

ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ಎಂ. ಸತೀಶ್ ರೆಡ್ಡಿ ಪರವಾಗಿ ಸಂಸದ ತೇಜಸ್ವಿ ಸೂರ್ಯ ಭಾನುವಾರ ಬಿರುಸಿನ ಪ್ರಚಾರ ನಡೆಸಿದರು.
ಎಚ್ಎಸ್ಆರ್ ಬಡಾವಣೆ, ಅಂಬೇಡ್ಕರ್ ನಗರ ಸೇರಿ ಹಲವೆಡೆ ಕಾರ್ಯಕರ್ತರೊಂದಿಗೆ ಮನೆಗಳಿಗೆ ತೆರಳಿ ಮತಯಾಚಿಸಿದರು. ಉದ್ಯಾನಗಳಿಗೆ ತೆರಳಿ ವಾಯುವಿಹಾರ ನಡೆಸುತ್ತಿದ್ದವರನ್ನು ಭೇಟಿ ಮಾಡಿ ಉಭಯಕುಶಲೋಪರಿ ನಡೆಸಿದರು.
ಈ ವೇಳೆ ನಡೆದ ಸಣ್ಣ ಸಭೆಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ದೇಶದಲ್ಲಿ ನರೇಂದ್ರ ಮೋದಿಯವರ ಆಡಳಿತ ಹಾಗೂ ರಾಜ್ಯದಲ್ಲಿ ಬಿಜೆಪಿಯ ಸದೃಢ ಆಡಳಿತ ನೋಡಿ ಜನ ಬಿಜೆಪಿಗೆ ಮತ ಹಾಕುತ್ತಾರೆ. ಕಾಂಗ್ರೆಸ್ನವರು ಕೇವಲ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನ ಎಲ್ಲವನ್ನು ಗಮನಿಸಿ ಮತ ನೀಡುತ್ತಾರೆ ಎಂದರು.
ಅಂಬೇಡ್ಕರ್ ನಗರದಲ್ಲಿ ಮತದಾರ ರನ್ನು ಉದ್ದೇಶಿಸಿ ಮಾತನಾಡಿದ ಸತೀಶ್ ರೆಡ್ಡಿ, 380 ಬೂತ್ಗಳಿದ್ದು ಎಲ್ಲ ವಾರ್ಡ್ ಗಳಲ್ಲಿನ ಜನರು ನನಗೆ ಪರಿಚಯಸ್ಥರು. ಮೂರು ಬಾರಿ ಆಶೀರ್ವಾದ ಮಾಡಿದ್ದೀರಿ, ನಾಲ್ಕನೇ ಬಾರಿ ಮತ್ತೆ ಬಂದು ಆಶೀರ್ವಾದ ಕೇಳುತ್ತಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ನವರು ಬೇರೆ ಬೇರೆ ಕುತಂತ್ರ ಮಾಡುತ್ತಿದ್ದಾರೆ. ಡಬ್ಬಿಂಗ್ ಆರ್ಟಿಸ್ಟ್ ಆಗಿ ಕಾಂಗ್ರೆಸ್ ಅಭ್ಯರ್ಥಿ ಕೆಲಸ ಮಾಡುತ್ತಿದ್ದು, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಅವರ ಆಡಿಯೋ ಡಬ್ಬಿಂಗ್ ಮಾಡಿ ಬಿಜೆಪಿಗೆ ಮತ ಕೇಳುವ ರೀತಿ ಹರಿಬಿಟ್ಟಿದ್ದಾರೆ. ಇದನ್ನೆಲ್ಲ ಜನರು ಗಮನಿಸುತ್ತಿದ್ದಾರೆ ಎಂದರು.
ಯಾರಾದರೂ ಬಂದು ಮತ ಕೇಳಿ ದಾಗ ಅಂಬೇಡ್ಕರ್ ನಗರದವರು ನಾನು ಮಾಡಿದ ಕೆಲಸ ತಿಳಿಸಿದರೆ ಸಾಕು. ನನ್ನ ಕ್ಷೇತ್ರದಲ್ಲಿ ನಾನು ಯಾವಾ ಗಲೂ ಜನರಿಗೆ ಸಿಗುವ ವ್ಯಕ್ತಿ. ಕೋವಿಡ್ ಸಮಯದಲ್ಲಿ ಬೇರೆ ಯಾವುದೇ ಸ್ಪರ್ಧಿ ಒಂದು ಕಿಟ್ ನೀಡಿದ್ದರೆ ಜನರ ಮುಂದೆ ಬಂದು ತಿಳಿಸಲಿ ಎಂದು ಹೇಳಿದರು.
ಬಿಜೆಪಿ ಮುಖಂಡ ಮಂಜುನಾಥ್ ರೆಡ್ಡಿ, ಮುನಿರಾಜು, ಶ್ರೀನಿವಾಸ್ ರೆಡ್ಡಿ ಮತ್ತಿತರರು ಜತೆಯಲ್ಲಿದ್ದರು.