More

    ಅಮ್ಮಾ.. ಈ ಎರಡಕ್ಷರದಲ್ಲಿ ಎಂತಹ ಶಕ್ತಿ: ಓದುಗರ ಭಾವನೆ ವ್ಯಕ್ತವಾಗಿದೆ ಇಲ್ಲಿ…

    ಮಮತೆ, ತ್ಯಾಗ, ಕರುಣೆಯ ಪ್ರತಿರೂಪವಾಗಿರುವ ಅಮ್ಮನ ದಿನ ಇಂದು. ಈ ನಿಮಿತ್ತ, ಬದುಕು ರೂಪಿಸಿರುವ ಅಮ್ಮನನ್ನು ಸ್ಮರಿಸಲು ವಿಜಯವಾಣಿ ಕರೆ ನೀಡಿತ್ತು. ಇದಕ್ಕೆ ನಾಲ್ಕು ಸಾವಿರಕ್ಕೂ ಅಧಿಕ ಓದುಗರು ಇ-ಮೇಲ್ ಮೂಲಕ ಅನಿಸಿಕೆ ಹಂಚಿಕೊಂಡಿದ್ದು, ತಮ್ಮ ಜೀವನದಲ್ಲಿ ವಿಶೇಷ ಪಾತ್ರ ವಹಿಸಿರುವ ಅಮ್ಮನನ್ನು ನೆನೆದಿದ್ದಾರೆ. ಈ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

    ಕಳ್ಳರನ್ನು ಧೈರ್ಯದಿಂದ ಓಡಿಸಿದಳು

    ಅಮ್ಮಾ.. ಈ ಎರಡಕ್ಷರದಲ್ಲಿ ಎಂತಹ ಶಕ್ತಿ: ಓದುಗರ ಭಾವನೆ ವ್ಯಕ್ತವಾಗಿದೆ ಇಲ್ಲಿ...ಅಂದು ನಾನು, ಅಮ್ಮ ಇಬ್ಬರೇ ಮನೆಯಲ್ಲಿ ಇದ್ದೆವು. ನಮ್ಮ ಮನೆಗೆ ಕಳ್ಳರು ನುಗಿದ್ದರು, ಕೈಯ್ಯಲ್ಲಿ ಚಾಕು, ಚೈನು ಹಾಗೂ ದೊಣ್ಣೆ ಹಿಡಿದಿದ್ದರು. ಅಮ್ಮನಿಗೆ ಸದ್ದು ಕೇಳಿ ಎಚ್ಚರವಾಯಿತು. ಕಿರುಚಿಕೊಳ್ಳದೆ ಹಾಗೆ ಮಲಗಿಕೊಂಡೇ ಅವರ ಚಲನವಲನವನ್ನು ಗಮನಿಸುತ್ತಿದ್ದಳು. ಕಳ್ಳರು ಮತ್ತೊಂದು ಕೋಣೆಗೆ ಹೋಗುತ್ತಿದ್ದಂತೆಯೇ ಅಮ್ಮ ತಕ್ಷಣ ನಮ್ಮ ಕೋಣೆಯ ಬಾಗಿಲು ಹಾಕಿ ನನ್ನನ್ನು ಎಬ್ಬಿಸಿ ಕಿರುಚಿಕೊಳ್ಳುವಂತೆ ಹೇಳಿ ತಾನು ಬಾಗಿಲಿಗೆ ಅಡ್ಡಲಾಗಿ ಮಂಚವನ್ನು ಇಟ್ಟು ಜೋರಾಗಿ ಕೂಗಿದಳು. ಅಕ್ಕಪಕ್ಕದ ಜನರು ಬರುತ್ತಿದ್ದುದನ್ನು ಗಮನಿಸಿದ ಕಳ್ಳಲು ಅಲ್ಲಿಂದ ಕಾಲು ಕಿತ್ತರು. ಅಮ್ಮನ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ನಮ್ಮ ಜೀವ ಹಾಗೂ ಹಣ ಎರಡೂ ಉಳಿಯಿತು.
    | ಉಮೇಶ್ ಹಾಸನ

    ತುಂಬು ಸಂಸಾರದ ಚೈತನ್ಯದ ಚಿಲುಮೆ

    ಅಮ್ಮಾ.. ಈ ಎರಡಕ್ಷರದಲ್ಲಿ ಎಂತಹ ಶಕ್ತಿ: ಓದುಗರ ಭಾವನೆ ವ್ಯಕ್ತವಾಗಿದೆ ಇಲ್ಲಿ...ಈ ಹಿರಿಯ ಜೀವದ ವಯಸ್ಸು 95 ದಾಟಿದೆ. 8 ಮಂದಿ ಮಕ್ಕಳು, 15 ಮೊಮ್ಮಕ್ಕಳು, 9 ಮರಿಮಕ್ಕಳಿರುವ ತುಂಬು ಸಂಸಾರದ ಚೈತನ್ಯದ ಚಿಲುಮೆ ಇವರು. ನಸುಕಿನಲ್ಲೇ ಎದ್ದು ಸುಶ್ರಾವ್ಯವಾಗಿ ಉದಯ ರಾಗಗಳನ್ನು ಹಾಡುತ್ತಾ ನಿತ್ಯದ ಕೆಲಸಗಳನ್ನು ಮಾಡುತ್ತಾರೆ. ತುಳಸಿದಳಗಳಿಂದ ಮಾಲೆಯನ್ನು ಮಾಡಿ ದೇವರ ಕೊರಳಿಗೇರಿಸುತ್ತಾರೆ. ಅವರ ದೈನಂದಿನ ಪೂಜೆ ಮುಗಿಯುವವರೆಗೂ ಮನೆಯಲ್ಲಿ ಎಲ್ಲರಿಗೂ ಕರ್ಣಾನಂದಕರವಾದ ಹಾಡುಗಳ ರಸಗವಳ ಲಭಿಸುತ್ತದೆ. ಈಗಲೂ ನೆನಪಿನ ಶಕ್ತಿ ಕುಂದಿಲ್ಲ. ಬೆಳವಾಡಿ ಸಂಸ್ಥಾನದ ರಾಜಮಾತೆ ನಮ್ಮಮ್ಮ, ಜೋಡಿಗುಬ್ಬಿಯ ಕಮಲಮ್ಮ. ಅಮ್ಮನಿಗೆ ನಾವು ಒಟ್ಟು ಆರು ಜನ ಮಕ್ಕಳು. ನಾವೆಂದೂ ಆಕೆಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದವರಲ್ಲ. ಈ ಮೂಲಕ ಅವರಿಗೆ ನನ್ನ ಕಡೆಯಿಂದ ಹುಟ್ಟುಹಬ್ಬಕ್ಕೆ ಈ ಬರಹದ ಪುಟ್ಟ ಗಿಫ್ಟ್.
    | ಚಂದ್ರಶೇಖರ ಬೆಳವಾಡಿ ಹುಬ್ಬಳ್ಳಿ

    ಜೀವನ ಸಂಕ್ರಾಂತಿಯನ್ನೇ ನೋಡದ ನನ್ನವ್ವ

    ಅಮ್ಮಾ.. ಈ ಎರಡಕ್ಷರದಲ್ಲಿ ಎಂತಹ ಶಕ್ತಿ: ಓದುಗರ ಭಾವನೆ ವ್ಯಕ್ತವಾಗಿದೆ ಇಲ್ಲಿ...ಕಿತ್ತು ತಿನ್ನುವ ಬಡತನಕ್ಕೆ ಸವಾಲೊಡ್ಡಿ ಸ್ವಾಭಿಮಾನದಿಂದ ಬದುಕಿದ ನನ್ನವ್ವ ಪಟ್ಟ ಪಡಿಪಾಟಲು ಇನ್ನೂ ಕಣ್ಣಮುಂದೆಯೇ ಇದೆ. ಖಾಸಗಿ ಸಂಸ್ಥೆಯಲ್ಲಿ ಟೀಚರ್ ಆಗಿ ಕೆಲಸ ಮಾಡುವ ನನ್ನವ್ವ ಅತೀ ಕಡಿಮೆ ಸಂಬಳದಲ್ಲಿ ಸಾಂಸಾರಿಕ ಹಾಗೂ ಶೈಕ್ಷಣಿಕವಾಗಿ ನಮ್ಮನ್ನು ಸದೃಢವಾಗಿ ಬೆಳೆಸಿದಳು. ಇವತ್ತು ಸಮಾಜದಲ್ಲಿ ನನ್ನನ್ನು ನಾಲ್ಕಾರು ಜನ ಗುರುತಿಸುವಂತಾಗಿದ್ದರೆ ಅದು ಅಮ್ಮನಿಂದಲೇ. ನಮ್ಮ ಹೊಟ್ಟೆ ತುಂಬಿಸಲು, ಗಾಢ ಹೊಗೆಯನ್ನು ನುಂಗಿಕೊಂಡು ಅನ್ನವ ಬೇಯಿಸಿದ್ದಾಳೆ. ಅದೆಷ್ಟೋ ಸಂಕ್ರಾಂತಿಗಳು ಬಂದವು, ಹೋದವು. ಅವ್ವನ ಬದುಕಿಗೆ ಮಾತ್ರ ಸುಗ್ಗಿ ತರಲಿಲ್ಲ. ಆದರೆ ಸ್ವಾಭಿಮಾನ ಮಾತ್ರ ತಾನೂ ಬಿಟ್ಟಿಲ್ಲ. ಅದನ್ನೇ ನನಗೂ ಉಣಬಡಿಸಿದ್ದಾಳೆ. ಈ ಬದುಕಿನ ಜಂಜಾಟದಲ್ಲಿ ಈಕೆಗೆ ತನ್ನ ಸಂಸಾರದಾಚೆಗೂ ಒಂದು ಪ್ರಪಂಚವಿದೆ ಎಂದು ಮರೆತೆಹೋಗಿದೆ ಈಕೆಗೆ.
    | ಸಂಗಯ್ಯ ಚ. ಸಿಂದಗಿಮಠ ಗುಳೇದಗುಡ್ಡ, ಬಾಗಲಕೋಟೆ

    ಅಪ್ಪನ ಎದುರು ಹಾಕಿಕೊಂಡು ಶಾಲೆಗೆ ಕಳ್ಸಿದ್ಲು

    ಅಮ್ಮಾ.. ಈ ಎರಡಕ್ಷರದಲ್ಲಿ ಎಂತಹ ಶಕ್ತಿ: ಓದುಗರ ಭಾವನೆ ವ್ಯಕ್ತವಾಗಿದೆ ಇಲ್ಲಿ...ನಮ್ಮದು ತೀರಾ ಬಡ ಕುಟುಂಬ. ನನ್ನ ತಂದೆ ನಮ್ಮನ್ನೂ ದುಡಿಮೆಗೆ ಕಳುಹಿಸಲು ಹವಣಿಸಿದ್ದರು. ಆದರೆ ನನ್ನಮ್ಮ ತಂದೆಯ ಜತೆ ಜಗಳ ಮಾಡಿ ಮಕ್ಕಳನ್ನು ಶಾಲೆಗೆ ಕಳಿಸುತ್ತೇನೆ. ಅವರ ಪರವಾಗಿ ನಾನು ದುಡಿಯುತ್ತೇನೆ ಎಂದುಬಿಟ್ಟಳು. ಹಾಗೆಯೇ ನಡೆದುಕೊಂಡಳು ಕೂಡ. ನಾಲ್ವರನ್ನು ವಿದ್ಯಾವಂತರನ್ನಾಗಿ ಮಾಡಿದಳು. ನಾಲ್ಕು ಮಕ್ಕಳಲ್ಲಿ ಒಬ್ಬರಾದರೂ ಸರ್ಕಾರಿ ಸೇವೆಗೆ ಹೋಗಬೇಕು ಎಂಬುದು ಅಮ್ಮನ ಅಪಾರ ಬಯಕೆ, ಒಮ್ಮೆ ಇದನ್ನೇ ಹೇಳಿ ಕಣ್ಣೀರಾದಳು. ಆಕೆಯ ಕನಸನ್ನು ನನಸು ಮಾಡಲು ನಾನು 5 ವರ್ಷ ಶ್ರಮ ಪಟ್ಟು ಕಡೆಗೆ ಬಿಎಂಟಿಸಿಯಲ್ಲಿ ಚಾಲಕನಾಗಿ ನೇಮಕವಾದೆ. ಒಂದು ವೇಳೆ ಅಂದು ಅಪ್ಪನ ಮಾತು ಕೇಳಿ ನನ್ನನ್ನು ಶಾಲೆಗೆ ಸೇರಿಸಿದಿದ್ದರೆ ಎಂಥ ಪರಿಸ್ಥಿತಿಯಲ್ಲಿ ಇರುತ್ತಿದ್ದೆನೋ ಎಂದು ನೆನೆದು ಈಗಲೂ ಭಯವಾಗುತ್ತದೆ!
    | ಶ್ರೀನಿವಾಸ ಬಿಎಂಟಿಸಿ ಚಾಲಕರು ಮಂಡ್ಯ

    ನನಗಾಗಿ ಚೇಳು ಕಚ್ಚಿಸಿಕೊಂಡಳು

    ಅಮ್ಮಾ.. ಈ ಎರಡಕ್ಷರದಲ್ಲಿ ಎಂತಹ ಶಕ್ತಿ: ಓದುಗರ ಭಾವನೆ ವ್ಯಕ್ತವಾಗಿದೆ ಇಲ್ಲಿ...ಹೈಸ್ಕೂಲ್​ನಲ್ಲಿ ಓದುತ್ತಿದ್ದೆ. ಅದೊಂದು ದಿನ ಅಮ್ಮ ಬೆಳಗ್ಗೆ ತಿಂಡಿ ಮಾಡದೇ ಸುಮ್ಮನೆ ಕುಳಿತಿದ್ದಳು. ಆಕೆಗೇನು ಆಗಿದೆ ಎಂದು ಕೇಳುವ ವ್ಯವಧಾನವೂ ಇಲ್ಲದ ನಾನು ತಿಂಡಿ ಮಾಡಲಿಲ್ಲ ಎಂದು ರೇಗಾಡಿದೆ. ಅದಕ್ಕೆ ನನ್ನ ಅಪ್ಪ, ಅವಳ ಕೈಗೆ ನಾಲ್ಕೈದು ಕಡೆ ಚೇಳು ಕಡಿದಿದೆ ಎಂದರು. ನನ್ನ ಕೋಪ ಸರ›ನೆ ಇಳಿಯಿತು. ಅಮ್ಮನ ಹತ್ತಿರ ಹೋಗಿ ಹೇಗಾಯಿತು ಎಂದು ಕೇಳಿದೆ. ಅದಕ್ಕೆ ಅಮ್ಮ ನಿನ್ನ ಕೌದಿಯಲ್ಲಿ ಚೇಳು ಬಂದಿತ್ತು. ನೀನು ಗಾಢ ನಿದ್ರೆಯಲ್ಲಿದ್ದೆ.ಅದೆಲ್ಲಿ ಕಚ್ಚಿಬಿಡುತ್ತೋ ಅಂತ ಏನು ಮಾಡಬೇಕು ಎಂದು ತಿಳಿಯದೇ ಕೈಯಿಂದಲೇ ತಳ್ಳಿಬಿಟ್ಟೆ. ನನ್ನ ಕೈಗೆ ಕಚ್ಚಿತು ಅಷ್ಟೇ. ಏನಾಗಿಲ್ಲ ಬಿಡು. ತಿಂಡಿ ಮಾಡ್ಕೊಡ್ತಿನಿರು ಅಂದಳು. ನನಗೆ ಅಳುವೇ ಬಂದುಬಿಟ್ಟಿತು. ಚೇಳನ್ನು ಹುಡುಕಿ ಅದನ್ನು ಕೊಂದು ಸಮಾಧಾನ ಪಟ್ಟುಕೊಂಡೆ.

    | ಆನಂದಕುಮಾರ ಕೋತಂಬರಿ ಶಿಕ್ಷಕ, ಬಿಜ್ಜಹಳ್ಳಿ, ಕನಕಪುರ, ರಾಮನಗರ

    ಅಮ್ಮನಿಗೆ ದೇವರು ಹಸಿವೆಯೇ ಕೊಟ್ಟಿಲ್ವಾ?

    ಅಮ್ಮಾ.. ಈ ಎರಡಕ್ಷರದಲ್ಲಿ ಎಂತಹ ಶಕ್ತಿ: ಓದುಗರ ಭಾವನೆ ವ್ಯಕ್ತವಾಗಿದೆ ಇಲ್ಲಿ...ನಾನಿನ್ನೂ ಚಿಕ್ಕವ. ಆದರೆ ಆ ದಿನ ಮಾತ್ರ ನನಗಿನ್ನೂ ನೆನಪಿದೆ ಅಮ್ಮಾ. ಎಲ್ಲರ ಊಟ ಮುಗಿದಿತ್ತು. ನಿನ್ನ ಊಟ ಮುಗಿದಿರಲಿಲ್ಲ. ಅಣ್ಣ ತಡವಾಗಿ ಬಂದ. ಮನೆಗೆ ಬಂದ. ಅಯ್ಯೋ ಅವನಿಗೆ ಅಡುಗೆಯೇ ಇಲ್ಲವಲ್ಲ ಎಂದುಕೊಂಡೆ. ಆದರೆ ನನಗೋ ಅಚ್ಚರಿ. ಮನೆಯೊಳಗಿನಿಂದ ಅವನಿಗಾಗಿ ತೆಗೆದಿಟ್ಟ ಅಡುಗೆ ತಂದು ಅವನ ಹೊಟ್ಟೆ ತುಂಬಿಸಿದೆ. ಇಂಥ ಎಷ್ಟೋ ದಿನಗಳನ್ನು ನಾ ಕಂಡಿದ್ದೇನೆ. ಅದನ್ನು ನೆನೆಸಿಕೊಂಡಾಗಲೆಲ್ಲಾ ನನಗನ್ನಿಸಿದ್ದು ಯಾಕೆ ದೇವರು ಅಮ್ಮನಿಗೆ ಹಸಿವೇ ಕೊಟ್ಟಿಲ್ಲವೇ ಎಂದು! ನಮ್ಮ ಖುಷಿಯಲ್ಲೆ ನಿನ್ನ ಹೊಟ್ಟೆ ತುಂಬಿಸಿಕೊಂಡೆಯಾ ಅಮ್ಮಾ ಹೌದು ಅಮ್ಮಾ ನೀ ನಿಜಕ್ಕೂ ದೇವರೆ.
    | ಕಿರಣ್ ಜೋಶಿ ಶೋರಾಪುರ, ಯಾದಗಿರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts