More

    ಅನಾಥವಾದ ಹುತಾತ್ಮನ ಸಮಾಧಿ!

    ಶಂಕರ ಈ. ಹೆಬ್ಬಾಳ ಮುದ್ದೇಬಿಹಾಳ

    ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಣೆ ವೇಳೆ ವಿದ್ಯುತ್ ಅವಘಡದಿಂದ 2020 ಆ.30 ರಂದು ಹುತಾತ್ಮರಾದ ತಾಲೂಕಿನ ಬಸರಕೋಡದ ಬಿಎಸ್‌ಎ್ ಯೋಧ ಶಿವಾನಂದ ಬಡಿಗೇರ ಅವರ ಹೆಸರು ಚಿರಸ್ಥಾಯಿಗೊಳಿಸುವಲ್ಲಿ ದೇಶಪ್ರೇಮಿಗಳು ವಿಲರಾಗಿದ್ದಾರೆಯೇ? ಹೀಗೊಂದು ಪ್ರಶ್ನೆ ಯೋಧನ ಸಮಾಧಿ ನೋಡಿದಾಗ ಎಲ್ಲರ ಮನದಲ್ಲಿ ಮೂಡುತ್ತದೆ.
    ನಾಲ್ಕು ತಿಂಗಳ ಹಿಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಯೋಧ ಶಿವಾನಂದನ ಅಂತ್ಯಸಂಸ್ಕಾರ ಸಾವಿರಾರು ಜನರ ಮಧ್ಯೆ ನಡೆಸಲಾಗಿತ್ತು.
    ಅಂದು ವೀರಾವೇಷದಿಂದ ಮಾತನಾಡಿದ್ದ ಹಲವರು, ಇನ್ನೇನು ತಿಂಗಳೊಳಗೆ ಯೋಧನ ಸ್ಮಾರಕ ಕಟ್ಟೇ ಬಿಡುತ್ತಾರೇನೋ ಎನ್ನುವಷ್ಟು ಭರವಸೆ ನೀಡಿದ್ದರು. ಆದರೆ, ನಾಲ್ಕು ತಿಂಗಳು ಗತಿಸಿದರೂ ಯೋಧನ ಸಮಾಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸವೇ ಆಗಿಲ್ಲ. ಇದೀಗ ಹುತಾತ್ಮ ಯೋಧನ ಸ್ಥಳ, ಸಮಾಧಿ ಅನಾಥವಾಗಿದೆ.

    ಈಡೇರದ ಶ್ರೀಗಳ ಆಶಯ

    ಯೋಧನ ಪಾರ್ಥಿವ ಶರೀರ ಮುದ್ದೇಬಿಹಾಳದ ಕಾರ್ಗಿಲ್ ಸ್ಮಾರಕವಿರುವ ಸೈನಿಕ ಮೈದಾನಕ್ಕೆ ಬಂದಾಗ ಅಂದು ಕುಂಟೋಜಿ ಚೆನ್ನವೀರ ದೇವರು, ದೇಶದ ಸಲುವಾಗಿ ತಮ್ಮ ಪ್ರಾಣಾರ್ಪಣೆ ಮಾಡಿರುವ ಯೋಧ ಶಿವಾನಂದ ಬಡಿಗೇರ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕೆಂದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಅವರ ಹೆಸರಿನಲ್ಲಿ ಒಂದು ಉದ್ಯಾನವನ, ಸ್ಮಾರಕ ನಿರ್ಮಿಸುವ ಕೆಲಸ ಆಗಬೇಕು ಎಂದು ಹೇಳಿದ್ದರು. ಆದರೆ, ಅದ್ಯಾವುದೂ ಈವರೆಗೆ ಆಗಿಯೇ ಇಲ್ಲ.
    ಸಮಾಜ ಸೇವಕ, ಶಾಸಕರ ಸಹೋದರ ಶಾಂತಗೌಡ ಪಾಟೀಲ ನಡಹಳ್ಳಿ ಅಂದು ಮಾತನಾಡಿ, ಹುತಾತ್ಮ ಯೋಧ ಶಿವಾನಂದ ಅವರ ಹೆಸರು ಉಳಿಸುವ ಕೆಲಸವನ್ನು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಡಲಾಗುತ್ತದೆ ಎಂದಿದ್ದರೂ ಅದು ಭರವಸೆಯಾಗಿ ಉಳಿದಿದೆ.

    ಉಕ್ಕಿ ಹರಿದ ಅಭಿಮಾನ

    2020 ಸೆಪ್ಟೆಂಬರ್ 2 ರಂದು ಮುದ್ದೇಬಿಹಾಳದಿಂದ ಎಂಜಿವಿಸಿ ಕಾಲೇಜಿನವರೆಗೆ ಬೈಕ್ ರ‌್ಯಾಲಿ ಮೂಲಕ ಯೋಧನ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ ಯೋಧನ ಪಾರ್ಥಿವ ಶರೀರವನ್ನು ಬಸರಕೋಡಕ್ಕೆ ಬೀಳ್ಕೊಡಲಾಗಿತ್ತು. ಬಳಿಕ ಯೋಧನ ಮನೆಗೆ ಪಾರ್ಥಿವ ಶರೀರ ಕೊಂಡೊಯ್ಯಲಾಗಿತ್ತು. ಆಗ ಕಿಕ್ಕಿರಿದು ಸೇರಿದ್ದ ಸಾವಿರಾರು ಜನ ಶಿವಾನಂದ ಬಡಿಗೇರ ಅಮರ ಹೈ ಎಂಬ ಘೋಷಣೆಗಳನ್ನು ಮುಗಿಲು ಮುಟ್ಟುವಂತೆ ಕೂಗಿ ದೇಶಾಭಿಮಾನ ಮೆರೆದಿದ್ದರು.

    ಬಂಗಾರದಂತಹ ಮಗನೇ ಹೋಗ್ಯಾನ

    ಮಗನ ಅಗಲಿಕೆಯ ದುಃಖದಲ್ಲೇ ಕಾಲ ಕಳೆಯುತ್ತಿರುವ ಯೋಧ ಶಿವಾನಂದ ಬಡಿಗೇರ ತಂದೆ ಜಗನ್ನಾಥ ಬಡಿಗೇರ ಮಾಧ್ಯಮಗಳೊಂದಿಗೆ ಮಾತನಾಡಿ, ಬಂಗಾರದಂತಹ ಮಗನೇ ಹೋಗ್ಯಾನ, ಯಾವ ಸ್ಮಾರಕ ತಗೊಂಡು ಏನು ಮಾಡೋದೈತ್ರಿ ಎನ್ನುತ್ತ ಗದ್ಗದಿತರಾದರು.

    ದೇಶಕ್ಕಾಗಿ ಸೇವೆ ಸಲ್ಲಿಸಿದ ಸೈನಿಕನ ಸಮಾಧಿ ಅನಾಥವಾಗುವಂತೆ ಬಿಟ್ಟಿರುವುದು ನೋವಿನ ಸಂಗತಿ. ಈ ಬಗ್ಗೆ ಎಲ್ಲರಲ್ಲೂ ಕಾಳಜಿ, ಅಭಿಮಾನ ಅಗತ್ಯವಿದೆ. ಸಂಬಂಧಿಸಿದವರು ಹುತಾತ್ಮ ಯೋಧ ಶಿವಾನಂದ ಬಡಿಗೇರ ಸ್ಮಾರಕ ನಿರ್ಮಾಣಕ್ಕೆ ಮುಂದಾಗಬೇಕು ಎನ್ನುವುದು ನಮ್ಮ ಆಶಯ. ಬಸರಕೋಡದ ಹಿರಿಯರು, ದೇಶಾಭಿಮಾನಿಗಳು, ಬಡಿಗೇರ ಕುಟುಂಬದವರೊಂದಿಗೆ ಮಾತನಾಡಿ ಶೀಘ್ರ ಸ್ಮಾರಕ ನಿರ್ಮಾಣ ಕಾರ್ಯ ಕೈಗೊಳ್ಳಲು ಪ್ರಯತ್ನಿಸಲಾಗುವುದು.
    ಎಸ್.ಆರ್.ಕುಲಕರ್ಣಿ, ಅಧ್ಯಕ್ಷ, ಮಾಜಿ ಸೈನಿಕರ ಸಂಘ, ಮುದ್ದೇಬಿಹಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts