More

    ಗುರುಗಳಿಗೆ ಶಿಷ್ಯಂದಿರ ಪಾದಪೂಜೆ

    ಮುದ್ದೇಬಿಹಾಳ: ತಮ್ಮ ಜೀವನದಲ್ಲಿ ಅಕ್ಷರ ಕಲಿಸಿ ಅನ್ನದ ದಾರಿ ಹೇಳಿಕೊಟ್ಟ ಗುರುಗಳಿಗೆ ಶಿಷ್ಯಂದಿರು ಗುರುವಂದನೆ ಕಾರ್ಯಕ್ರಮದಲ್ಲಿ ಪಾದಪೂಜೆ ಮಾಡುವ ಮೂಲಕ ಕೃತಜ್ಞತೆ ಸಮರ್ಪಿಸುವ ಕಾರ್ಯ ಮಾಡಿದರು.
    ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ಅರ್ಬನ್ ಬ್ಯಾಂಕ್ ಸಭಾ ಭವನದಲ್ಲಿ ವಿಬಿಸಿ ಪ್ರೌಢಶಾಲೆಯ 1984-85ನೇ ಹಳೆಯ ವಿದ್ಯಾರ್ಥಿಗಳ ಸ್ನೇಹಸಾಗರ ಗೆಳೆಯರ ಬಳಗದ ನೇತೃತ್ವದಲ್ಲಿ ನಿವೃತ್ತ ಶಿಕ್ಷಕರಿಗೆ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಈ ಸನ್ನಿವೇಶ ಕಂಡು ಬಂದಿತು.
    ವೇದಿಕೆಗೆ ಬರುವ ಮುನ್ನ ಪ್ರತಿಯೊಬ್ಬ ಹಿರಿಯ ಶಿಕ್ಷಕರಿಗೆ ಪಾದಪೂಜೆ ಮಾಡಿ ಹೂ ಚೆಲ್ಲಿ ನಮಸ್ಕರಿಸಿ ವೇದಿಕೆಗೆ ಕರೆತಂದಿದ್ದು ವಿಶೇಷವಾಗಿತ್ತು. ಗುರುವಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಎಸ್.ಬಿ. ಕನ್ನೂರ, ನಿವೃತ್ತಿ ಜೀವನ ನಡೆಸುತ್ತಿರುವ ಹಿರಿಯ ಜೀವಗಳಿಗೆಲ್ಲ ಈಗ ಬೇಕಿರುವುದು ಪ್ರೀತಿ, ಮಮತೆ ಹಾಗೂ ಕಾಳಜಿ ತುಂಬಿದ ಹೃದಯಗಳು. ಅಂತಹ ಹೃದಯಗಳು ನಮ್ಮ ಶಿಷ್ಯಂದಿರ ರೂಪದಲ್ಲಿ ಸಿಕ್ಕಿರುವುದು ನಮ್ಮ ಭಾಗ್ಯ ಎಂದರು.

    ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರ ಆಪ್ತಸಹಾಯಕ ಸಂಜಯ ಬೆಟಗೇರಿ ಮಾತನಾಡಿ, ನನ್ನ ತಂದೆ ನಾನು ತಹಸೀಲ್ದಾರ್ ಆಗಬೇಕು ಎಂದು ಹೇಳುತ್ತಿದ್ದರು. ಆದರೆ, ಗುರುಗಳ ಆಶೀರ್ವಾದ, ಮಾಗದರ್ಶನದಿಂದ ವಿಧಾನಸೌಧದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಆಪ್ತ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
    ಇಟಗಿ ಮೇಲುಗದ್ದುಗೆ ಮಠದ ಗುರುಶಾಂತವೀರ ಶಿವಾಚಾರ್ಯರು ಮಾತನಾಡಿ, ಶಿಕ್ಷಕರ ವೃತ್ತಿ ಪವಿತ್ರ. ಅಂತಹ ಹಿರಿಯ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವುದು ಸ್ತುತ್ಯಾರ್ಹ ಕಾರ್ಯ. ಆರ್ಥಿಕವಾಗಿ ಆರೋಗ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಶಿಕ್ಷಕರ ನೆರವಿಗೆ ಇಂತಹ ಸ್ನೇಹ ಬಳಗಗಳು ಮುಂದಾಗಬೇಕು ಎಂದು ಹೇಳಿದರು.

    ನಿವೃತ್ತ ಶಿಕ್ಷಕರಾದ ಎ.ಸಿ. ಹಿರೇಮಠ, ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಎಂ.ಎಸ್. ಕವಡಿಮಟ್ಟಿ, ಸಿ.ವೈ. ಪತ್ತಾರ, ಪೊಲೀಸ್ ಅಧಿಕಾರಿ ಆರ್.ಎಸ್. ಬಿರಾದಾರ ಮಾತನಾಡಿದರು. ನಿವೃತ್ತ ಶಿಕ್ಷಕರಾದ ವೈ.ಬಿ. ಹೊಸಗಾಣಿಗೇರ, ವಿ.ಎಂ. ಉಜ್ಜಯನಿಮಠ, ಜಿ.ಆರ್. ನಾವದಗಿ, ಎ.ಎಸ್. ಬಳೂರಗಿ, ಕೆ.ಪಿ. ಹಿರೇಮಠ, ಸಿ.ಎಂ. ಕಾರಜೋಳ, ಟಿ.ಡಿ. ರಾಯಚೂರ, ಎಸ್.ಎಸ್. ನಾಟಿಕಾರ, ಎಸ್.ಬಿ.ನಾಶಿ, ಎಸ್.ಎ. ಚವಾಣ್, ಜಿ.ಎನ್. ಪಂಪಣ್ಣವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts