More

    ಮೋದಿ ಬರೋವರ್ಗ ನಿಮ್ದೇ ಹವಾ!

    ಮೋದಿ ಬರೋವರ್ಗ ನಿಮ್ದೇ ಹವಾ!ವಾಸ್ತವವಾಗಿ, ಚುನಾವಣೆಯ ವಿಚಾರದಲ್ಲಿ ಆಮೂಲಾಗ್ರ ಬದಲಾವಣೆಗೆ ನಾವೂ ಸಿದ್ಧವಾಗಬೇಕು. ಯಾವ ವ್ಯಕ್ತಿಗೂ ಸತತ ಎರಡನೇ ಬಾರಿ ಗೆದ್ದನಂತರ, ಮೂರನೇ ಬಾರಿ ಟಿಕೆಟ್ ನೀಡಬಾರದು. ಹತ್ತು ವರ್ಷ ಶಾಸಕನಾಗಿಯೂ ಏನನ್ನೂ ಕಡಿದು ಗುಡ್ಡೆ ಹಾಕದವ, ಮುಂದಿನ ಹತ್ತು ವರ್ಷದಲ್ಲಿ ಅದೇನು ಮಹಾ ಸಾಧಿಸಬಲ್ಲ ಹೇಳಿ?

    ಚುನಾವಣೆ ಎದುರಿಗಿದೆ. ಆದರೆ, ಸದ್ದೇ ಇಲ್ಲ. ಇನ್ನು ಹದಿನೈದಿಪ್ಪತ್ತು ದಿನಗಳಲ್ಲಿ ಈ ರಾಜ್ಯದ ಐದು ವರ್ಷಗಳ ಭವಿಷ್ಯ ನಿರ್ಧಾರವಾಗಲಿದೆ ಎಂಬ ಯಾವ ಮುನ್ಸೂಚನೆಯೂ ಕಾಣುತ್ತಿಲ್ಲ. ಬಿಸಿಲ ಝುಳ ಒಂದೆಡೆಯಾದರೆ, ಮತ್ತೊಂದೆಡೆ ಎಲ್ಲ ಪಕ್ಷಗಳ ನಾಯಕರಲ್ಲೂ ಮನೆಮಾಡಿರುವ ಆತಂಕ. ಎಲ್ಲಾ ಪಕ್ಷಗಳೂ ಬಹುಮತ ತಮಗೇ ಅಂತ ಮೇಲ್ನೋಟಕ್ಕೆ ಬೀಗುತ್ತಿವೆಯಾದರೂ ಮೈದಡವಿ ಮಾತನಾಡಿಸಿದಾಗ, ಸ್ವಲ್ಪ ಕಷ್ಟವಿದೆ ಎನ್ನುವುದನ್ನು ಒಪ್ಪುತ್ತಾರೆ. ಏಕೋ ಈ ಬಾರಿ ಜನ ಬೂತಿಗೆ ಬಂದು ವೋಟ್ ಮಾಡುವುದೇ ಅನುಮಾನ ಅನ್ನಿಸುತ್ತಿದೆ. ಉರಿಬಿಸಿಲು ಒಂದು ಕಾರಣವಾದರೆ, ಎಲ್ಲಾ ಪಕ್ಷಗಳೂ ಒಂದೇ ಎನ್ನುವ ತಾತ್ಸಾರ ಮನೋಭಾವ ಮತ್ತೊಂದು.

    ಇಡೀ ಚುನಾವಣೆಯ ಪ್ರಮುಖ ಬೇಸರದ ಸಂಗತಿ ಏನು ಗೊತ್ತೇ? ಜಾತಿಯ ಕಾರ್ಡನ್ನು ಪಕ್ಷಗಳು ಬಳಸುತ್ತಿರುವಂತಹ ರೀತಿ. ಲಿಂಗಾಯತರೇ ಮುಖ್ಯಮಂತ್ರಿ ಎನ್ನುವ ಬಿಜೆಪಿ, ಗೌಡರನ್ನು ಮುಂದಿಟ್ಟುಕೊಂಡು ಕಾಳಗ ನಡೆಸುತ್ತಿರುವ ಕಾಂಗ್ರೆಸ್ಸು. ಜಾತಿ-ಜಾತಿಗಳನ್ನು ಇವರು ಸೆಳೆಯಲು ನಡೆಸುತ್ತಿರುವ ಕಸರತ್ತು ನೋಡಿದರೆ ಅಚ್ಚರಿಯಾಗುತ್ತದೆ. ತಾನು ಬ್ರಾಹ್ಮಣ ಪಕ್ಷವಲ್ಲವೆಂದು ಸಾಬೀತುಪಡಿಸಿಕೊಳ್ಳಲು ಬಿಜೆಪಿ ಜಾತಿವಾರು ಟಿಕೆಟ್ ಹಂಚಿಕೆ ಪಟ್ಟಿ ಪ್ರಕಟಿಸಿದರೆ, ಅತ್ತ ಕಾಂಗ್ರೆಸ್ಸು ಲಿಂಗಾಯತರನ್ನು ಸೆಳೆಯಲು ಒಡಕಿನ ಎಲ್ಲ ಪ್ರಯೋಗವನ್ನೂ ಮಾಡಿಯಾಗಿದೆ. ಅಲ್ಲದೇ ಮತ್ತೇನು? ಜಗದೀಶ ಶೆಟ್ಟರ್ ಪಕ್ಷ ಬಿಟ್ಟಿರೋದು ಸರಿ. ಆದರೆ, ಅವರನ್ನು ತಮ್ಮತ್ತ ಸೆಳೆದ ಕಾಂಗ್ರೆಸ್ಸು ಲಿಂಗಾಯತರಿಗಾದ ಅವಮಾನವೆಂಬಂತೆ ಬಿಂಬಿಸಿತಲ್ಲ! ಶೆಟ್ಟರ್ ಕೂಡ ತಮ್ಮನ್ನು ಹೊರದಬ್ಬುವ ಪ್ರಕ್ರಿಯೆಯ ನಾಯಕರಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್​ರನ್ನು ಬಿಂಬಿಸಿ, ಉರಿವ ಬೆಂಕಿಗೆ ತುಪ್ಪ ಸುರಿದರು. ಅವರದ್ದು ತಪ್ಪು ಎಂದು ಹೇಳಲಾಗದು. ರಾಜಕೀಯವಾಗಿ ಸಕ್ರಿಯವಾಗಿರಬೇಕೆಂದರೆ ಇಂಥದ್ದೊಂದು ಕಸರತ್ತು ಅವರಿಗೆ ಅಗತ್ಯವಿತ್ತು. ಅಚ್ಚರಿಯೇನು ಗೊತ್ತೇ? ಜಗದೀಶ ಶೆಟ್ಟರ್​ಗೆ ಟಿಕೆಟ್ ನಿರಾಕರಿಸಿ ಬಿಜೆಪಿ ಆಯ್ಕೆ ಮಾಡಿದ ವ್ಯಕ್ತಿಯೂ ಲಿಂಗಾಯತರೇ! ಹಾಗಿದ್ದಮೇಲೆ ಲಿಂಗಾಯತರಿಗೆ ಮೋಸವಾಗಿದ್ದೆಲ್ಲಿ?

    ಇನ್ನು ಎಲ್ಲಾ ಅನಿಷ್ಠಗಳಿಗೂ ಸಂತೋಷರೇ ಕಾರಣವೆನ್ನುವ ಮಂದಿ ಮೋದಿ-ಅಮಿತ್ ಷಾರನ್ನು ಅಷ್ಟು ದಡ್ಡರೆಂದುಕೊಂಡಿದ್ದಾರೋ ಅಥವಾ ಟಿಕೆಟ್ ಹಂಚಿಕೆಯಲ್ಲಿ ಅವರ ಪಾತ್ರವೇ ಇಲ್ಲ ಎಂದು ಭಾವಿಸಿದ್ದಾರೋ, ನಾನಂತೂ ಅರಿಯೆ. ಘಟಾನುಘಟಿಗಳ್ಯಾರ್ಯಾರಿಗೆ ಟಿಕೆಟ್ ನಿರಾಕರಿಸಬೇಕು ಎಂಬ ಚರ್ಚೆ ಸಮಿತಿಯೊಳಗೆ ಮೇಲ್ಮಟ್ಟದಲ್ಲಿ ನಡೆದ ಮೇಲೆಯೇ ನಿರ್ಣಯವಾಗಿರುತ್ತಲ್ಲ. ಅಂದಮೇಲೆ ಒಬ್ಬರದ್ದೇ ಜವಾಬ್ದಾರಿ ಹೇಗೆ? ಹಾಗೆ ಒಬ್ಬರ ಹೆಗಲಿಗೇ ಎಲ್ಲವನ್ನೂ ವರ್ಗಾಯಿಸುವುದಾದರೆ, ಟಿಕೆಟ್ ಹಂಚಿಕೆಯಲ್ಲಿ ಹಿಂದೆಂದೂ ಕಾಣದಷ್ಟು ಹೊಸಮುಖಗಳನ್ನು ತಂದಿರುವ ಶ್ರೇಯವೂ ಸಂತೋಷ್ ಅವರಿಗೇ ಸಲ್ಲಬೇಕಲ್ಲ! ಬಿಜೆಪಿಯವರಿಗೆಲ್ಲ ನೆನಪಿರಬೇಕಾದ ಒಂದು ಸಂಗತಿ ಎಂದರೆ ಬಿಜೆಪಿ ಸಂಘದ ಅಂಗಸಂಸ್ಥೆಯಷ್ಟೆ. ಸಂಘ ಅದರ ಬಾಲವಲ್ಲ. ಹೀಗಾಗಿ, ಭಾಜಪದೊಂದಿಗೆ ಎಷ್ಟಾದರೂ ಕಿತ್ತಾಡಿಕೊಳ್ಳಿ, ಸ್ವಯಂಸೇವಕರು ನಿಮ್ಮ ಮೇಲೆ ಪ್ರೀತಿ ಇಟ್ಟಿರುತ್ತಾರೆ. ಸಂಘದ ತಂಟೆಗೆ ಬಂದರೆ ನಿಮ್ಮನ್ನು ಸದ್ದಿಲ್ಲದೆ ಪಕ್ಕಕ್ಕೆ ಸರಿಸಿಬಿಡ್ತಾರೆ. ಶೆಟ್ಟರ್ ವಿಷಯದಲ್ಲಿ ಆದದ್ದೂ ಅದೇ. ಅವರು ಸ್ವಯಂಸೇವಕರ ಅನುಕಂಪವನ್ನು ಕಳಕೊಂಡರು. ಅತ್ತ ಕಾಂಗ್ರೆಸ್ಸಿಗರೂ ನಂಬಲಾಗದ ಸ್ಥಿತಿಯನ್ನು ತಲುಪಿಬಿಟ್ಟರು. ಅವರದ್ದೀಗ ಇಬ್ಬಂದಿ. ಹಾಗಂತ ಜಗದೀಶ ಶೆಟ್ಟರ್​ರ ರಾಜಕೀಯ ಚಾಣಾಕ್ಷಮತಿಯನ್ನು ಅನುಮಾನಿಸಬೇಡಿ. ಅವರಿಗೆ ಗೆಲ್ಲುವ ತಂತ್ರಗಾರಿಕೆ ಗೊತ್ತಿದೆ. ಆದರೆ, ಈ ಧಾವಂತದಲ್ಲಿ ಸೊರಗಿದ್ದು ಮಾತ್ರ ಲಿಂಗಾಯತ ಸಮುದಾಯ. ಬ್ರಾಹ್ಮಣ ಮತ್ತು ಲಿಂಗಾಯತರ ನಡುವಿನ ಕಂದಕವನ್ನು ಅವರು ಇನ್ನಷ್ಟು ದೊಡ್ಡದು ಮಾಡಿಬಿಟ್ಟರು. ಬಿಜೆಪಿಯಲ್ಲಿದ್ದಷ್ಟು ದಿನ ಎಲ್ಲರನ್ನೂ ಬೆಸೆಯುವ ಪ್ರಯತ್ನ ಮಾಡುತ್ತಿದ್ದವರು, ಕಾಂಗ್ರೆಸ್ಸಿಗೆ ಕಾಲಿಟ್ಟೊಡನೆ ಬೆಂಕಿಹಚ್ಚಲು ಸಿದ್ಧವಾಗಿಬಿಟ್ಟರು. ಬಹುಶಃ ಒಡಕು ತರೋದು ಕಾಂಗ್ರೆಸ್ಸಿನ ಹುಟ್ಟುಗುಣವೇನೋ! ಕಾಂಗ್ರೆಸ್ಸಿಗರು ಆತ್ಮೀಯತೆ ತೋರುತ್ತಿದ್ದಾರೆಂದರೆ ಏನೊ ಅವಘಡ ಕಾದಿದೆ ಎಂದೇ ಅರ್ಥ. ಮುಖದಲ್ಲಿ ನಗು, ಬಗಲಲ್ಲಿ ಚೂರಿ ಅನ್ನೋದು ಕಾಂಗ್ರೆಸ್ಸಿಗರನ್ನು ನೋಡಿಯೇ ಹುಟ್ಟಿರಬೇಕು! ಒಂದಂತೂ ಸತ್ಯ. ನಾಟಕ ಮಾಡಿದರೆ ಬಹಳ ಕಾಲ ಉಳಿಯುವುದಿಲ್ಲ. ಲಿಂಗಾಯತರ ಮೇಲೆ ವಿಶೇಷ ಪ್ರೀತಿ ತೋರಿದ ಸಿದ್ದರಾಮಯ್ಯ, ‘ಲಿಂಗಾಯತರೇ ಇಲ್ಲಿ ಚೀಫ್ ಮಿನಿಸ್ಟರ್ ಇದ್ದಾರಲ್ಲ. ಅವರೇ ಎಲ್ಲ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಹಾಳುಮಾಡಿರುವುದು’ ಎಂದಿದ್ದು ಅಂತರಂಗದ ಮಾತನ್ನು ಹೊರಹಾಕಿದೆ. ಜಾತಿಯನ್ನೇ ನೆಚ್ಚಿಕೊಂಡು ಚುನಾವಣೆಗೆ ಹೋದರೆ ಅನುಭವಿಸಲೇಬೇಕಾದ್ದು ಇದು.

    ಒಡಕು ಜಾತಿಯ ವಿಚಾರದಲ್ಲಷ್ಟೇ ಅಲ್ಲ. ಅಮೂಲ್-ನಂದಿನಿ ಗಲಾಟೆಯಲ್ಲಿ್ಲ ಕೂಡ. ಗುಜರಾತಿನ ಅಮೂಲ್​ಗೆ ಕರ್ನಾಟಕಕ್ಕೆ ಬರಲು ಅವಕಾಶ ಕೊಟ್ಟಿದ್ದೇ ಸಿದ್ದರಾಮಯ್ಯ. ಈಗ ಗಲಾಟೆ ಮಾಡುತ್ತಾ ಇರೋದೂ ಅವರೇ. ತಮ್ಮ ಮತಗಳಿಕೆಗಾಗಿ ರಾಜ್ಯ-ರಾಜ್ಯಗಳ ನಡುವೆ ಕದನ ಹಚ್ಚಿಸಲು ಯತ್ನಿಸುತ್ತಿರುವ ಈ ಮಂದಿ ವಿಕಾಸ ಮಾಡೋದು ಸಾಧ್ಯವೇನು? ಈ ರೀತಿಯಲ್ಲೇ ಈ ರಾಜಕಾರಣಿಗಳು ಕರ್ನಾಟಕ-ತಮಿಳುನಾಡು ನಡುವೆ ವಿಷಬೀಜ ಬಿತ್ತಿದ್ದು. ಇವರು ಹಚ್ಚಿದ್ದ ಬೆಂಕಿ ಆರಿಸಲು ಯಡಿಯೂರಪ್ಪನವರೇ ಬರಬೇಕಾಯ್ತು. ನಂದಿನಿಗಾಗಿ ಕಂಠಮಟ್ಟ ಕಿತ್ತಾಡಿದ ಸಿದ್ದರಾಮಯ್ಯ ರಾಜ್​ದೀಪ್ ಸರ್​ದೇಸಾಯಿಗೆ ನೀಡಿದ ಸಂದರ್ಶನದಲ್ಲಿ, ತಾನೇ ಅಧಿಕಾರಕ್ಕೆ ಬಂದರೂ ಅಮೂಲ್ ನಿಷೇಧಿಸುವುದಿಲ್ಲ. ಆದರೆ, ಜನರಿಗೆ ಅದನ್ನು ಕೊಂಡುಕೊಳ್ಳದಿರುವಂತೆ ಕೇಳಿಕೊಳ್ಳುವೆ ಎಂದಿರುವುದಂತೂ ಇಬ್ಬಂದಿತನದ ದ್ಯೋತಕವೇ. ಜಗತ್ತು ಆರ್ಥಿಕವಾಗಿ ಬೆಳವಣಿಗೆಗೆ ಎಲ್ಲ ಸಭ್ಯಮಾರ್ಗಗಳ ಮೊರೆ ಹೋಗುತ್ತಿರುವಾಗ ಒಂದು ರಾಜ್ಯದ ವಸ್ತು ಮಾರಲು ಬಿಡೆವು ಎಂದು ಇನ್ನೊಂದು ರಾಜ್ಯದಲ್ಲಿ ಹಠಹಿಡಿದು ಕುಳಿತ ಪಕ್ಷ ರಾಷ್ಟ್ರೀಯ ಪಕ್ಷವೆನಿಸಿಕೊಳ್ಳಲು ಯೋಗ್ಯವಲ್ಲ. ಅಲ್ಲವೇನು!?

    ಇನ್ನು ಮುಸಲ್ಮಾನರ ಮೇಲಿನ ಕಾಂಗ್ರೆಸ್ ಪಕ್ಷದ ಹಿಡಿತ ಮೆಚ್ಚಬೇಕಾದ್ದೇ. ಕೆಮ್ಮಿದ್ದಕ್ಕೂ, ಕ್ಯಾಕರಿಸಿದ್ದಕ್ಕೂ ಬೀದಿಗೆ ಬಂದು ನಿಲ್ಲುವ ಮುಸಲ್ಮಾನರು, ಅತೀಕ್ ಅಹ್ಮದ್​ನ ಸಾವಿಗೆ ಪ್ರತಿಕ್ರಿಯೆಯನ್ನೇ ಕೊಡಲಿಲ್ಲ ನೋಡಿದಿರಾ? ದೇಶದ ಮೂಲೆ-ಮೂಲೆಯಲ್ಲಿ ಸದ್ದು ಮಾಡಿದ ಈ ಮಂದಿ ಕರ್ನಾಟಕದಲ್ಲಿ ಇಷ್ಟು ಮುಗುಮ್ಮಾಗಿರೋದು ಏಕೆ? ತಮ್ಮ ಗಲಾಟೆಯಿಂದ ಹಿಂದೂಗಳು ಒಗ್ಗಟ್ಟಾಗಿಬಿಡುವರೇನೋ ಎನ್ನುವ ಭಯ. ಮುಸಲ್ಮಾನರಿಂದ ಅವೈಜ್ಞಾನಿಕವಾದ ಮೀಸಲಾತಿಯನ್ನು ಕಿತ್ತುಕೊಂಡು ಗೌಡರು, ಪಂಚಮಸಾಲಿಗಳಿಗೆ ಬಿಜೆಪಿ ಹಂಚಿದಾಗಲೂ ಅವರು ತುಟಿಪಿಟಿಕ್ ಎನ್ನಲಿಲ್ಲ. ಏಕಿರಬಹುದು? ಈಗ ಗಲಾಟೆ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಕಾರಣವಾಗುವ ಬದಲು ಸಂಯಮ ಕಾಯ್ದುಕೊಂಡು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದು, ಆನಂತರ ಬೇಕಾದ ಆಟ ಆಡಿದರಾಯ್ತು ಎಂಬ ಉದ್ದೇಶವೇ ತಾನೇ? ದೇಶದಾದ್ಯಂತ ಮುಸಲ್ಮಾನರನ್ನು ಈ ರೀತಿ ನಿಯಂತ್ರಣದಲ್ಲಿರಿಸಿಕೊಳ್ಳುವ ಸಾಮರ್ಥ್ಯ ಇರೋದು ಕಾಂಗ್ರೆಸ್ಸಿಗೆ ಮಾತ್ರ. ಅಂದರೆ, ಮುಸಲ್ಮಾನರು ನಡೆಸುವ ಅನೇಕ ದಂಗೆಗಳ ಹಿಂದೆ ಕೈವಾಡ ಯಾರದ್ದಿರಬೇಕು ಹೇಳಿ? ಇಲ್ಲವಾದರೆ ಅಖಂಡ ಶ್ರೀನಿವಾಸರಿಗೆ ಟಿಕೆಟ್ ತಪ್ಪಿಸಿ, ‘ಮುಸಲ್ಮಾನ ಮುಖಂಡರ ವಿರೋಧ ಇದ್ದದ್ದರಿಂದ’ ಅಂತ ಡಿಕೆಶಿ ಏಕೆ ಹೇಳುತ್ತಿದ್ದರು? ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಕಾಂಗ್ರೆಸ್ಸಿಗೆ ವೋಟು ನೀಡುವುದು ಅಂದರೆ ಮತ್ತೊಮ್ಮೆ ಮುಸಲ್ಮಾನರು ಅಟ್ಟಹಾಸ ನಡೆಸಿ ಬೀದಿಗಿಳಿಯುವುದು ಎಂದರ್ಥ, ಟಿಪ್ಪು ಜಯಂತಿಯ ವೈಭವ ರಾಜ್ಯದ ಮೂಲೆ-ಮೂಲೆಯಲ್ಲೂ ಕಾಣುವುದು ಎಂದರ್ಥ, ಸಾಲು-ಸಾಲು ಹಿಂದೂ ಕಾರ್ಯಕರ್ತರ ಕಗ್ಗೊಲೆಗಳಾಗುವುದು ಎಂದರ್ಥ.

    ಈ ಬಾರಿ ಚುನಾವಣೆಯಲ್ಲಿ ಹಣ ಕಾವೇರಿ ನೀರಿಗಿಂತ ಜೋರಾಗಿ ಹರಿಯಲಿದೆ. ಚುನಾವಣೆಗೂ ಮುಂಚಿನ ಮೂರ್ನಾಲ್ಕು ದಿನ ಮತದಾರರಿಗೆ ಹಬ್ಬ. ನಾಯಕರಿಂದ ಹಂಚಲೆಂದು ಹಣ ಪಡೆದವರ ಕಥೆಯನ್ನು ಕೇಳಲೇಬೇಡಿ. ಕಾಂಗ್ರೆಸ್ಸು ದುಡ್ಡಿರುವವರನ್ನು ಹುಡು-ಹುಡುಕಿ ಆರಿಸಿಕೊಂಡಿದೆ. ಅವರು ಆಕಾಂಕ್ಷಿಗಳಿಂದಲೇ ಅರ್ಜಿಗೆ ಎರಡೆರಡು ಲಕ್ಷ ಪೀಕಿ ಹತ್ತಾರು ಕೋಟಿ ಮಾಡಿಕೊಂಡವರಲ್ಲವೇ! ಬಿಜೆಪಿ ಟಿಕೆಟ್ ಹಂಚುವಾಗ ಬಹುತೇಕ ಬ್ಯಾಂಕ್ ಬ್ಯಾಲೆನ್ಸ್ ನೋಡಲಿಲ್ಲವೆಂಬುದು ಸುವಿದಿತ. ಹೀಗಾಗಿ, ಇಲ್ಲಿನ ಬಹುತೇಕ ಹೊರೆ ಬೊಮ್ಮಾಯಿಯವರೇ ಹೊರಬೇಕೇನೋ! ಪ್ರಜಾಪ್ರಭುತ್ವವಾದ್ದರಿಂದ ಚುನಾವಣೆಯ ನೆಪದಲ್ಲಿ ಪ್ರತಿಯೊಬ್ಬರೂ ಅಧಿಕಾರದಲ್ಲಿದ್ದಾಗ ಗಳಿಸಿದ್ದನ್ನು ಕಕ್ಕಲೇಬೇಕು. ಮೊದಲೆಲ್ಲ ಸ್ವಲ್ಪ ಕೊಟ್ಟರೆ ಸಾಕಿತ್ತು. ಈಗ ಇತರೆಲ್ಲ ಕ್ಷೇತ್ರಗಳಂತೆ ಇಲ್ಲೂ ಸ್ಪರ್ಧೆ ಏರ್ಪಟ್ಟಿರುವುದರಿಂದ ಸಣ್ಣ-ಪುಟ್ಟ ಮೊತ್ತಕ್ಕೆ ಮತದಾರನೂ ಬಾಗಲಾರ. ಎಂತಹ ದುರಂತ ಅಲ್ಲವೇ! ಈ ಲೇಖನದ ಮುಕ್ಕಾಲುಭಾಗ ಜಾತಿ, ಹಣ, ಹೆಂಡಗಳೆಂಬ ಕೊಳಕು ಸಂಗತಿಯದ್ದೇ ಚರ್ಚೆಯಾಯ್ತು.

    ವಾಸ್ತವವಾಗಿ, ಚುನಾವಣೆಯ ವಿಚಾರದಲ್ಲಿ ಆಮೂಲಾಗ್ರ ಬದಲಾವಣೆಗೆ ನಾವೂ ಸಿದ್ಧವಾಗಬೇಕು. ಯಾವ ವ್ಯಕ್ತಿಗೂ ಸತತ ಎರಡನೇ ಬಾರಿ ಗೆದ್ದನಂತರ, ಮೂರನೇ ಬಾರಿ ಟಿಕೆಟ್ ನೀಡಬಾರದು. ಹತ್ತು ವರ್ಷ ಶಾಸಕನಾಗಿಯೂ ಏನನ್ನೂ ಕಡಿದು ಗುಡ್ಡೆ ಹಾಕದವ, ಮುಂದಿನ ಹತ್ತು ವರ್ಷದಲ್ಲಿ ಅದೇನು ಮಹಾ ಸಾಧಿಸಬಲ್ಲ ಹೇಳಿ? ಸತತ ಐದು ಬಾರಿ ಶಾಸಕ ಎನ್ನುವುದು ಹೆಗ್ಗಳಿಕೆಯಲ್ಲ. ಐದಾರು ಬಾರಿ ಶಾಸಕನಾದರೂ ಕ್ಷೇತ್ರವಿನ್ನೂ ಹಾಗೆಯೇ ಇದೆಯಲ್ಲ ಎಂಬ ಕಾರಣಕ್ಕೆ ಆ ಪ್ರತಿನಿಧಿ ನಾಚಿಕೆಪಟ್ಟುಕೊಳ್ಳಬೇಕು, ಅಲ್ಲವೇನು? ಜಾತಿಯ ಆಧಾರದ ಮೇಲೆ ಟಿಕೆಟ್ ಹಂಚುವುದಾದರೆ ಸಣ್ಣ-ಪುಟ್ಟ ಜಾತಿಗಳ ಪ್ರತಿಭಾವಂತರು ಎಂದೂ ರಾಜಕೀಯಕ್ಕೆ ಬರಲೇಬಾರದೇನು? ಅವರು ನೇತೃತ್ವ ವಹಿಸಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ನಡೆಸುವ ಕನಸು ಕಾಣಲೇಬಾರದೇನು? ಇದು ಮತದಾರರಾಗಿ ನಮ್ಮಲ್ಲೇ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ. ಪ್ರತಿಭಾವಂತನಿಗೆದುರಾಗಿ ನನ್ನ ಜಾತಿಯ ದಡ್ಡನನ್ನೂ, ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲದವನನ್ನೂ, ಪರಮಭ್ರಷ್ಟನನ್ನೂ ಆಯ್ದುಕೊಳ್ಳುತ್ತೇನೆಂದರೆ ಅದಕ್ಕಿಂತ ಹೇಸಿಗೆ ಯಾವುದಿದೆ! ದುರಂತ ಏನು ಗೊತ್ತೇ? ಹೀಗೆ ಜಾತಿಯವರನ್ನು ಆರಿಸಿಕೊಳ್ಳೋದು ಸಮಾಜದ ದಡ್ಡರೆಂದುಕೊಳ್ಳಬೇಡಿ, ಬುದ್ಧಿವಂತರು ಕೂಡ. ಎಲ್ಲವನ್ನೂ ತ್ಯಾಗ ಮಾಡಿ ಸನ್ಯಾಸ ಸ್ವೀಕರಿಸಿದ ಸ್ವಾಮಿಗಳೂ ತಮ್ಮ ಜಾತಿಗಾಗಿ ಲಾಬಿ ಮಾಡುವುದನ್ನು ನೋಡಿದಾಗ ತ್ಯಾಗವೆಂಬ ಪದ ಅದೆಷ್ಟು ಮೌಲ್ಯ ಕಳಕೊಂಡಿದೆ ಎಂದು ಅರಿವಾಗುತ್ತದೆ.

    ಆದರೆ ಕಾರ್ವೇಡದ ನಡುವೆಯೂ ಒಂದು ಬೆಳ್ಳಿರೇಖೆ ಯಾವುದು ಗೊತ್ತೇ? ಅದು ನರೇಂದ್ರ ಮೋದಿಯೇ. ಅವರು ಯಾವ ಜಾತಿಯವರೆಂದು ಅನೇಕರಿಗೆ ಗೊತ್ತಿಲ್ಲ. ಅವರು ತಮ್ಮ ಜಾತಿಯವರೆಂದು ಯಾರನ್ನೂ ಮಂತ್ರಿ ಮಾಡಿದ ಉದಾಹರಣೆ ಇಲ್ಲ. ಅವರೆಂದಿಗೂ ತಮ್ಮ ಜಾತಿಯ ಮಠಾಧೀಶನಿಗೆ ಮತ್ತೆ-ಮತ್ತೆ ಹೋಗಿ ಅಡ್ಡಬಿದ್ದುದನ್ನು ಕಂಡವರಿಲ್ಲ. ತಥಾಕಥಿತ ಮೇಲ್ವರ್ಗದ ಮಠಾಧೀಶರಿರಲಿ, ಕೆಳವರ್ಗದವರೇ ಇರಲಿ ಮೋದಿ ಎದುರು ನಿಂತಾಗ ಗೌರವದಿಂದ ನಮಿಸುತ್ತಾರೆ. ಜನರೂ ಅಷ್ಟೇ, ಮೋದಿಯ ಭಾವಚಿತ್ರ ಕೊಳಕಾಗಿದ್ದರೆ ತಮ್ಮ ಬಟ್ಟೆಯಿಂದಲೇ ಅದನ್ನು ಒರೆಸಿ, ’ದೇವರಪ್ಪಾ’ ಅಂತಾರೆ. ಅವರು ಜಾತಿಯ ವಿಷಯ ತೆಗೆಯಲಿಲ್ಲ, ಹಣದ ಮಾತೆತ್ತಲಿಲ್ಲ. ಭಾರತದ ಮೌಲ್ಯಗಳಿಗೆ ತಕ್ಕಂತೆ ಬದುಕಿದರು. ಭೂಮಿಗೆ ಹತ್ತಿರವಾಗಿ ಬದುಕಿದರು. ಹೀಗಾಗಿಯೇ ಅವರು ಪ್ರಧಾನಿಯಾಗಿರುವುದನ್ನು ಎಲ್ಲ ಜಾತಿಯ, ಎಲ್ಲ ವರ್ಗದ ಮತ್ತು ಎಲ್ಲ ಪಕ್ಷದ ಜನ ಸಂಭ್ರಮಿಸುತ್ತಾರೆ. ಜಾತಿಯ ಕಾರಣಕ್ಕೆ ಮುಖ್ಯಮಂತ್ರಿಯ ಪಟ್ಟದಲ್ಲಿ ಕುಳಿತುಕೊಳ್ಳಬೇಕು ಎನ್ನುವವರಿಗೆ ಇವೆಲ್ಲ ಅರ್ಥವಾಗೋದು ಬಹಳ ಕಷ್ಟ.

    ಮೋದಿ ಕರ್ನಾಟಕಕ್ಕೆ ಬರಲಿದ್ದಾರೆ. ಇನ್ನು ಕೆಲವು ದಿನ ಮತ್ತೆ ಮತ್ತೆ ಬರಲಿದ್ದಾರೆ. ಅವರು ಬರುವವರೆಗೆ ಅಷ್ಟೇ ಉಳಿದವರ ಹವಾ. ಅವರು ಬಂದಮೇಲೆ ಅವರದ್ದೇ ಹವಾ. ಆ ತಣ್ಣನೆ ಗಾಳಿ ಜೋರಾಗಿ ಬೀಸಲಿ, ಬಿಸಿಲ ಬೇಗೆಯನ್ನು ಕಡಿಮೆ ಮಾಡಿ ರಾಜ್ಯಕ್ಕೆ ತಂಪು ತರುವವರನ್ನು ಅಧಿಕಾರಕ್ಕೆ ಕೂಡಿಸಲಿ. ಏನಂತೀರಿ?

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ವಿಷ್ಣುವರ್ಧನ್ ಗುಂಗು: ಸೆಟ್ಟೇರಿತು ಮತ್ತೊಂದು ಚಿತ್ರ ‘ಮಾರ್ಗರೇಟ್-ಲವರ್ ಆಫ್ ರಾಮಾಚಾರಿ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts