳಿದರು.

    ಶಿರಸ್ತೆದಾರ್ ವೀರೇಶ ತೊನಶ್ಯಾಳ ಅವರಿಗೆ ಮನವಿ ಸಲ್ಲಿಸಿದರು. ಕರವೇ ಪ್ರವೀಣಶೆಟ್ಟಿ ಬಣದ ಅಧ್ಯಕ್ಷ ಅರುಣ ಪಾಟೀಲ, ಅಂಗವಿಕಲರ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಕೆ. ಘಾಟಿ, ಪ್ರಗತಿಪರ ರೈತ ಮುಖಂಡ ಅಯ್ಯಪ್ಪ ಬಿದರಕುಂದಿ, ಅಮೀರ ನಂದವಾಡಗಿ ಮತ್ತಿತರರಿದ್ದರು.

    ರೈತ ಮುಖಂಡರ ನಿಯೋಗದಿಂದ ನಡಹಳ್ಳಿ ಭೇಟಿ
    ಪಟ್ಟಣದಲ್ಲಿರುವ ಶಾಸಕರ ನಿವಾಸಕ್ಕೆ ತೆರಳಿದ ಪ್ರಗತಿಪರ ಹಾಗೂ ರೈತ ಸಂಘಟನೆಗಳ ಮುಖಂಡರ ನಿಯೋಗ ಗುರುವಾರ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರನ್ನು ಭೇಟಿಯಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸ್ಥಳಾಂತರಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು.

    ಕೃಷಿಕ ಸಮಾಜದ ಜಿಲ್ಲಾ ಮುಖಂಡ ವೆಂಕನಗೌಡ ಪಾಟೀಲ, ಮುದ್ದೇಬಿಹಾಳಕ್ಕೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸ್ಥಳಾಂತರಗೊಂಡಿದ್ದರೂ ಅಲ್ಲಿನ ಪ್ರೊೆಸರ್ ಒಬ್ಬರು ಎರಡು ಕಡೆ ಇನ್‌ಚಾರ್ಜ್ ಇದ್ದಾರೆ. ವರ್ಷಕ್ಕೆ 72 ಲಕ್ಷ ರೂ. ಅನುದಾನ ಕೃಷಿ ವಿಶ್ವವಿದ್ಯಾಲಯಕ್ಕೆ ಬರುತ್ತದೆ. ಅಲ್ಲಿನ ಕೆಲ ಪ್ರೊೆಸರ್‌ಗಳು ರೈತರ ಗುಂಪು ಕಟ್ಟಿಕೊಂಡು ಬೇರೆ ಬೇರೆ ಕಡೆಗಳಿಂದ ಮನವಿ ಕೊಡಿಸುತ್ತಾರೆ. ತೋಟಗಾರಿಕೆ ಕೇಂದ್ರ ತಿಡಗುಂದಿಯಲ್ಲಿದ್ದು, ಕೃಷಿ ವಿಜ್ಞಾನ ಕೇಂದ್ರ ವಿಜಯಪುರದಲ್ಲಿದೆ. ಅಲ್ಲಿನ ವಿಜ್ಞಾನಿಗಳು ಮುದ್ದೇಬಿಹಾಳಕ್ಕೆ ಈ ಕೇಂದ್ರ ಸ್ಥಳಾಂತರಗೊಳ್ಳಲು ಅಡ್ಡಗಾಲು ಹಾಕಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಶಾಸಕರು ಈ ಕೇಂದ್ರ ಸ್ಥಳಾಂತರದಿಂದ ಹಿಂದೆ ಸರಿಯಬಾರದು ಎಂದು ಒತ್ತಾಯಿಸಿದರು.

    ಕೇಂದ್ರ ಸ್ಥಳಾಂತರಕ್ಕೆ ಪತ್ರ ಬರೆದಿದ್ದ ಶಾಸಕ ನಡಹಳ್ಳಿ
    ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ 2019 ನ.12ರಂದು ಅಂದಿನ ಕೃಷಿ ಸಚಿವರು, ಇಂದಿನ ಡಿಸಿಎಂ, ಸಾರಿಗೆ ಸಚಿವರಾಗಿರುವ ಲಕ್ಷ್ಮಣ ಸವದಿ ಅವರಿಗೆ ಪತ್ರ ಬರೆದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವನ್ನು ಮುದ್ದೇಬಿಹಾಳಕ್ಕೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದರು. ಈ ವಿಷಯವಾಗಿ ಶಾಸಕರ ಕಚೇರಿಯಿಂದ ಪತ್ರ ವ್ಯವಹಾರ ನಡೆದ ಬಗ್ಗೆ ಮಾಹಿತಿ ನೀಡಿದ ಆಪ್ತಸಹಾಯಕ ಬಾಬುರಾವ ಕುಲಕರ್ಣಿ, ಮುದ್ದೇಬಿಹಾಳ, ನಿಡಗುಂದಿ ಹಾಗೂ ತಾಳಿಕೋಟೆ ತಾಲೂಕಿನ ರೈತರಿಗೆ ಸುಧಾರಿತ ಬೇಸಾಯ ಕ್ರಮಗಳು ಮತ್ತು ಇತರ ಕೃಷಿ ಹಾಗೂ ಸಂಬಂಧಿತ ಸುಧಾರಿತ ತಂತ್ರಜ್ಞಾನದ ಕುರಿತು ಸರಿಯಾದ ತರಬೇತಿ, ಮಾಹಿತಿ ದೊರೆಯದೆ ತೊಂದರೆಯಾಗುತ್ತಿದೆ. ಕೂಡಲೇ ಹಿಟ್ನಳ್ಳಿಯಲ್ಲಿರುವ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವನ್ನು ಮುದ್ದೇಬಿಹಾಳಕ್ಕೆ ಸ್ಥಳಾಂತರಿಸಲು ಸಂಬಂಧಿಸಿದ ಸಚಿವರ ಗಮನಕ್ಕೆ ತಂದು ಮುದ್ದೇಬಿಹಾಳ ತಾಲೂಕಿಗೆ ತರಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.

    ಕೇಂದ್ರ ಕೇಳುವುದು ನಮ್ಮ ಹಕ್ಕು
    ಇದೇ ವಿಷಯವಾಗಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಕಿಸಾನ್ ಮೋರ್ಚಾ ಹಾಗೂ ತಾಲೂಕು ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು, ಮುದ್ದೇಬಿಹಾಳದಲ್ಲಿ ಕಾರ್ಯಾರಂಭ ಮಾಡಬೇಕಿದ್ದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ತಂತ್ರಗಾರಿಕೆ ಮತ್ತು ಕೆಲವರ ಲಾಬಿಯಿಂದ ವಿಜಯಪುರದಲ್ಲಿ ಆರಂಭಿಸಲಾಗಿದೆಯೇ ಹೊರತು ವಿಜಯಪುರದ ಕೇಂದ್ರವನ್ನು ಸ್ಥಳಾಂತರಿಸಲು ಕೇಳುತ್ತಿಲ್ಲ. ಇಂಡಿ ಭಾಗದ ರೈತ ಬಾಂಧವರಿಗೆ ಈ ಬಗ್ಗೆ ತಿಳಿದಿರಲಿಕ್ಕಿಲ್ಲ. ಸಂಘಟನೆಯೊಂದರ ಪದಾಧಿಕಾರಿಗಳು ಯಾರದ್ದೋ ಮಾತು ಕೇಳಿಕೊಂಡು ಕೇಂದ್ರ ಸ್ಥಳಾಂತರ ಬೇಡ ಎನ್ನುತ್ತಿರುವುದನ್ನು ಖಂಡಿಸುವುದಾಗಿ ಹೇಳಿದರು.

    ಕಿಸಾನ್ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಗಿರೀಶಗೌಡ ಪಾಟೀಲ, ರೈತ ಮೋರ್ಚಾ ಅಧ್ಯಕ್ಷ ಮಹಾಂತೇಶ ಗಂಜ್ಯಾಳ, ಮಹಾಂತಗೌಡ ಕಾಶಿನಕುಂಟಿ, ಕೃಷಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಗುರುರಾಜ ದೊಡ್ಡಿಹಾಳ, ಶ್ರೀಶೈಲ ದೊಡಮನಿ, ಮಹಾಂತೇಶ ಬೂದಿಹಾಳಮಠ, ರವೀಂದ್ರ ಬಿರಾದಾರ, ಶಿವು ಕಾಶಿನಕುಂಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts