

ಭೋಪಾಲ್: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಕರೆಯಲ್ಪಡುತ್ತಿರುವ ಪಂಚರಾಜ್ಯ ಚುನಾವಣೆಯ ಫಲಿತಾಂಶ ಡಿಸೆಂಬರ್ 03ರಂದು ಹೊರಬೀಳಲಿದ್ದು, ಈ ಮಧ್ಯೆ ಎಕ್ಸಿಟ್ ಪೋಲ್ಗಳ ರಿಸಲ್ಟ್ ಆಧರಿಸಿ ರಾಜಕೀಯ ಪಕ್ಷಗಳ ನಾಯಕರು ಗೆಲವು ತಮ್ಮದೇ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಮಾತ್ರ ಈ ಬಗ್ಗೆ ಅಪಸ್ವರ ತೆಗೆದಿದ್ದು ಬಿಜೆಪಿ ವಿರುದ್ಧ ಆರೋಪಿಸಿದೆ.
ಎಕ್ಸಿಟ್ ಪೋಲ್ ವರದಿಗಳ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಮಲ್ನಾಥ್, ಅಧಿಕಾರಿಗಳ ಮೇಲೆ ಒತ್ತಡ ಹೇರಲು ಉದ್ದೇಶಪೂರ್ವಕವಾಗಿ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿದೆ. ಕಾರ್ಯಕರ್ತರು ಯಾರು ಹೆದರುವ ಅವಶ್ಯಕತೆಯಿಲ್ಲ ಕಾಂಗ್ರೆಸ್ ಈಗಾಗಲೇ ಗೆದ್ದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಪರವಾದ ವಾತವರಣ ನಿರ್ಮಾಣವಾಗಿದ್ದು, ಸೋಲುವ ಭೀತಿಯಿಂದ ಬಿಜೆಪಿ ಈ ರೀತಿಯ ಸುಳ್ಳು ಫಲಿತಾಂಶಗಳನ್ನು ಪ್ರಕಟಿಸುತ್ತಿದೆ. ಫಲಿತಾಂಶ ಪ್ರಕಟವಾಗುವ ಮುನ್ನ ಬಿಜೆಪಿ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಈ ರೀತಿಯ ತಂತ್ರ ಅನುಸರಿಸುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹೆದರದೆ ಭಾನುವಾ ಫ್ರಕಟವಾಗುವ ಫಲಿತಾಂಶದ ಮೇಲೆ ಭರವಸೆ ಇಡಿ ಎಂದು ಹೇಳಿದ್ದಾರೆ.
ಈ ರೀತಿಯ ಸಂಚು ಯಾವತ್ತಿಗೂಈ ಯಶಸ್ವಿಯಾಗುವುದಿಲ್ಲ. ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಬಿಜೆಪಿಗೆ ಈ ಬಾರಿ ಚುನಾವಣೆಯಲ್ಲಿ ಸೋಲು ನಿಶ್ಚಿತವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವುದು ಖಚಿತ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಮಲ್ನಾಥ್ ಭವಿಷ್ಯ ನುಡಿದಿದ್ದಾರೆ.