More

    ಎಂಆರ್‌ಪಿಎಲ್ – ಎಚ್‌ಪಿಸಿಎಲ್ ವಿಲೀನಕ್ಕೆ ಮುನ್ನುಡಿ

    ವೇಣುವಿನೋದ್ ಕೆ.ಎಸ್.ಮಂಗಳೂರು

    ಮೂರನೇ ತ್ರೈಮಾಸಿಕ ಅವಧಿಯಲ್ಲಿ ಲಾಭದ ಹಳಿಗೆ ಮರಳಿರುವ ಸಾರ್ವಜನಿಕ ರಂಗದ ಉದ್ದಿಮೆ ಎಂಆರ್‌ಪಿಎಲ್ ತನ್ನ ತೆಕ್ಕೆಯಲ್ಲೇ ಇರುವ ಸಹಸಂಸ್ಥೆ ಒಎಂಪಿಎಲ್ ಖರೀದಿಗೆ ಪೂರಕ ಪ್ರಕ್ರಿಯೆಗಳು ಶುರು ಮಾಡಿದೆ. ಇದರೊಂದಿಗೆ ಮುಂದಿನ ಕೆಲ ತಿಂಗಳಲ್ಲಿ ಎಂಆರ್‌ಪಿಎಲ್ ಅನ್ನು ಎಚ್‌ಪಿಸಿಎಲ್ (ಹಿಂದುಸ್ಥಾನ್ ಪೆಟ್ರೋಲಿಯಂ) ಜತೆ ವಿಲೀನಗೊಳಿಸುವ ಕೆಲಸವೂ ಚುರುಕಾಗಲಿದೆ.

    ಇತ್ತೀಚೆಗಷ್ಟೇ ಒಎಂಪಿಎಲ್‌ನಲ್ಲಿರುವ ಒಎನ್‌ಜಿಸಿಯ ಶೇ.49 ಷೇರು ಖರೀದಿಗೆ ಎಂಆರ್‌ಪಿಎಲ್‌ನ ಆಡಳಿತ ಮಂಡಳಿ ಅನುಮೋದನೆ ನೀಡಿತ್ತು. ಅಂದರೆ 1200 ಕೋಟಿ ರೂ. ವಿನಿಯೋಗಿಸಿ ಈ ಷೇರು ಖರೀದಿ ನಡೆಯಲಿದೆ.
    ಎಂಆರ್‌ಪಿಎಲ್ ಹಾಗೂ ಒಎನ್‌ಜಿಸಿಯ ಪಾಲು ಹೊಂದಿರುವ ಒಎಂಪಿಎಲ್ (ಒಎನ್‌ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ಎಂಆರ್‌ಪಿಎಲ್‌ನ ನಾಫ್ತಾವನ್ನು ಬಳಸಿ ಬೆನ್ಸಿನ್ ಮತ್ತು ಪಾರಾಕ್ಸೈಲಿನ್ ಎಂಬ ಎರಡು ಆರೋಮಾಟಿಕ್ಸ್ ಉತ್ಪನ್ನಗಳನ್ನು ತಯಾರಿಸುತ್ತದೆ. ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ ಎಂಆರ್‌ಪಿಎಲ್‌ನ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್‌ನ ಸನಿಹದಲ್ಲೇ ಕಾರ್ಯನಿರ್ವಹಿಸುತ್ತಿರುವ ಒಎಂಪಿಎಲ್ ದಕ್ಷಿಣ ಭಾರತದಲ್ಲೇ ಅತೀ ದೊಡ್ಡ ಪೆಟ್ರೋಕೆಮಿಕಲ್ಸ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

    ನಿರ್ದೇಶಕರ ಮಂಡಳಿಯಿಂದ ಒಎಂಪಿಎಲ್‌ನಲ್ಲಿರುವ ಒಎನ್‌ಜಿಸಿಯ ಶೇ.49 ಷೇರು ಖರೀದಿಗೆ ಅನುಮೋದನೆ ಸಿಕ್ಕಿದೆ. ಆದರೆ ಮುಂದೆ ಈ ಕಂಪನಿಯನ್ನು ಎಂಆರ್‌ಪಿಎಲ್‌ನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಇನ್ನಷ್ಟೇ ಆಗಬೇಕಿದೆ. ಇದಕ್ಕೆ 6ರಿಂದ 8 ತಿಂಗಳು ಬೇಕಾಗಬಹುದು ಎಂದು ಎಂಆರ್‌ಪಿಎಲ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಎರಡರ ವಿಲೀನದಿಂದ ಕಂಪನಿಗಳ ಘಟಕಗಳು ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿವೆ. ಇದು ಎರಡು ಕಂಪನಿಗಳಿಗೂ ಆರ್ಥಿಕ ಲಾಭ ತರಲಿವೆ.

    ಖರೀದಿ-ವಿಲೀನ ಉದ್ದೇಶವೇನು?
    2006ರಲ್ಲಿ ಒಎನ್‌ಜಿಸಿಯ ಶೇ.49 ಹಾಗೂ ಎಂಆರ್‌ಪಿಎಲ್‌ನ ಶೇ.51 ಷೇರಿನಲ್ಲಿ ಒಎಂಪಿಎಲ್ ಜನಿಸಿತ್ತು. ಇದರ ಉತ್ಪನ್ನಗಳಿಗೆ ಅಷ್ಟಾಗಿ ಬೇಡಿಕೆ ಇಲ್ಲದಿರುವ ಹಿನ್ನೆಲೆಯಲ್ಲಿ ಖರೀದಿ ಬೇಕಿತ್ತೇ ಎಂಬ ಸಂಶಯಗಳು ವ್ಯಕ್ತವಾಗಿವೆ. ಆದರೆ, ಇವೆರಡನ್ನೂ ವಿಲೀನಗೊಳಿಸಿ ಮುಂದೆ ಎಚ್‌ಪಿಸಿಎಲ್ ಜತೆ ಎಂಆರ್‌ಪಿಎಲ್ ವಿಲೀನಕ್ಕೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಉತ್ಸುಕವಾಗಿರುವುದಾಗಿ ಹೇಳಲಾಗುತ್ತಿದೆ. ಎಚ್‌ಪಿಸಿಎಲ್‌ಗೆ ಇದರಿಂದ ದಕ್ಷಿಣ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ನೇರ ಲಭ್ಯವಾಗಲಿದೆ. ಎಂಆರ್‌ಪಿಎಲ್‌ನ ರಿಫೈನರಿ ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿದೆ ಎನ್ನುವುದು ಅಧಿಕಾರಿಗಳ ಸಮರ್ಥನೆ.

    ವಿಲೀನ ಯಾಕೆ?
    ಪ್ರಸ್ತುತ ಒಎನ್‌ಜಿಸಿ ಪೂರ್ಣವಾಗಿ ತೈಲ ಹಾಗೂ ಅನಿಲ ಶೋಧನೆಯಲ್ಲೇ ತೊಡಗಿಸಿಕೊಳ್ಳಬೇಕು ಹೊರತು ಸಂಸ್ಕರಣೆಯಲ್ಲಿ ಅಲ್ಲ. ಅದಕ್ಕಾಗಿ ಒಎನ್‌ಜಿಸಿ ಅಧೀನದ ಎಂಆರ್‌ಪಿಎಲ್‌ನ್ನು ಎಚ್‌ಪಿಸಿಎಲ್ ಜತೆಗೆ ವಿಲೀನಗೊಳಿಸಬೇಕು ಎನ್ನುವುದು ಕೇಂದ್ರ ಸರ್ಕಾರದ ನಿಲುವು. ಇದರಿಂದ ಸಂಸ್ಕರಣೆ ಹಾಗೂ ಶೋಧನೆಯನ್ನು ಪ್ರತ್ಯೇಕವಾಗಿರಿಸುವುದು, ಜತೆಯಲ್ಲಿ ಸರ್ಕಾರಿ ಸ್ವಾಮ್ಯದ ಎಚ್‌ಪಿಸಿಎಲ್‌ಗೂ ಸಂಸ್ಕರಣೆಯೊಂದಿಗೆ ಮಾರುಕಟ್ಟೆ ವಿಸ್ತರಣೆಯಲ್ಲಿ ಬಲ ಸಿಗಲಿದೆ ಎನ್ನುತ್ತಾರೆ ಅಧಿಕಾರಿಗಳು.

    ನಿರಂತರ ಆದಾಯ ವೃದ್ಧಿ ಉದ್ದೇಶದಿಂದ ರಿಫೈನರಿ ಹಾಗೂ ಆರೋಮ್ಯಾಟಿಕ್ ಘಟಕಗಳೆರಡೂ ಒಂದೇ ಆಡಳಿತದ ಕೆಳಗೆ ಬರುವುದು ಉತ್ತಮ ಎಂಬ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗುತ್ತಿದೆ. ಒಎಂಪಿಎಲ್ ವಿಲೀನಕ್ಕಾಗಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಇದು 6-8 ತಿಂಗಳು ಹಿಡಿಯಲಿದೆ.
    -ವೆಂಕಟೇಶ್ ಎಂ, ವ್ಯವಸ್ಥಾಪಕ ನಿರ್ದೇಶಕ, ಎಂಆರ್‌ಪಿಎಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts