More

    ಮಾತೃಭಾಷೆ ಮಮಕಾರವೇ ವಿಭಿನ್ನ : ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

    ಚಿಕ್ಕಬಳ್ಳಾಪುರ: ಸಂವಹನ ಸಂಪರ್ಕಕ್ಕೆ ಇತರ ಭಾಷೆಗಳ ಅರಿವು ಅಗತ್ಯ. ಆದರೆ, ಚಿಕ್ಕ ವಯಸ್ಸಿನಿಂದಲೇ ಕಲಿತ ಮಾತೃಭಾಷೆಯನ್ನು ಕಡೆಗಣಿಸಬಾರದು. ಇತರ ಭಾಷೆಗಳಿಗಿಂತಲೂ ಮಾತೃಭಾಷೆಯ ಮೇಲೆ ತೋರುವ ಮಮಕಾರವೇ ವಿಭಿನ್ನವಾದುದು ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

    ತಾಲೂಕಿನ ಎಸ್‌ಜೆಸಿ ತಾಂತ್ರಿಕ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಸಾನಿಧ್ಯ ವಹಿಸಿದ್ದ ಶ್ರೀಗಳು, ಸರ್ಮಪಕವಾಗಿ ಇಂಗ್ಲೀಷ್ ಬಲ್ಲ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್ ಸಹ ಅಂತ್ಯಕಾಲದಲ್ಲೂ ಜರ್ಮನ್ ಭಾಷೆಯನ್ನು ಹೆಚ್ಚಿಗೆ ನೆನೆಪಿಸಿಕೊಳ್ಳುತ್ತ ಸ್ವನುಡಿ ಪ್ರೇಮ ಮೆರೆದಿದ್ದರು ಎಂದರು.

    ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿದ ಅಭ್ಯರ್ಥಿ ಇತ್ತೀಚೆಗೆ ಯುಪಿಎಸ್ಸಿ ಸಂದರ್ಶನದಲ್ಲಿ ಕೇಳಲಾದ ಕ್ರಮಾನುಸಾರ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗರ ಹೆಸರಿನ ಪ್ರಶ್ನೆಗೆ ಉತ್ತರಿಸಲಾಗದೆ ಪೇಚಿಗೆ ಸಿಲುಕಿದ ವಿಚಾರದ ಬಗ್ಗೆ ತಮ್ಮ ಬಳಿ ಅಳಲು ತೋಡಿಕೊಂಡರು ಎಂಬುದನ್ನು ಸ್ವಾಮೀಜಿ ಸ್ಮರಿಸಿದರು.

    ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಸೇರಿ ಅನೇಕ ಮಹನೀಯರಿಗೆ ಜನ್ಮನೀಡಿದ ಜಿಲ್ಲೆ ಆಂಧ್ರದ ಗಡಿ ಭಾಗದಲ್ಲಿದೆ. ಇಲ್ಲಿ ತೆಲುಗುವಿನ ಪ್ರಭಾವವಿದ್ದರೂ ಕನ್ನಡತನ ವಿಶಿಷ್ಟವಾಗಿದೆ, ಈ ಕಂಪು ಪಸರುತ್ತಿದ್ದು ಯುವ ಜನತೆ ಸಹ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.

    ಮಹಾನ್ ಕೃತಿಗಳ ರಚನೆಯ ಸಾಹಿತಿಗಳು, ವಚನಗಳ ಮೂಲಕ ಸಮಾಜವನ್ನು ತಿದ್ದಲು ಶ್ರಮಿಸಿದ ವಚನಕಾರರು, ಶಿವಶರಣರು ಸೇರಿ ಮಹತ್ತರ ಕೊಡುಗೆ ನೀಡಿದ ಆದರ್ಶ ವ್ಯಕ್ತಿಗಳನ್ನು ಮಾದರಿಯಾಗಿ ಸ್ವೀಕರಿಸಬೇಕು ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
    ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಬಿಜಿಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮತ್ತಿತರರು ಇದ್ದರು.

    ಕನ್ನಡ ಗೊತ್ತಿಲ್ಲ ಅಂತಾರೆ…!
    ಕನ್ನಡವನ್ನು ಉಳಿಸಿ ಬೆಳೆಸಿ ಎಂಬ ಸಂದೇಶದ ಜತೆಗೆ ಕನ್ನಡ ಕಡ್ಡಾಯವಾಗಿ ಬಳಸಿ ಎಂಬುದನ್ನೂ ಸೇರಿಸಿಕೊಳ್ಳಬೇಕು. ರಾಜ್ಯದ ಜನರು ಅನ್ಯ ಭಾಷೆಗಳನ್ನು ಕಲಿಯುತ್ತಿದ್ದಾರೆ. ಆದರೆ, ಬೇರೆಡೆಯಿಂದ ಇಲ್ಲಿಗೆ ಬಂದು ನೆಲೆಸಿದವರು ಕನ್ನಡ ಗೊತ್ತಿಲ್ಲ ಎನ್ನುವುದು ವಿಷಾದನೀಯ ಎಂದು ಪತ್ರಕರ್ತ ಕಿರಿಕ್ ಕೀರ್ತಿ ಬೇಸರ ವ್ಯಕ್ತಪಡಿಸಿದರು. ಇಂಗ್ಲೀಷ್‌ನಲ್ಲಿ ಪದಗಳು ಒಂದೇಯಾದರೂ ಉಚ್ಚಾರಣೆ ಗೊಂದಲಕಾರಿಯಾಗಿರುತ್ತದೆ. ಆದರೆ, ಕನ್ನಡದಲ್ಲಿ ಪ್ರತಿ ಉಚ್ಚಾರಣೆಯಲ್ಲೂ ಅಕ್ಷರಗಳು ಬದಲಾಗುತ್ತವೆ. ಸಾವಿರಾರು ವರ್ಷಗಳ ಇತಿಹಾಸ, ಕಲೆ, ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ಹಿರಿಮೆ ಕನ್ನಡದ್ದು ಎಂದು ಬಣ್ಣಿಸಿದರು.

    ಗಮನ ಸೆಳೆದ ವಿದ್ಯಾರ್ಥಿಗಳು: ನಾಡಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಡೊಳ್ಳು ಕುಣಿತ, ಕತ್ತಿ ವರಸೆ, ನಾಟಕ, ಗಾಯನ, ಗ್ರಾಮೀಣ ವೇಷಭೂಷಣ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಗಮನ ಸೆಳೆದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ನೂತನ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts