More

    ಶವಾಗಾರದಲ್ಲಿ ಶೈತ್ಯಾಗಾರ ಕೊರತೆ

    ಶ್ರವಣ್‌ಕುಮಾರ್ ನಾಳ ಪುತ್ತೂರು

    ಇಲ್ಲಿನ ಸರ್ಕಾರಿ ಆಸ್ಪತ್ರೆ ಮಂದಗತಿಯಲ್ಲಿ ಅಭಿವೃದ್ಧಿ ಕಾಣುತ್ತಿದ್ದರೂ ಮೂಲಸೌಕರ್ಯಗಳ ಕೊರತೆಯ ಪಟ್ಟಿಯೂ ಬೆಳೆಯುತ್ತಿದೆ. ಶವಾಗಾರದಲ್ಲಿ ಶೈತ್ಯಾಗಾರ ಕೊರತೆಯಿದ್ದು, ಇಲ್ಲಿ ಎರಡಕ್ಕಿಂತ ಹೆಚ್ಚು ಮೃತದೇಹ ಬಂದಲ್ಲಿ ಸ್ಥಳಾವಕಾಶಕ್ಕಾಗಿ ಪರದಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

    ಪ್ರಸ್ತುತ ಆಸ್ಪತ್ರೆಯಲ್ಲಿ ಸಾಕಷ್ಟು ವೈದ್ಯರು, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ದಿನಕ್ಕೆ 500ಕ್ಕೂ ಮಿಕ್ಕಿದ ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈ ಆಸ್ಪತ್ರೆಯಲ್ಲಿ ಸುಸಜ್ಜಿತ ಶವಾಗಾರದ ವ್ಯವಸ್ಥೆಯಿಲ್ಲದ ಕಾರಣ ತುರ್ತು ಸಂದರ್ಭ ವೈದ್ಯರು, ಸಿಬ್ಬಂದಿ ಪರದಾಡಬೇಕಾಗಿದೆ.

    ಮಂಗಳೂರಿನ ಬಳಿಕ ಪುತ್ತೂರಿನ ಸರ್ಕಾರಿ ಆಸ್ಪತ್ರೆ ದ.ಕ. ಜಿಲ್ಲೆಯಲ್ಲೇ ಅತೀ ದೊಡ್ಡ ಆಸ್ಪತ್ರೆ ಎಂದೆಣಿಸಿದರೂ ಇಲ್ಲಿನ ಅವ್ಯವಸ್ಥೆ ಮಾತ್ರ ಎಲ್ಲದಕ್ಕಿಂತಲೂ ಮಿಗಿಲಾಗಿದೆ. ಶವಾಗಾರ ಹಳೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಇದು ಕೂಡ ಕುಸಿದು ಬೀಳುವಂತಹ ಸ್ಥಿತಿಯಲ್ಲಿದೆ. ಇಲ್ಲಿ ಅಪರಿಚಿತ ಶವ, ಅಪರಾಧ ಕೃತ್ಯಗಳ ಮೃತದೇಹಗಳನ್ನು ಸಂರಕ್ಷಿಸಿಡುವಂತಹ ಯಾವುದೇ ವ್ಯವಸ್ಥೆಗಳು ಇಲ್ಲ.

    ವೆನ್ಲಾಕನ್ನೇ ಅವಲಂಬಿಸಬೇಕಾದ ಸ್ಥಿತಿ: ಪುತ್ತೂರಿನಲ್ಲಿ ಶೈತ್ಯಾಗಾರ ಇಲ್ಲದೆ ಶವಗಳನ್ನು ಸಂರಕ್ಷಿಸಿಡಲು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನೇ ಅವಲಂಬಿಸಬೇಕಾದ ಅನಿವಾರ್ಯತೆಯಿದೆ. ಪುತ್ತೂರು ಹೊರತುಪಡಿಸಿ ಹೊರ ತಾಲೂಕು ಕೇಂದ್ರಗಳಿಗೂ ಆಸರೆಯಾಗಿರುವ ಆಸ್ಪತ್ರೆ ಮರಣೋತ್ತರ ಪರೀಕ್ಷೆ ನಡೆಸುವ ವೈದ್ಯರಿಗೂ ಸೂಕ್ತ ವ್ಯವಸ್ಥೆಗಳಿಲ್ಲ. ವೆನ್ಲಾಕ್ ಸರ್ಕಾರಿ ಆಸ್ಪತ್ರೆಯ ಹೊರತುಪಡಿಸಿದರೆ ಅತ್ಯಂತ ಹೆಚ್ಚು ಹೊರ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪುತ್ತೂರು ಸರ್ಕಾರಿ ಆಸ್ಪತ್ರೆ ಪಾತ್ರವಾಗಿದೆ. ಈ ಆಸ್ಪತ್ರೆಯನ್ನು 300 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಪ್ರಯತ್ನಗಳು ನಡೆಯುತ್ತಿದೆ. ಆದರೆ ಈ ಯೋಜನೆ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

    ಪುತ್ತೂರಿನ ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಕಾಣುತ್ತಿದ್ದರೂ ಇಲ್ಲಿ ಅನೇಕ ಮೂಲಸೌಕರ್ಯ ವ್ಯವಸ್ಥೆ ಅಭಿವೃದ್ಧಿಗೊಳ್ಳಬೇಕಾಗಿದೆ. ಈ ಬಗ್ಗೆ ಹಲವು ಬಾರಿ ಸಭೆ ನಡೆಸಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪುತ್ತೂರು ಸರ್ಕಾರಿ ಆಸ್ಪತ್ರೆ ಶವಾಗಾರ ಹಾಗೂ ಅದಕ್ಕೆ ಬೇಕಾದ ಸೂಕ್ತ ಪರಿಕರಗಳ ಬಗ್ಗೆ ಈ ಹಿಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
    ಸಂಜೀವ ಮಠಂದೂರು, ಪುತ್ತೂರು ಶಾಸಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts