More

    ಸಾರ್ವತ್ರಿಕ ಲೋಕಸಭಾ ಚುನಾವಣೆ : ವಿವಿಧ ಸಮಿತಿ ರಚನೆ

    ಗದಗ: ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆ ಕಾರ್ಯಕ್ಕೆ  ವಿವಿಧ ನೋಡಲ್ ಅಧಿಕಾರಿಗಳನ್ನು ಈಗಾಗಲೇ ನೇಮಕ ಮಾಡುವ ಮೂಲಕ ಸಮಿತಿಗಳನ್ನು ರಚಿಸಲಾಗಿದೆ.  ನೋಡಲ್ ಅಧಿಕಾರಿಗಳು  ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗದಲ್ಲಿ ಬುಧವಾರದಂದು ಲೋಕಸಭಾ ಚುನಾವಣೆ ಸಿದ್ಧತೆಗಳ ಕುರಿತಂತೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಮಾದರಿ ನೀತಿ ಸಂಹಿತೆ ಜಾರಿಯಾದ ತಕ್ಷಣದಿಂದ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚುರಪಡಿಸಿದ ವಿವಿಧ ಯೋಜನೆಗಳ, ನಾಯಕರುಗಳ ಪೋಸ್ಟರ್ಸ, ಬ್ಯಾನರ್, ಕಟೌಟ್‍ಗಳನ್ನು ತಕ್ಷಣ ತೆರವುಗೊಳಿಸಬೇಕು. ಜನಪ್ರತಿನಿಧಿಗಳಿಗೆ ನೀಡಲಾದ ಸರಕಾರಿ ವಾಹನಗಳನ್ನು ಹಿಂಪಡೆಯಬೇಕು. ವಿವಿಧ ರಾಜಕೀಯ ಪಕ್ಷಗಳು ನಡೆಸುವ ಸಭೆ ಸಮಾರಂಭಗಳಿಗೆ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.  ಅನುಮತಿ ಇಲ್ಲದೇ ಕಾರ್ಯಕ್ರಮ ನಡೆದಲ್ಲಿ  ನಿಯಮಾನುಸಾರ ಕ್ರಮ ವಹಿಸಬೇಕೆಂದು ಸೂಚಿಸಿದರು.

    ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಬ್ಯಾಂಕ್ ವಹಿವಾಟಿನ ಪರಿಶೀಲನೆ ನಡೆಸಲು ಬ್ಯಾಂಕ್‍ನ ನೋಡಲ್ ಅಧಿಕಾರಿಗಳ ಸಭೆಯನ್ನು ಜರುಗಿಸಬೇಕು. ಚೆಕ್‍ಪೋಸ್ಟ್‍ನಲ್ಲಿ ಬರುವ ವಾಹನಗಳ ತಪಾಸಣೆ ಕಾರ್ಯ ಶಿಸ್ತುಬದ್ಧವಾಗಿ ನಿರ್ವಹಿಸಬೇಕು. ಚುನಾವಣೆಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳಿದ್ದರೆ ಚುನಾವಣಾ ಸಹಾಯವಾಣಿ ಸಂಖ್ಯೆ 1950 ಕ್ಕೆ  ಕರೆ ಮಾಡಿ ಸಲಹೆ ಪಡೆಯಬಹುದಾಗಿದೆ. ಒಟ್ಟಾರೆಯಾಗಿ ವಿವಿಧ ನೋಡಲ್ ಅಧಿಕಾರಿಗಳು ತಮಗೆ ವಹಿಸಿದ ಕರ್ತವ್ಯವನ್ನು ಕಟ್ಟುನಿಟ್ಟಾಗಿ ನಿರ್ವಹಿಸಿ ಚುನಾವಣಾ ಕಾರ್ಯ ಯಶಸ್ವಿಗೊಳಿಸಬೇಕು ಎಂದರು.  

    ಪತ್ರಿಕೆಗಳಲ್ಲಿ ಪ್ರಕಟವಾಗುವ, ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುವ ಸಂದರ್ಶನ, ಏಕ ವ್ಯಕ್ತಿ ಕೇಂದ್ರಿತ ಸುದ್ದಿಗಳ ಮೇಲೆ ನಿಗಾ ವಹಿಸಿ, ಪೇಯ್ಡ್ ಸುದ್ದಿಯ ಕುರಿತು ಎಚ್ಚರಿಕೆ ವಹಿಸಬೇಕು. ಚುನಾವಣೆಗಾಗಿ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಪತ್ರಿಕೆಗಳು, ಸುದ್ದಿವಾಹಿನಿಗಳು ಮುಂತಾದ ಮಾಧ್ಯಮಗಳ ಮೂಲಕ ನೀಡುವ ಜಾಹೀರಾತುಗಳ ಮೇಲೆ, ಮಾಧ್ಯಮಗಳಲ್ಲಿ ಬರುವ ಸುದ್ದಿಗಳ ಮೇಲೆ ಸಮಿತಿಯು ನಿಗಾ ವಹಿಸಬೇಕು. ಜಾಹೀರಾತು ವೆಚ್ಚದ ಮಾಹಿತಿಯನ್ನು ಆರ್‍ಒ, ಎಕ್ಷ್ಪೆಂಡಿಚರ್ ಅಧಿಕಾರಿಗೆ ಪ್ರತಿ ದಿನ ನೀಡಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತು, ಸುದ್ದಿಗಳನ್ನು ಗುರುತಿಸಿ ವರದಿ ಮಾಡಬೇಕು ಎಂದು ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲ್ವಿಚಾರಣಾ ಸಮಿತಿಯ ಕಾರ್ಯಗಳು, ಜವಾಬ್ದಾರಿಗಳ ಕುರಿತು  ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು  ನಿರ್ದೇಶನ ನೀಡಿದರು.

    ಸಭೆಯಲ್ಲಿ ಇವಿಎಂ ಮ್ಯಾನೇಜ್‍ಮೆಂಟ್, ಪೋಸ್ಟಲ್ ಬ್ಯಾಲೆಟ್, ಇಟಿಸಿ ( ಚುನಾವಣಾ ತರಬೇತಿ ಪ್ರಮಾಣ ಪತ್ರ),  ಅಂಗವಿಕಲರು ಹಾಗೂ 80 ವರ್ಷದ ಹಿರಿಯ ನಾಗರಿಕರಿಗೆ ಮನೆಗೆ ತೆರಳಿ ಮತದಾನದ ವ್ಯವಸ್ಥೆ ಕುರಿತು ಚರ್ಚಿಸಲಾಯಿತು.  

    ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ.ಕಂಬಾಳಿಮಠ, ಲೀಡ್ ಬ್ಯಾಂಕ್ ಮ್ಯಾನೇಜರ್ ಜಬ್ಬಾರ ಅಹ್ಮದ್ ,  ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ  ಎಂ.ಎ. ರಡ್ಡೇರ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts