More

    ಚುನಾವಣೆ ಕರ್ತವ್ಯಕ್ಕೆ ತೆರಳಲು ಸಿಬ್ಬಂದಿ ಕುಂಟುನೆಪ

    ಮುದ್ದೇಬಿಹಾಳ: ತಾಲೂಕಿನ ಇಪ್ಪತ್ತು ಗ್ರಾಪಂಗಳಿಗೆ ಡಿ.22 ರಂದು ಮತದಾನ ನಡೆಯಲಿದ್ದು, ಕರ್ತವ್ಯಕ್ಕೆ ನಿಯೋಜಿಸಿದ್ದ ಕೆಲವರು ಚುನಾವಣೆ ಕರ್ತವ್ಯದಿಂದ ತಮಗೆ ವಿನಾಯ್ತಿ ನೀಡಬೇಕೆಂದು ಕೆಲವು ಕುಂಟುನೆಪ ಹೇಳಿದ ಘಟನೆ ನಡೆಯಿತು.
    ಪಟ್ಟಣದ ಎಂಜಿವಿಸಿ ಕಾಲೇಜಿನಲ್ಲಿ ಸೋಮವಾರ ಮಸ್ಟರಿಂಗ್ ಕಾರ್ಯದ ವೇಳೆ ಚುನಾವಣೆ ಸಿಬ್ಬಂದಿ ಮತಗಟ್ಟೆಗೆ ತೆರಳಲು ಅಗತ್ಯ ಸಾಮಗ್ರಿ ಪಡೆದುಕೊಳ್ಳುವ ಸಂದರ್ಭ ಇಂತಹ ಸನ್ನಿವೇಶ ಕಂಡು ಬಂದಿತು. ಕಾಲೇಜಿನ ಮೇಲ್ಮಹಡಿಯಲ್ಲಿ ಕಾಯ್ದಿರಿಸಿದ ಸಿಬ್ಬಂದಿಯನ್ನು ಗೈರು ಉಳಿದವರ ಜಾಗಕ್ಕೆ ತಹಸೀಲ್ದಾರರು ಕಳಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಇದನ್ನೆ ಕೆಲವರು ಬಂಡವಾಳ ಮಾಡಿಕೊಂಡು ನಮಗೆ ಅನಾರೋಗ್ಯವಿದೆ, ಮನೆಯಲ್ಲಿ ಮದುವೆ ಇದೆ. ಚುನಾವಣೆ ಕೆಲಸದಿಂದ ವಿನಾಯ್ತಿ ನೀಡುವಂತೆ ಬೇಡಿಕೊಂಡರು.
    ಇದಕ್ಕೆ ಕೆಲವರ ಮನವಿಯನ್ನು ಪರಿಶೀಲಿಸಿದ ತಹಸೀಲ್ದಾರ್ ಎಂ.ಎಸ್. ಅರಕೇರಿ, ಚುನಾವಣೆ ಬಂದಾಗಲಷ್ಟೇ ಈ ಜ್ವರ, ಶುಗರ್, ಬಿಪಿ ಬರುತ್ತವೆಯೇ ಎಂದು ಪ್ರಶ್ನಿಸಿದರು. ಕೆಲವರಿಗೆ ತಹಸೀಲ್ದಾರ್ ಕಾರಣಗಳನ್ನು ಹೇಳದೆ ಮೊದಲು ಹೋಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದರು. ಜಿಲ್ಲಾ ಚುನಾವಣಾ ನೋಡಲ್ ಅಧಿಕಾರಿ ಸಿದ್ಧರಾಮ ಮಾರಿಹಾಳ, ಸಿಪಿಐ ಆನಂದ ವಾಘಮೋಡೆ, ಪಿಎಸ್‌ಐ ಮಲ್ಲಪ್ಪ ಮಡ್ಡಿ, ಶಿರಸ್ತೆದಾರ್ ಎ.ಎಚ್. ಬಳೂರಗಿ, ಕಂದಾಯ ನಿರೀಕ್ಷಕ ಎನ್.ಬಿ. ದೊರೆ, ವೆಂಕಟೇಶ ಅಂಬಿಗೇರ ಮತ್ತಿತರರಿದ್ದರು.

    ಮದುವೆ ಇದೆ ವಿನಾಯ್ತಿ ಕೊಡಿ

    ಮನೆಯಲ್ಲಿ ಮಗನ ಮದುವೆ ಇದೆ. ನಮಗೆ ಚುನಾವಣೆ ಕೆಲಸದಿಂದ ವಿನಾಯಿತಿ ನೀಡುವಂತೆ ಸರೂರ ಎಲ್.ಟಿ. ಶಾಲೆಯ ಶಿಕ್ಷಕ ಮಹಾಂತೇಶ ಎ. ಧನ್ನೂರ ಹಾಗೂ ಅವರ ಪತ್ನಿ ಜಮ್ಮಲದಿನ್ನಿ ಎಚ್‌ಪಿಎಸ್ ಸಹಶಿಕ್ಷಕಿಯಾಗಿರುವ ಎಸ್.ಬಿ. ನಿಡಗುಂದಿ ಅವರು ತಹಸೀಲ್ದಾರ್‌ಗೆ ಮನವಿ ಮಾಡಿದರು. ಡಿ.24 ರಂದು ಮದುವೆ ಇದ್ದು ಮದುವೆ ಕಾರ್ಯಗಳ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ವಿನಾಯಿತಿ ನೀಡುವಂತೆ ಗೋಗರೆದರೂ ತಹಸೀಲ್ದಾರ್ ಅವರಿಗೆ ವಿನಾಯಿತಿ ನೀಡಲಿಲ್ಲ.

    ವರ್ಷದ ಮಗು ಹೊತ್ತುಕೊಂಡ ಬಂದ ಶಿಕ್ಷಕಿ

    ತಾಲೂಕಿನ ಬಲದಿನ್ನಿ ಎಚ್‌ಪಿಎಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿದ್ದಮ್ಮ ನಾಡಗೌಡ ಅವರು ತಮ್ಮ ಒಂದು ವರ್ಷದ ಮಗುವನ್ನು ಚುನಾವಣೆ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು. ಈ ವೇಳೆ ತಮಗೆ ಒಂದು ವರ್ಷದ ಮಗುವಿದ್ದು, ಬಿದರಕುಂದಿಗೆ ಚುನಾವಣೆ ಕರ್ತವ್ಯಕ್ಕೆ ತೆರಳಲು ಸಾಧ್ಯವಾಗುವುದಿಲ್ಲ. ಸೇವೆಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದ ತಹಸೀಲ್ದಾರ್ ಬೇರೊಬ್ಬ ಶಿಕ್ಷಕರನ್ನು ಅಲ್ಲಿಗೆ ತೆರಳುವುದಕ್ಕೆ ಒಪ್ಪಿಸಿ ಕರೆದುಕೊಂಡು ಬಂದರೆ ಕರ್ತವ್ಯದಿಂದ ವಿನಾಯಿತಿ ನೀಡುವುದಾಗಿ ಸೂಚಿಸಿದರು.

    ಜೇಷ್ಠತೆಯೇ ಮಾಯ

    ಚುನಾವಣೆ ಕರ್ತವ್ಯಕ್ಕೆ ನಿಯೋಜಿಸುವ ವೇಳೆ ಹಿರಿತನದ ಆಧಾರದ ಮೇಲೆ ಮುಖ್ಯ ಶಿಕ್ಷಕರನ್ನು, ಶಿಕ್ಷಕರನ್ನು ನಿಯೋಜನೆ ಮಾಡಬೇಕು. ಆದರೆ, ಮುದ್ದೇಬಿಹಾಳ ಚುನಾವಣೆ ಶಾಖೆಯಲ್ಲಿ ಎಲ್ಲವೂ ಅಯೋಮಯ. ಕೆಇಎಸ್ ದರ್ಜೆಯ ಮುಖ್ಯಶಿಕ್ಷಕರೊಬ್ಬರು ಸಹಾಯಕ ಮತಗಟ್ಟೆ ಅಧಿಕಾರಿಯಾಗಿ ನೇಮಕವಾದ ಸಹಶಿಕ್ಷಕರೊಬ್ಬರ ಕೆಳಗಡೆ ಸೇವೆ ಸಲ್ಲಿಸುವಂತೆ ನಿಯೋಜಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದವು.

    ಒಂದೇ ಬೂತ್ ಸ್ಥಾಪನೆ

    ಬಸರಕೋಡ ಗ್ರಾಪಂನಲ್ಲಿ ಮತಗಟ್ಟೆ ಸಂಖ್ಯೆ 25ರಲ್ಲಿ 1353 ಮತದಾರರಿದ್ದರೂ ಅಲ್ಲಿ ಒಂದೇ ಬೂತ್ ತೆರೆಯಲಾಗಿದೆ. ನಿಯಮಗಳ ಪ್ರಕಾರ ಸಾವಿರಕ್ಕಿಂತ ಹೆಚ್ಚಿದ್ದರೆ ಮತ್ತೊಂದು ಬೂತ್ ತೆರೆಯುವಂತೆ ಆಯೋಗದ ಸೂಚನೆ ಇದ್ದರೂ ಚುನಾವಣೆ ಶಾಖೆಯವರು ಅಲ್ಲಿ ಒಂದೇ ಬೂತ್ ತೆರೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಹಸೀಲ್ದಾರರು ಅಲ್ಲಿ ಹೆಚ್ಚುವರಿ ಪಿಆರ್‌ಒ, ಎಪಿಆರ್‌ಒ ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts