More

    ಜನಸಾಮಾನ್ಯರಿಗೆ ಆಸರೆಯಾಗುವ ಕಾರ್ಯಕ್ರಮ ಜಾರಿ

    ಗಂಗಾವತಿ: ಕೇಂದ್ರ ಸರ್ಕಾರ ಶೈಕ್ಷಣಿಕ ಬೆಳವಣಿಗೆಗೆ ಆದ್ಯತೆ ನೀಡಿದ್ದು, ಉನ್ನತ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಕೇಂದ್ರ ತೆರೆಯುವ ಮೂಲಕ ಅಕ್ಷರ ಕ್ರಾಂತಿಗೆ ಮುಂದಾಗಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

    ನಗರದ ಸಾಯಿಬಾಬಾ ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ಕೇಂದ್ರೀಯ ವಿದ್ಯಾಲಯ ಕಟ್ಟಡ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಜನಸಾಮಾನ್ಯರ ಬದುಕಿಗೆ ಆಸರೆಯಾಗುವ ಕಾರ್ಯಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ್ದು, ಕೇಂದ್ರೀಯ ವಿದ್ಯಾಲಯಗಳ ಸಂಖ್ಯೆ ಹೆಚ್ಚಿಸುವ ಮೂಲಕ ಬಡವರ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಿದ್ದಾರೆ.

    ನಗರಕ್ಕೆ ರೈಲ್ವೆ, ಕೇಂದ್ರೀಯ ವಿದ್ಯಾಲಯ, ಅಮೃತ ಸಿಟಿ ಯೋಜನೆ ಸಾಕಾರಗೊಂಡಿದ್ದು ಬಿಜೆಪಿ ಆಡಳಿತಾವಧಿಯಲ್ಲಿ. ಗಿಣಿಗೇರಾ ಮೆಹಬೂಬ್‌ನಗರ ರೈಲ್ವೆ ಯೋಜನೆ ಸಿಂಧನೂರು ವರೆಗೂ ವಿಸ್ತರಿಸಿದ್ದು, ರೈಲು ಸಂಚಾರ ಫೆಬ್ರವರಿ ಮಾಸಾಂತ್ಯದಲ್ಲಿ ಶುರುವಾಗಲಿದೆ. ಗದಗ, ವಾಡಿ ರೈಲ್ವೆ ಯೋಜನೆ ಶೀಘ್ರವೇ ಆರಂಭವಾಗಲಿದೆ. ದರೋಜಿ ಗಂಗಾವತಿ ರೈಲು ಮಾರ್ಗಕ್ಕೆ ಕೇಂದ್ರ ಒಪ್ಪಿಗೆ ನೀಡಿದ್ದು, ಬಾಗಲಕೋಟೆವರೆಗೂ ವಿಸ್ತರಿಸಲಾಗುವುದು. ಇದರಿಂದ ಕನಕಗಿರಿ, ಕುಷ್ಟಗಿ, ಹುನಗುಂದ ಇತರ ತಾಲೂಕುಗಳಿಗೆ ರೈಲ್ವೆ ಯೋಜನೆ ದೊರೆಯಲಿದೆ ಎಂದರು.

    ಡಿಸಿ ನಲಿನ್ ಅತುಲ್ ಮಾತನಾಡಿ, ಕೇಂದ್ರೀಯ ವಿದ್ಯಾಲಯದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಸುಸಜ್ಜಿತ ಕಟ್ಟಡದೊಂದಿಗೆ ಮೂಲ ಸೌಕರ್ಯ ಒದಗಿಸಲಾಗಿದೆ ಎಂದರು. ಕೇಂದ್ರೀಯ ವಿದ್ಯಾಲಯ ಸಂಘಟನೆ ಉಪ ಆಯುಕ್ತ ಪಿ.ಸಿ.ರಾಜು, ಪ್ರಾಚಾರ್ಯ ಉಮೇಶ ಪ್ರಜಾಪತಿ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ.ವೀರಪ್ಪ, ಕಾಡಾ ಮಾಜಿ ಅಧ್ಯಕ್ಷರಾದ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಎಚ್.ಎಸ್.ಗಿರೇಗೌಡ, ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ದರಾಮಯ್ಯಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ ಇತರರಿದ್ದರು.

    ಸಂಗಾಪುರ ಕೆರೆ ಅಭಿವೃದ್ಧಿಗೆ ಮನವಿ..

    ತಾಲೂಕಿನ ಸಂಗಾಪುರದ ಐತಿಹಾಸಿಕ ಶ್ರೀಲಕ್ಷ್ಮೀನಾರಾಯಣ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಒತ್ತಾಯಿಸಿ ಚಾರಣ ಬಳಗ ಮತ್ತು ಕೆರೆ ಅಭಿವೃದ್ಧಿ ಸಮಿತಿ ಸದಸ್ಯರು ಸಂಸದ ಕರಡಿ ಸಂಗಣ್ಣಗೆ ಮನವಿ ಸಲ್ಲಿಸಿದರು. ಕೇಂದ್ರೀಯ ವಿದ್ಯಾಲಯ ಉದ್ಘಾಟನೆಗೆ ಗಂಗಾವತಿಗೆ ಬಂದಿದ್ದ ಸಂಸದರನ್ನು ಭೇಟಿ ಮಾಡಿದ ಸದಸ್ಯರು, ಕೆರೆಯ ಬಗ್ಗೆ ಮಾಹಿತಿ ನೀಡಿದರು. ಕೃಷಿ ಭೂಮಿಗೆ ನೀರು ಒದಗಿಸುವುದರ ಜತೆಗೆ ಜಲಚರಗಳಿಗೂ ಅನುಕೂಲವಾಗಲಿದೆ. ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ನೆರವಾಗಲಿದ್ದು, ವಿಶೇಷ ಅನುದಾನ ನೀಡುವಂತೆ ಚಾರಣ ಬಳಗದ ಸದಸ್ಯ ಡಾ.ಶಿವಕುಮಾರ ಮಾಲಿ ಪಾಟೀಲ್, ಸದಸ್ಯರಾದ ಮಂಜುನಾಥ ಗುಡ್ಲಾನೂರು, ಕಮರ್‌ಪಾಷಾ ಇತರರು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts