More

    ಹೊಗರೇಕಾನ್‌ಗಿರಿಯಲ್ಲಿ ಬ್ರಹ್ಮರಥೋತ್ಸವ

    ಚಿಕ್ಕಮಗಳೂರು: ಹೊಗರೇಕಾನ್ ಗಿರಿಯಲ್ಲಿ ಶ್ರೀಸಿದ್ದೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ಭಕ್ತಾದಿಗಳ ಶ್ರದ್ಧಾ ಭಕ್ತಿಯೊಂದಿಗೆ ನಡೆಯಿತು. ಪಶ್ಚಿಮಘಟ್ಟದ ಸಾಲಿನ ಸೆರೆಗಿನಲ್ಲಿರುವ ಬೀರೂರು ಹೋಬಳಿಯ ಹೊಗರೇಕಾನ್‌ಗಿರಿ ಸಮುದ್ರಮಟ್ಟದಿಂದ ಸುಮಾರು ೩,೦೦೦ಅಡಿಗೂ ಎತ್ತರದ ಕುರುಚಲು ಕಾಡಿನಿಂದ ಆವೃತ್ತವಾದ ಜೀವವೈವಿಧ್ಯತೆಯ ತಾಣವಾಗಿದೆ. ಇಲ್ಲಿಯ ಗುಹಾಂತರ ದೇವಾಲಯದಲ್ಲಿ ನೆಲೆಸಿರುವ ಶ್ರೀಸಿದ್ದೇಶ್ವರಸ್ವಾಮಿ ಬ್ರಹ್ಮರಥೋತ್ಸವ ಇತ್ತೀಚೆಗೆ ಅಜಮಭಣೆಯಿಂದ ನೆರವೇರಿತು.

    ಶ್ರೀಸ್ವಾಮಿಯ ಉತ್ಸವ ನೂರಾರು ಜನರ ಸಮ್ಮುಖದಲ್ಲಿ ನಡೆಯಿತು. ಬೆಳಗ್ಗೆ ಹೊಗರೇಕಾನ್ ಮೂಲಮೂರ್ತಿಗೆ ಪಂಚಾಭಿಷೇಕ, ಅಷ್ಟೋತ್ತರ, ಪಾದಪೂಜೆ, ಪಲ್ಲಕ್ಕಿಪೂಜೆ, ಬಾಗಿಲು ತಡೆಯುವ ಕಾರ್ಯಕ್ರಮದ ನಂತರ ಓಕಳಿ ನಡೆಯಿತು.
    ಏ.೧೯ರ ಶುಕ್ರವಾರ ಧರ್ಮಧ್ವಜಾರೋಹಣದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ಮಂಗಳವಾರ ಸರ್ಯೋದಯದಲ್ಲಿ ಮೂಲಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ, ೧೦೮ಅಷ್ಟೋತ್ತರ ಸೇವೆ, ಪುಷ್ಪಾಲಂಕಾರದ ನಂತರ ತೇರಿನ ಕಳಸ ಸ್ಥಾಪನಾ ಪೂಜೆ ನಡೆಯಿತು. ದಾಸಪ್ಪಗಳಿಂದ ಜಾಗಟೆ, ಶಂಖನಾದ ಸೇವೆಯಾಯಿತು. ೧೦೧ ಎಡೆಸೇವೆಯ ನಂತರ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಮಂಗಳವಾದ್ಯದೊಂದಿಗೆ ಜಂಗಮರ ತಂಡದ ಶಿವಭಜನೆಯೊಂದಿಗೆ ರಥಕ್ಕೆ ಕರೆತಂದು ಪ್ರತಿಷ್ಠಾಪಿಸಲಾಯಿತು. ಬಲಿಪೂಜೆ ನೆರವೇರಿತು.
    ಕಳೆದವರ್ಷ ಬಾವುಟ ಹರಾಜು ಪಡೆದಿದ್ದ ದುಗ್ಲಾಪುರದ ಪರಮೇಶ್ವರಪ್ಪ ಕುಟುಂಬ ಪ್ರಥಮಪೂಜೆ ಸಲ್ಲಿಸಿತು. ಶ್ರೀಸಿದ್ದೇಶ್ವರಸ್ವಾಮಿ ಜೀರ್ಣೋದ್ಧಾರಕ್ಕೆ ಸಹಕರಿಸಿದವರಿಗೆ ಸಮಿತಿ ಅಧ್ಯಕ್ಷ ಎಚ್.ಎಚ್.ಉಮಾಮಹೇಶ್ವರಯ್ಯ, ಉಸ್ತುವಾರಿ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಸ್ಥಳೀಯ ವೀರಶೈವ ಭಕ್ತ ಮಂಡಳಿ ಅಧ್ಯಕ್ಷ ಹರಿಶ್ಚಂದ್ರಕುಮಾರ್ ಕೃತಜ್ಞತೆ ಸಲ್ಲಿಸಿದರು. ಅರ್ಚಕರಾದ ರುದ್ರಯ್ಯ, ಸಿದ್ದಯ್ಯ, ಕುಮಾರಸ್ವಾಮಿ ತಂಡದ ಮಹಾಮಂಗಳಾರತಿಯ ನಂತರ ಸುತ್ತಲ ಹತ್ತಾರು ಊರುಗಳ ಪ್ರತಿನಿಧಿಗಳು ರಥದ ಚಕ್ರಕ್ಕೆ ೧೦೧ ತೆಂಗಿನಕಾಯಿಯನ್ನು ಒಡೆದು ಸಮರ್ಪಿಸಿದ ನಂತರ ಕರ್ಪೂರಾರತಿ ನಡೆಯಿತು. ಮುಂದಿನವರ್ಷದ ಜಾತ್ರೆ-ಮೊದಲಪೂಜೆ ಸಲ್ಲಿಸುವ ಅವಕಾಶಕ್ಕಾಗಿ ಬಾವುಟದ ಹರಾಜು ನಡೆದಿದ್ದು ೧.೫ಲಕ್ಷರೂ.ಗಳಿಗೆ ಹರಾಜು ಪಡೆಯಲಾಯಿತು.
    ಭಕ್ತಾದಿಗಳು ಶ್ರೀಸಿದ್ದೇಶ್ವರಸ್ವಾಮಿ ಜಯಘೋಷದೊಂದಿಗೆ ದಿವ್ಯ ರಥವನ್ನು ಮುನ್ನಡೆಸಿದರು. ಬಾಳೆಹಣ್ಣು, ಹೂವುಗಳನ್ನು ಸ್ಪರ್ಧೋಪಾದಿಯಲ್ಲಿ ಕಳಸಕ್ಕೆ ಎಸೆದು ಭಕ್ತಿ ಸಮರ್ಪಿಸಿ ಅದನ್ನೆ ಪ್ರಸಾದರೂಪವಾಗಿ ಪಡೆದುಕೊಂಡರು. ೧೦೦ಅಡಿ ಮುನ್ನಡೆದ ನಂತರ ರಥವನ್ನು ಸ್ಥಗಿತಗೊಳಿಸಲಾಯಿತು. ಗಣಂಗಳ ಸಂತರ್ಪಣೆಯ ನಂತರ ನೆರೆದಿದ್ದ ಸಾವಿರಾರು ಭಕ್ತರಿಗೆ ರಾಗಿಮುದ್ದೆ ಸೊಪ್ಪಿನಸಾರು, ಹಲಸಿನಸಾರು, ಮಾವಿನಚಟ್ನಿ ಗೊಜ್ಜು, ಪಾಯಸ, ಅನ್ನ, ಮಜ್ಜಿಗೆಯ ಪ್ರಸಾದ ಭೋಜನ ಸಂತರ್ಪಣೆಯಾಯಿತು. ಸಂಜೆ ರಥವನ್ನು ವಾಪಾಸ್ಸು ಕರೆತಂದು ಉತ್ಸವಮೂರ್ತಿಗೆ ಪೂಜೆಸಲ್ಲಿಸಿ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts