More

    ಡಿಸಿ, ಎಸಿಗೆ ದೂರು ನೀಡಿದ ಅಭ್ಯರ್ಥಿಗಳು

    ಮುದ್ದೇಬಿಹಾಳ: ಗ್ರಾಮ ಪಂಚಾಯಿತಿ ಚುನಾವಣಾಧಿಕಾರಿಗಳಿಗೆ ಸರಿಯಾದ ತರಬೇತಿ ನೀಡದೆ ಕರ್ತವ್ಯಕ್ಕೆ ನಿಯೋಜಿಸಿದ್ದರ ಪರಿಣಾಮ ಮತ್ತೊಂದು ಎಡವಟ್ಟಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು,ಅವರ ಬೆಂಬಲಿಗರು ಮಂಗಳವಾರ ಇಲ್ಲಿನ ತಹಸೀಲ್ದಾರ್ ಕಚೇರಿಗೆ ಆಗಮಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
    ತಾಲೂಕಿನ ಢವಳಗಿ ಗ್ರಾಪಂ ವ್ಯಾಪ್ತಿಯಲ್ಲಿ 6 ವಾರ್ಡ್ (ಢವಳಗಿ, ಅಗಸಬಾಳ, ಚೊಂಡಿ, ಹಳ್ಳೂರ ಗ್ರಾಮಗಳು)ಗಳ 18 ಸದಸ್ಯರ ಪೈಕಿ ಚೊಂಡಿ, ಅಗಸಬಾಳದ ಎರಡು ಸ್ಥಾನ ಅವಿರೋಧ ಆಯ್ಕೆ ಆಗಿದ್ದರಿಂದ 16 ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆ ಆಗಿದೆ. ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಸ್ಪರ್ಧಿಸಿರುವ ಕೆಲವರ ಹೆಸರು ಬ್ಯಾಲಟ್ ಪೇಪರ್‌ನಲ್ಲಿ ಮೊದಲಿಗೆ ಬರುವಂತೆ ಮಾಡುವಲ್ಲಿ ಕಸರತ್ತು ಮಾಡಲಾಗಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.

    ಢವಳಗಿಯ 1ನೇ ಮತಕ್ಷೇತ್ರದಲ್ಲಿ ಹಣಮವ್ವ ಹರಿಜನ, 2ನೇ ಮತಕ್ಷೇತ್ರಕ್ಕೆ ಸಂಪತ್ತಕುಮಾರ ಕೋರಿ, ಸುಭಾಷ ಗುಡಿಮನಿ, ಮಲ್ಲಮ್ಮ ನಾಗರಾಳ, ಆಶಾಬಿ ನದ್ಾ ಎಂಬುವವರು ಇದೇ ಹೆಸರಲ್ಲಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಚಿಹ್ನೆ ಹಂಚಿಕೆ ಮಾಡಿ ಪ್ರಪತ್ರ 10ನ್ನು ತಯಾರಿಸುವಾಗ ಹಣಮವ್ವ ಹೆಸರಿನ ಹಿಂದೆ ಅಮ್ಮಾ, ಸಂಪತ್ತಕುಮಾರ ಹೆಸರಿನ ಹಿಂದೆ ಅಗಸ್ತ್ಯ ಸುಭಾಷ ಹೆಸರಿನ ಹಿಂದೆ ಅದಿ, ಮಲ್ಲಮ್ಮ ಹೆಸರಿನ ಹಿಂದೆ ಅನು, ಆಶಾಬಿ ಹೆಸರಿನ ಹಿಂದೆ ಅಪಸಾನ್ ಎನ್ನುವುದನ್ನು ಹೆಚ್ಚುವರಿಯಾಗಿ ಸೇರಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಮೊದಲು ಬರುವಂತೆ ಕೆಲವರು ಚುನಾವಣಾಧಿಕಾರಿ ಆರ್.ಕೆ. ವಾಲಿಕಾರ ಮೇಲೆ ಒತ್ತಡ ಹೇರಿದ್ದಾರೆ ಎಂದು ಅವರು ದೂರಿದರು.
    ಅಭ್ಯರ್ಥಿಗಳು, ಬೆಂಬಲಿಗರಾದ ವಿನೋದ ಕೊಣ್ಣೂರ, ವಿಜಯಕುಮಾರ ಪಾಟೀಲ, ಕಾಶಿರಾಯ ಚಲವಾದಿ, ಬಸವರಾಜ ಯರಿಕ್ಯಾಳ, ಶರಣಪ್ಪ ಗುಡಿಮನಿ, ನಾಗೇಂದ್ರ ಹಳ್ಳೂರ, ಶಿವಾನಂದ ಸುರಪುರ, ಬಸವರಾಜ ಬ್ಯಾಲ್ಯಾಳ, ರಾಜಶೇಖರ ಪೂಜಾರ, ಮಹಿಬೂಬ ಬಾಗವಾನ್, ಬಸನಗೌಡ ಪಾಟೀಲ, ಬಸವರಾಜ ಬಿರಾದಾರ, ಶಂಕರ ಬೀರಗೊಂಡ, ಮಡಿವಾಳಪ್ಪ ಬಾಗೇವಾಡಿ, ಚಂದ್ರಕಾಂತ ಪಾಟೀಲ, ಪ್ರಕಾಶ ದಡ್ಡೇನವರ, ರಾಹುಲ್ ಚಲವಾದಿ, ಪಾವಡೆಪ್ಪ ಬೀರಗೊಂಡ, ಸುಭಾಷ ಮೇಲಿನಮನಿ, ಸೋಮಶೇಖರ ಮೇಟಿ ಗುಡಿಹಾಳ ಮತ್ತಿತರರು ಇದ್ದರು.

    ಎಸಿ, ತಹಸೀಲ್ದಾರ್‌ಗೆ ಲೋಪ ವಿವರಣೆ

    ಅಸಮಾಧಾನಗೊಂಡಿದ್ದ ಅಭ್ಯರ್ಥಿಗಳು ಚುನಾವಣೆ ವಿಭಾಗದ ಎದುರು ಗದ್ದಲ ಎಬ್ಬಿಸಿದ್ದರು. ಇದೇ ವೇಳೆ ತಹಸೀಲ್ದಾರ್ ಕಚೇರಿಗೆ ಉಪವಿಭಾಗಾಧಿಕಾರಿ ರಾಮಚಂದ್ರ ಗಡಾದೆ, ಪ್ರಭಾರ ತಹಸೀಲ್ದಾರ್ ಅನೀಲಕುಮಾರ ಢವಳಗಿ ಆಗಮಿಸಿದ್ದನ್ನು ಗಮನಿಸಿದ ಅಭ್ಯರ್ಥಿಗಳು, ಬೆಂಬಲಿಗರು ಅವರನ್ನು ಭೇಟಿ ಮಾಡಿ ಲೋಪವನ್ನು ವಿವರಿಸಿದರು.
    ಚುನಾವಣಾಧಿಕಾರಿ ಪ್ರಪತ್ರ 7ರಲ್ಲಿ ನಮೂದಿಸಿದ ಹೆಸರುಗಳ ಮೊದಲಿಗೆ ಕೆಲ ವ್ಯಕ್ತಿಗಳು, ಅಧಿಕಾರಿಗಳ ಒತ್ತಡದಿಂದ ಅನಗತ್ಯವಾಗಿ ಇಲ್ಲಸಲ್ಲದ ಹೆಸರು ನಮೂದಿಸಿ ಪ್ರಪತ್ರ 10ರ ಮತಪತ್ರದಲ್ಲಿ ಅನುಕ್ರಮವಾಗಿ ತಮ್ಮವೇ ಹೆಸರು ಮೇಲೆ ಬರುವಂತೆ ತಂತ್ರಗಾರಿಕೆ ಮಾಡಿದ್ದಾರೆ. ಅದಕ್ಕೆ ಢವಳಗಿ ಗ್ರಾಮಸ್ಥರ ವಿರೋಧವಿದ್ದು, ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಕೂಲಂಕುಷವಾಗಿ ಪರಿಶೀಲನೆ ಮಾಡಿ ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂದು ಆಗ್ರಹಿಸಿ ಸಾಮೂಹಿಕವಾಗಿ ಮನವಿ ಸಲ್ಲಿಸಿದರು.

    ವಿಚಾರಣೆ ನಡೆಸಿದ ಎಸಿ

    ಗ್ರಾಮಸ್ಥರ ಆರೋಪದ ಕುರಿತು ಉಪವಿಭಾಗಾಧಿಕಾರಿ ವಿಚಾರಿಸಿದರು. ಸಮರ್ಪಕ ಉತ್ತರ ನೀಡಲು ಚುನಾವಣಾಧಿಕಾರಿ ತಡವರಿಸಿದರು. ತಕ್ಷಣ ವಿಜಯಪುರದ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಅಲ್ಲಿರುವ ಚುನಾವಣೆ ತಜ್ಞರೊಬ್ಬರನ್ನು ಭೇಟಿಯಾಗಿ ಈ ಬಗ್ಗೆ ಸ್ಪಷ್ಟನೆ ಪಡೆದುಕೊಂಡು ಮುಂದುವರಿಯುವಂತೆ ಉಪವಿಭಾಗಾಧಿಕಾರಿಯವರು ಚುನಾವಣಾಧಿಕಾರಿಗೆ ನಿರ್ದೇಶನ ನೀಡಿದರು.

    ನಾನು ಚುನಾವಣೆ ನಿಯಮದ ಪ್ರಕಾರವೇ ಪ್ರಪತ್ರ 10ನ್ನು ತಯಾರಿಸಿದ್ದೇನೆ. ತರಬೇತಿ ನೀಡುವಾಗ, ಆರ್‌ಒ ಕೈಪಿಡಿಯಲ್ಲಿ ಅಭ್ಯರ್ಥಿಗಳು ಅಪೇಕ್ಷೆ ಪಡುವ ಹೆಸರುಗಳನ್ನೇ ಮತಪತ್ರದಲ್ಲಿ ಮುದ್ರಿಸಬೇಕು ಎನ್ನುವ ನಿಯಮವನ್ನು ಪಾಲಿಸಿದ್ದೇನೆ. ಪ್ರಪತ್ರ 10ರಲ್ಲಿರುವ ಹೆಸರುಗಳು ನಾಮಪತ್ರದಲ್ಲೂ ಇವೆ.
    ಆರ್.ಕೆ.ವಾಲಿಕಾರ, ಚುನಾವಣಾಧಿಕಾರಿ, ಢವಳಗಿ ಗ್ರಾಪಂ

    ಚುನಾವಣಾಧಿಕಾರಿ ಒತ್ತಡಕ್ಕೆ ಮಣಿದು ಹೆಸರು ಬದಲಾಯಿಸಿ ಪ್ರಪತ್ರ 10ರಲ್ಲಿ ಮತಪತ್ರ ಮಾದರಿ ತಯಾರಿಸಿದ್ದು ನಿಯಮಕ್ಕೆ ವಿರೋಧ. ನಾಮಪತ್ರ ಸಲ್ಲಿಸುವಾಗ ಆ ಹೆಸರುಗಳು ಇಲ್ಲದಿದ್ದರೂ ಪ್ರಪತ್ರ 10ರಲ್ಲಿ ಸೇರಿಸಿರುವುದು ಚುನಾವಣೆ ಅಕ್ರಮ ಎನ್ನಿಸಿಕೊಳ್ಳುತ್ತದೆ. ಈ ಬಗ್ಗೆ ತನಿಖೆ ನಡೆಯಬೇಕು.
    ಸೋಮಶೇಖರ ಮೇಟಿ, ಅಭ್ಯರ್ಥಿಯ ಬೆಂಬಲಿಗ, ಗುಡಿಹಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts