More

    ಮಮತೆಯ ಮಡಿಲು ಈ ಅಮ್ಮ: ಭಾವನೆಗಳ ಬುತ್ತಿ ಬಿಚ್ಚಿದ್ದಾರೆ ಓದುಗರು…

    ಮಮತೆ, ತ್ಯಾಗ, ಕರುಣೆಯ ಪ್ರತಿರೂಪವಾಗಿರುವ ಅಮ್ಮನ ದಿನ ಇಂದು. ಈ ನಿಮಿತ್ತ, ಬದುಕು ರೂಪಿಸಿರುವ ಅಮ್ಮನನ್ನು ಸ್ಮರಿಸಲು ವಿಜಯವಾಣಿ ಕರೆ ನೀಡಿತ್ತು. ಇದಕ್ಕೆ ನಾಲ್ಕು ಸಾವಿರಕ್ಕೂ ಅಧಿಕ ಓದುಗರು ಇ-ಮೇಲ್ ಮೂಲಕ ಅನಿಸಿಕೆ ಹಂಚಿಕೊಂಡಿದ್ದು, ತಮ್ಮ ಜೀವನದಲ್ಲಿ ವಿಶೇಷ ಪಾತ್ರ ವಹಿಸಿರುವ ಅಮ್ಮನನ್ನು ನೆನೆದಿದ್ದಾರೆ. ಈ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

    ತಾಯಿಯ ಕೊನೆಯ ಆಸೆ ಕಾಶಿ ದರ್ಶನ

    ಮಮತೆಯ ಮಡಿಲು ಈ ಅಮ್ಮ: ಭಾವನೆಗಳ ಬುತ್ತಿ ಬಿಚ್ಚಿದ್ದಾರೆ ಓದುಗರು...ಪೋಲಿಯೋದಿಂದ ನನ್ನ ಅಮ್ಮನ ಬಲಗಾಲಿನ ಶಕ್ತಿ ಕಡಿಮೆ ಆಗಿ ನಡೆಯಲು ಸಾಧ್ಯವಾಗಿರಲಿಲ್ಲ. ಇದೇ ಸಂದರ್ಭದಲ್ಲಿ ಮನೆಯಲ್ಲಿ ಬಟ್ಟೆ ಒಣಹಾಕಲು ಹೋದ ಅಮ್ಮ, ಜಾರಿ ಬಿದ್ದಳು. ಎಡಗಾಲು ಆಪರೇಷನ್ ಆಯಿತು. ಗ್ಲೊಕೊಮಾದಿಂದ ಒಂದು ಕಣ್ಣು ಕಳೆದುಕೊಂಡಳು. ಇನ್ನೊಂದು ಕಣ್ಣಿನ ಆಪರೇಷನ್ ಕೂಡ ಆಯಿತು. ಈ ಕಾರಣಗಳಿಂದ ಅನೇಕ ವರ್ಷ ಎಲ್ಲಿಯೂ ಹೊರಗಡೆ ಆಕೆ ಹೋಗಲು ಆಗಲಿಲ್ಲ. ಮನೆಯಲ್ಲಿಯೇ ಆಕೆ ಅನೇಕ ವರ್ಷ ಇದ್ದುದರಿಂದ ಇತ್ತೀಚೆಗೆ ಕಲಬುರಗಿ ಜಿಲ್ಲೆಯ ಗುಡ್ಡದ ಮೇಲೆ ಕಟ್ಟಿಸಿದ ವೈಷ್ಣವಿ ದೇವಿ ದೇವಸ್ಥಾನಕ್ಕೆ ಗಾಲಿ ಖುರ್ಚಿಯ ಮೇಲೆ ಕರೆದೊಯ್ದಾಗ ತೀರಾ ಖುಷಿಪಟ್ಟಳು. ನನ್ನ ಜೀವನ ಸಾರ್ಥಕವಾಯಿತು ಎಂದುಕೊಂಡೆ. ಮರಳಿ ಮನೆಗೆ ಬರುವಾಗ ಇನ್ನೊಂದು ಆಸೆ ಮುಂದಿಟ್ಟಳು. ನೋಡಪಾ ಕಣ್ ಇರೋತನಕಾ ಕಾಶಿ ನೋಡಬೇಕು ಅಂತಾರೆ. ನನ್ನ ಇನ್ನೊಂದು ಕಣ್ ಇರೋತನಕ ಅದನ ನೋಡಬೇಕಪಾ ಎಂದಳು. ನನಗೆ ಸುಟ್ಟ ಗಾಯದ ಮೇಲೆ ಬರೆ ಎಳೆದ ಅನುಭವ ಆಯಿತು. ಏಕೆಂದರೆ ಎಷ್ಟೋ ಮಂದಿಗೆ ಎಲ್ಲಾ ಅನುಕೂಲ ಇದ್ದರೂ, ತಮ್ಮ ತಾಯಿಯನ್ನು ಎಲ್ಲಿಯೂ ಕರೆದುಕೊಂಡು ಹೋಗಲು ಆಗುವುದಿಲ್ಲ. ಆದರೆ ಈ ಪರಿಸ್ಥಿತಿಯಲ್ಲಿಯೂ ನಾನು ಕರೆದುಕೊಂಡು ಬಂದೆ. ಈ ಕ್ಷಣ ನನಗೆ ಗೌತಮ ಬುದ್ಧನ ‘ಆಸೆಗೆ ಕೊನೆಯಿಲ್ಲ’ ಮಾತು ನೆನಪಿಗೆ ಬಂತು. ಇಲ್ಲಿ ನನ್ನ ತಾಯಿಯ ಆಸೆ ತಪ್ಪಲ್ಲ. ಈ ಆಸೆ ಈಡೇರಿಸುವ ತವಕ ನನ್ನಲ್ಲಿ ಉಳಿದುಕೊಂಡಿದೆ.
    | ಶಿವರಾಜ ಎಸ್. ಅಂಡಗಿ ಅಧ್ಯಕ್ಷ, ವಚನೊತ್ಸವ ಪ್ರತಿಷ್ಠಾನ ಯುವ ಘಟಕ, ಕಲಬುರಗಿ

    ಬಾಯಲ್ಲಿ ಸಿಲುಕಿತ್ತು ಕಡ್ಡಿ, ಅಬ್ಬಾ!

    ಮಮತೆಯ ಮಡಿಲು ಈ ಅಮ್ಮ: ಭಾವನೆಗಳ ಬುತ್ತಿ ಬಿಚ್ಚಿದ್ದಾರೆ ಓದುಗರು...ಅಂದು ನನ್ನೂರಿನ ಜಾತ್ರೆ, ಮನೆಗೆ ನೆಂಟರಿಷ್ಟರು ಬಂದಿದ್ದರು. ಅವರ ಜತೆಗೂಡಿ ಪುಲಾವು ತಿನ್ನುವಾಗ ಅದಕ್ಕೆ ಹಾಕಿದ ಪತ್ರೆಎಲೆಯ ಕಡ್ಡಿ ನನ್ನ ಗಂಟಲಲ್ಲಿ ಸಿಕ್ಕಿಕೊಂಡಿತು. ನೀರು ಕುಡಿದೆ, ಕ್ಯಾಕರಿಸಿದೆ,ಏನೂ ಪ್ರಯೋಜನವಾಗಲಿಲ್ಲ. ಬರಬರುತ್ತ ಉಸಿರು ಸಿಕ್ಕಿಕೊಂಡ ಹಾಗಾಯಿತು. ಕಣ್ಣಲ್ಲಿ ನೀರು ಜಿನುಗಲಾರಂಭಿಸಿತು. ಏನು ಮಾಡಿದರೂ ಹೊರಬರುತ್ತಿರಲಿಲ್ಲ. ನನ್ನಮ್ಮನ ಉಸಿರೇ ನಿಂತಂತಾಗಿಹೋಯಿತು. ಏನೇನೋ ಮಾಡಿದಳು. ಪ್ರಯೋಜನ ಆಗಲಿಲ್ಲ. ಕೊನೆಗೆ ಮೊಸರನ್ನವನ್ನು ಮೆತ್ತಗೆ ಮಾಡಿ ಕಲಿಸಿ ತುತ್ತು ತಿನ್ನಿಸಲು ಬಂದಾಗ, ಮೊದಲೇ ಒದ್ದಾಡುತ್ತಿದ್ದ ನನಗೆ ವಿಪರೀತ ಕೋಪ ಬಂದು ಅವಳ ಕೈ ಕೊಸರಿಬಿಟ್ಟೆ, ಆದರೂ ಪಟ್ಟು ಬಿಡದ ಅಮ್ಮ ತಿನ್ನಿಸಿಯೇ ಬಿಟ್ಟಳು. ಪವಾಡವೋ ಎಂಬಂತೆ, ಗಂಟಲು ಸರಾಗವಾಗಿ ಬಿಟ್ಟಿತು. ಮೊಸರನ್ನದೊಡನೆ ಆ ಕಡ್ಡಿಯೂ ನನ್ನ ಹೊಟ್ಟೆಯನ್ನು ಸೇರಿಬಿಟ್ಟಿತ್ತು. ಅಮ್ಮನಿಂದ ನನಗೆ ಮರುಜೀವ ಸಿಕ್ಕಿತು.
    | ಜಯಶ್ರೀ ಮನೋಹರ ಕುಲಕರ್ಣಿ ಶಿರಸ್ತೇದಾರರು, ಜಿಲ್ಲಾ ನ್ಯಾಯಾಲಯ, ಗದಗ

    ನಡುದಾರಿಯಲ್ಲಿ ಬಿಟ್ಟುಹೋದ ಅಪ್ಪ

    ಮಮತೆಯ ಮಡಿಲು ಈ ಅಮ್ಮ: ಭಾವನೆಗಳ ಬುತ್ತಿ ಬಿಚ್ಚಿದ್ದಾರೆ ಓದುಗರು...ನನ್ನ ಅಪ್ಪ ದುರ್ವ್ಯಸನಗಳಿಗೆ ಬಲಿಯಾಗಿ ಅಮ್ಮನನ್ನು ನಡುದಾರಿ ಯಲ್ಲೇ ಬಿಟ್ಟು ಮಕ್ಕಳ ಜವಾಬ್ದಾರಿಯಿಂದ ಪಲಾಯನಗೊಂಡ. ಅಮ್ಮ ಧೃತಿಗೆಡದೆ ಒಂಟಿಯಾಗಿ ಬದುಕಿನ ಹೋರಾಟಕ್ಕೆ ಮುನ್ನುಡಿ ಬರೆದಳು. ಈ ಹೋರಾಟದಲ್ಲಿ ಅದೆಷ್ಟೋ ಕಠಿಣ ಪರಿಸ್ಥಿತಿ, ಸಮಸ್ಯೆಗಳು ಎದುರಾದರೂ ಎದೆಗುಂದಲಿಲ್ಲ. ಒಂಟಿ ಹೆಣ್ಣು ಎಂದ ಮೇಲೆ ಕೇಳಬೇಕೆ? ತನ್ನೆಲ್ಲಾ ನೋವುಗಳನ್ನು ಬದಿಗೊತ್ತಿ, ಅದೆಷ್ಟೋ ಸವಾಲುಗಳನ್ನು ಎದುರಿಸಿ ಮುಂದಕ್ಕೆ ನಡೆದಳು. ನಮಗೆ ಅಪ್ಪನಿಲ್ಲ ಎನ್ನುವುದನ್ನೂ ಮರೆಸಿ ಯಾವುದಕ್ಕೂ ಕೊರತೆ ಮಾಡದಂತೆ ಸಾಕಿದಳು. ಪಡಬಾರದ ಕಷ್ಟ ಪಟ್ಟಳು. ನಮಗೆ ಅಪ್ಪ-ಅಮ್ಮ ಇಬ್ಬರೂ ಆದಳಾಕೆ. ಆದರೆ ಎಂದಿಗೂ ಬದುಕಿನ ಆದರ್ಶ, ಸಂಸ್ಕಾರ ಮರೆಯಲಿಲ್ಲ. ಮಕ್ಕಳಿಗೂ ಅದನ್ನೇ ಕಲಿಸಿದ್ದಾಳೆ.
    | ಬಬಿತ ಸಂತೋಷ್ ಬೆಂಗಳೂರು

    ಮದುವೆಯಾಗಿ ಪಡಬಾರದ ಪಾಡು ಪಟ್ಟರು

    ಮಮತೆಯ ಮಡಿಲು ಈ ಅಮ್ಮ: ಭಾವನೆಗಳ ಬುತ್ತಿ ಬಿಚ್ಚಿದ್ದಾರೆ ಓದುಗರು...ಚಿಕ್ಕವಯಸ್ಸಿನಲ್ಲಿಯೇ ಮದುವೆಯಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟುಕುಗೊಳಿಸಿ ಪಡಬಾರದ ಪಾಡು ಪಟ್ಟರು ಅಮ್ಮ. ಒಂದರ ಮೇಲೊಂದು ಸಂಕಷ್ಟಗಳು ಬರಸಿಡಿಲಿನಂತೆ ಎರಗಿದಾಗ ನಾಲ್ಕುಮಕ್ಕಳ ಸಮೇತ ಉಟ್ಟಬಟ್ಟೆಯಲ್ಲಿಯೇ ಹಳ್ಳಿಬಿಟ್ಟು ಮಠವೊಂದರಲ್ಲಿ ಕೆಲಸಕ್ಕೆ ಸೇರಿದಳು. ಅಲ್ಲಿಯೇ ನಮಗೂ ಶಿಕ್ಷಣ ಕೊಡಿಸಿದರು. ಒಡವೆಗಳನ್ನು ಮಾರಿ, ಮದ್ರಣಾಲಯವನ್ನು ಪ್ರಾರಂಭಿಸಲು ಪ್ರೋತ್ಸಾಹಿಸಿದರು. ಮುದ್ರಣ ಕ್ಷೇತ್ರದಲ್ಲಿ ನನಗೆ ಬಂದ ಪ್ರಶಸ್ತಿ ಬಂದಾಗ ಆಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ.
    ಸ್ವ್ಯಾನ್​ ಕೃಷ್ಣಮೂರ್ತಿ, ಸ್ವ್ಯಾನ್​ ಪ್ರಿಂಟರ್ಸ್, ಬೆಂಗಳೂರು

    ಮನೆಬಿಟ್ಟು ಹೋಗುತ್ತೇನೆಂದು ಹೇಳಿದ್ದ ಜ್ಯೋತಿಷಿ!

    ಮಮತೆಯ ಮಡಿಲು ಈ ಅಮ್ಮ: ಭಾವನೆಗಳ ಬುತ್ತಿ ಬಿಚ್ಚಿದ್ದಾರೆ ಓದುಗರು...10-12 ವರ್ಷದವನಿದ್ದಾಗ ನನಗೆ ಸೈಕಲ್ ಹುಚ್ಚು. ಅದೊಂದು ದಿನ ಹಾಲು ಕೊಡಲು ಬಂದ ರೈತನ ಸೈಕಲ್ ಯಾರಿಗೂ ಹೇಳದೇ ಹೊಡೆಯಲು ಒಯ್ದಿದ್ದೆ. ಆಗೆಲ್ಲ ರೈತಾಪಿ ಜನರು ಸೈಕಲ್ ಹಿಂದುಗಡೆ ವಸ್ತುಗಳನ್ನು ಕಟ್ಟಲು ಒಂದು ಹಗ್ಗವನ್ನು ಇಟ್ಟಿರುತ್ತಿದ್ದರು. ನಾನು ಆಡುವಾಗ ನನಗರಿವಿಲ್ಲದೆ ಆ ಹಗ್ಗ ಬಿಚ್ಚಿ ಹಿಂದಿನ ಚಕ್ರದಲ್ಲಿ ಸುತ್ತಿಕೊಂಡು ನನ್ನನ್ನು ಬೀಳಿಸಿತು. ಮೈಯೆಲ್ಲ ತರಚು ಗಾಯ. ಏನೇ ಮಾಡಿದರೂ ಹಗ್ಗ ಚಕ್ರದಿಂದ ಬಿಡಿಸಲಾಗಲಿಲ್ಲ, ಮನೆಯಲ್ಲಿ ಬಯ್ಯುತ್ತಾರೆಂದು ಗುಡಿಯ ಕತ್ತಲಲ್ಲಿ ಅಡಗಿ ಕುಳಿತೆ. ಮನೆಯಲ್ಲಿ ನಾನು ಬರದದ್ದು ನೋಡಿ ಗಾಬರಿ. 10-11 ವರ್ಷಕ್ಕೆ ನಾನು ಮನೆಬಿಟ್ಟು ಓಡಿ ಹೋಗುವೆನೆಂದು ಜ್ಯೋತಿಷಿ ಒಬ್ಬ ಹೇಳಿದ್ದನಂತೆ. ಅದನ್ನು ನೆನೆದು ನನ್ನಮ್ಮನ ಪಾಡಂತೂ ಕೇಳುವುದೇ ಬೇಡ. ಅವರು ಎಲ್ಲೆಡೆ ಹುಡುಕಾಟ ನಡೆಸಿದರು. ಅದನ್ನು ಗಮನಿಸುತ್ತಿದ್ದ ನಾನು ನನ್ನಮ್ಮನ ಕಣ್ಣೀರು ನೋಡಲು ಆಗದೇ ಓಡುತ್ತಾ ಅವಳನ್ನು ಅಪ್ಪಿಕೊಂಡು ವಿಷಯ ತಿಳಿಸಿದೆ. ಅವಳೂ ನನ್ನನ್ನು ತಬ್ಬಿಕೊಂಡು ಅಳಲು ಪ್ರಾರಂಭಿಸಿದಳು. ಆ ಕ್ಷಣ ನಾನು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ.
    | ಬಸವರಾಜ ಎಂ.ಕಿರಣಗಿ ಇಂಡಿ. ವಿಜಯಪುರ

    ಅಪ್ಪನನ್ನು ಅದ್ಹೇಗೆ ಸಹಿಸಿದಳೋ

    ಮಮತೆಯ ಮಡಿಲು ಈ ಅಮ್ಮ: ಭಾವನೆಗಳ ಬುತ್ತಿ ಬಿಚ್ಚಿದ್ದಾರೆ ಓದುಗರು...ನನ್ನಪ್ಪ ಪೊಲೀಸ್ ಪೇದೆ, ತುಂಬಾ ಒರಟು ಸ್ವಭಾವ. ಮದುವೆಯಾಗಿ ಬಂದಾಗಿನಿಂದ ಕೆಲ ವರ್ಷ ನನ್ನ ಅಮ್ಮನಿಗೆ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ. ನನ್ನ ಅಮ್ಮನೋ ತಾಳ್ಮೆಯ ಮೂರ್ತಿ. ಎಂದೂ ಶಾಲೆಯ ಮೆಟ್ಟಿಲು ಏರದ ಅವಳು, ನನ್ನಪ್ಪನಂಥ ಒರಟನ ಮನ ಗೆದ್ದು ಆದರ್ಶ ಜೀವನ ಮಾಡಿ, ತನ್ನ ಸುತ್ತ ಮುತ್ತಲಿನ ಜನರ ಮನ ಗೆದ್ದಳು!. ಮನೆಯೆ ಗುಡಿಯಮ್ಮ ಪತಿಯೇ ದೇವರಮ್ಮ …. ಎಂಬ ಆಗಿನ ಕಾಲದ ಚಿತ್ರಗೀತೆಯನ್ನು ಸದಾ ಗುನುಗುತ್ತಿದ್ದಳು ನನ್ನಮ್ಮ! ಅದನ್ನೇ ಜೀವನದಲ್ಲಿ ಪಾಲಿಸಿದಳು ಕೂಡ. ಹೆಸರಿಗೆ ತಕ್ಕಂತೆ ಗೌರಮ್ಮನೇ ಆದರು. ಇಂದು ನಾವು ಅವರ ಮಕ್ಕಳು ಜೀವನದಲ್ಲಿ ಏನೇ ಆಗಿದ್ದರೂ, ಅದಕ್ಕೆಲ್ಲ ಅಮ್ಮನ ತಾಳ್ಮೆ, ಸಹನೆ, ನೋವು ನುಂಗಿ ಕೊಟ್ಟ ಸಂಸ್ಕಾರವೇ ಕಾರಣ. ಇಂದು ಈ ಮಹಾತಾಯಿ ಇಲ್ಲ. ಆಕೆಯ ಆದರ್ಶ ಮಾತ್ರ ಸದಾ ಹಸಿರು.
    | ಪರಮೇಶ್ವರಪ್ಪ ಕುದರಿ ಚಿತ್ರದುರ್ಗ

    91ರ ನನ್ನಮ್ಮನಿಗೆ ಪುನಃ ಪುನಃ ಮಗುವಾಗಿಬಿಟ್ಟೆ!

    ಮಮತೆಯ ಮಡಿಲು ಈ ಅಮ್ಮ: ಭಾವನೆಗಳ ಬುತ್ತಿ ಬಿಚ್ಚಿದ್ದಾರೆ ಓದುಗರು...ನನ್ನ ಅಮ್ಮನಿಗೀಗ 91 ವರ್ಷ. ನಾವು ಒಟ್ಟೂ ಏಳು ಜನ ಮಕ್ಕಳು; 19 ಮೊಮ್ಮಕ್ಕಳು 16 ಮರಿಮಕ್ಕಳು. ಮಗಳ ಸಂತಾನದಲ್ಲಿ 5ನೇ ತಲೆಮಾರಿನ ಗಿರಿ ಮೊಮ್ಮಗನ ಕಂಡಾಕೆ ನಮ್ಮ ತಾಯಿ. ನಾನು ಕೊನೆಯ ಮಗ. 45 ವರ್ಷಕ್ಕೆ ಅಪಘಾತದಲ್ಲಿ ನನ್ನ ಪತ್ನಿಯನ್ನು ಕಳಕೊಂಡೆ. 12 ದಿನ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾಗ ಅಮ್ಮನಿಗೆ ಮತ್ತೆ ಕೂಸಾಗಿದ್ದೆ. ನನಗೆ ಹೃದಯದ ಶಸ್ತ್ರಚಿಕಿತ್ಸೆ ಆಯಿತು. ಮತ್ತೆ ಅವಳ ಮಗುವಾಗಿದ್ದೆ. ನಾನು ದೇವರ ಪೂಜೆ ಮಾಡುವ ಹೊತ್ತಿಗೆ ಇದ್ದಲಿ ಒಲೆಯ ಮೇಲೆ ಸ್ವಲ್ಪ ಅನ್ನವನ್ನು ಮಾಡಿಟ್ಟು ನೈವೇದ್ಯಕ್ಕೆ ಪೂರೈಸುವಳು. ಇಷ್ಟೊಂದು ದೀರ್ಘವಾದ ತುಂಬು ಜೀವನದಲ್ಲಿ ಕಷ್ಟನಷ್ಟಗಳು ಸುಖ-ದುಃಖಗಳು ಸಹಜ ಆದರೆ ನನ್ನ ತಾಯಿ ಸ್ಥಿತಪ್ರಜ್ಞೆ ಮಿತಾಹಾರಿ ಮಿತಭಾಷಿ ತವೆ ಆರೋಗ್ಯದ ಗುಟ್ಟು.
    | ವಿ.ಬಿ. ಜೋಶಿ ಹುನಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts