More

    ಎರಡನೇ ಡೋಸ್ ಹಾಕಿಸಿಕೊಳ್ಳದಿದ್ದರೂ ಪ್ರಮಾಣಪತ್ರ!

    ಮುದ್ದೇಬಿಹಾಳ: ಕೋವಿಡ್ ಎರಡನೇ ಲಸಿಕೆ ಹಾಕಿಸಿಕೊಳ್ಳದಿದ್ದರೂ ನೀವು ಎರಡನೇ ಡೋಸ್ ಹಾಕಿಸಿಕೊಂಡಿದ್ದು ಯಶಸ್ವಿಯಾಗಿದೆ. ನಿಮ್ಮ ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಹಲವಾರು ನಾಗರಿಕರ ಮೊಬೈಲ್‌ಗೆ ಸಂದೇಶಗಳು ಹರಿದು ಬರುತ್ತಿವೆ.

    ಕೋವಿಡ್ ಲಸಿಕೆಯನ್ನು ನಾಗರಿಕರು ಹಾಕಿಸಿಕೊಳ್ಳುವ, ಸರ್ಕಾರದಿಂದ ಉಚಿತವಾಗಿ ಲಸಿಕೆ ಕೊಡುವ ಕಾರ್ಯ ನಡೆದಿದೆ. ಅಲ್ಲದೆ, ಕರೊನಾ ಹೋಗಲಾಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಇಂತಹದ್ದರ ಮಧ್ಯೆ ಇಲಾಖೆಯ ಮೇಲಧಿಕಾರಿಗಳ ಒತ್ತಡವೋ, ನೀಡಿದ ಗುರಿ ಸಾಧನೆ ತೋರ್ಪಡಿಸಲು ಮಾಡುವ ಕೃತಕ ದಾಖಲೆಗಳ ಪ್ರದರ್ಶನವೋ ಅರ್ಥವಾಗದಿರುವ ಸಂಗತಿಯೊಂದು ಬೆಳಕಿಗೆ ಬಂದಿದೆ.

    ಪಟ್ಟಣದ ನಿವಾಸಿ ಪತ್ರಿಕಾ ವಿತರಕ ಈಶ್ವರಪ್ಪ ಹೆಬ್ಬಾಳ ಜೂ.8ರಂದು ಮೊದಲನೇ ಡೋಸ್ ಕೋವಿಶಿಲ್ಡ್ ಲಸಿಕೆ ಹಾಕಿಸಿಕೊಂಡಿದ್ದರು. ಮೂರು ತಿಂಗಳ ಅಂತರದ ನಂತರ ಎರಡನೇ ಡೋಸ್ ಹಾಕಿಸಿಕೊಳ್ಳಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರು ಲಸಿಕೆ ಹಾಕಿಸಿಕೊಂಡಿರಲಿಲ್ಲ. ಆದರೆ ಅ.19ರಂದು ಅವರ ಮೊಬೈಲ್‌ಗೆ ಸಂದೇಶವೊಂದು ಬಂದಿದ್ದು, ಎರಡನೇ ಡೋಸ್ ಲಸಿಕೆ ಹಾಕಿರುವುದು ಯಶಸ್ವಿಯಾಗಿದೆ ಎಂದು ತಿಳಿಸಲಾಗಿದೆ.

    ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ ಅವರನ್ನು ಸಂಪರ್ಕಿಸಲಾಗಿ, ಇದು ಕಂಪ್ಯೂಟರ್ ಆಪರೇಟರ್‌ಗಳು ದಾಖಲೆಗಳನ್ನು ಅಪಲೋಡ್ ಮಾಡುವಾಗ ಆಗಿರುವ ಪ್ರಮಾದ ಆಗಿದ್ದು, ಸರಿಪಡಿಸಲಾಗುತ್ತದೆ. ಅವರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗುತ್ತದೆ. ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

    ಮುದ್ದೇಬಿಹಾಳದ ನಿವಾಸಿ ಚೇತನ್ ಕೆಂಧೂಳಿ, ನಾನು ಬಾಗಲಕೋಟೆಯಲ್ಲಿದ್ದರೂ ಲಸಿಕೆಯನ್ನು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಹಾಕಿಸಿಕೊಂಡಿದ್ದೇನೆ ಎಂದು ಸಂದೇಶ ಕಳಿಸಿದ್ದರು. ಈ ರೀತಿಯ ಪ್ರಮಾದಗಳಿಂದ ಸಾರ್ವಜನಿಕರು ಗೊಂದಲಕ್ಕೊಳಗಾಗುತ್ತಾರೆ. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

    ತಪ್ಪುಗಳು ಆಗಾಗ ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಇದು ಸ್ಥಳೀಯ ಸಿಬ್ಬಂದಿ ತಪ್ಪ್ಪು. ಮತ್ತೊಮ್ಮೆ ಹೀಗೆ ಆಗದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುವುದು. ಮುಂದೆ ಸರಿಯಾಗಿ ಮೊಬೈಲ್ ಸಂಖ್ಯೆಗಳನ್ನು ದಾಖಲಿಸುವ ಸೂಚನೆ ನೀಡುತ್ತೇನೆ.
    ಪಿ.ಸುನೀಲಕುಮಾರ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts