More

    ದಯಾಮರಣ ಕೋರಿ ರಾಷ್ಟ್ರಪತಿಗೆ ಮೊರೆ

    ರಾಣೆಬೆನ್ನೂರ: ತಾಲೂಕಿನಲ್ಲಿ ಮೂತ್ರಪಿಂಡ (ಕಿಡ್ನಿ) ಸಮಸ್ಯೆಯಿಂದ ಬಳಲುತ್ತಿರುವ 9 ರೋಗಿಗಳು ಎರಡು ತಿಂಗಳಿಂದ ಡಯಾಲಿಸಿಸ್ ಚಿಕಿತ್ಸೆ ದೊರೆಯದ ಕಾರಣ ಮನನೊಂದು ದಯಾಮರಣ ಕೋರಿ ಶುಕ್ರವಾರ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದಾರೆ.

    ನಗರದ ನಾಗರಾಜ ಬದಾಮಿ, ಗೀತಮ್ಮ ತಳವಾರ, ಮಹಾದೇವಪ್ಪ ಕರಬಸಣ್ಣನವರ, ಶಿಲ್ಪಾ ದೊಡ್ಡಮನಿ, ಬಸವರಾಜ ಕಡೇಮನಿ, ಕುಮಾರ ಬಾಳಿಕಾಯಿ, ರೂಪಾ ಮಠದ, ರವಿಚಂದ್ರನ್ ಎಕ್ಕಿಗುಡಿ, ವಿನಾಯಕಪ್ಪ ಓಲೇಕಾರ ಸೇರಿ 9 ಜನ ರೋಗಿಗಳು ದಯಾಮರಣ ಕೋರಿದವರು. ಈ ಬಗ್ಗೆ ನಗರದ ಮಿನಿ ವಿಧಾನಸೌಧ ಎದುರು ಶಿರಸ್ತೇದಾರ್ ಎಂ.ಎನ್. ಹಾದಿಮನಿ ಮೂಲಕ ರಾಷ್ಟ್ರಪತಿಗೆ ಅರ್ಜಿ ರವಾನಿಸಿದ್ದಾರೆ.

    ಕಾರಣವೇನು…? : ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳಿಗಾಗಿ ಬೆಡ್​ಗಳನ್ನು ಮಾಡಿದ್ದರಿಂದ ಡಯಾಲಿಸಿಸ್ ಘಟಕವನ್ನು ಕಳೆದ ಎರಡು ತಿಂಗಳಿಂದ ಬಂದ್ ಮಾಡಲಾಗಿದೆ. ಇದರಿಂದಾಗಿ ಮೂತ್ರಪಿಂಡ (ಕಿಡ್ನಿ) ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಬ್ಯಾಡಗಿ ಹಾಗೂ ಹಿರೇಕೆರೂರಿಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಳ್ಳಲು ವೈದ್ಯರು ಸೂಚಿಸಿದ್ದಾರೆ. ಆದರೆ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಹುತೇಕ ರೋಗಿಗಳು ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿರುವವರು. ಹಿರೇಕೆರೂರ ಹಾಗೂ ಬ್ಯಾಡಗಿ ಆಸ್ಪತ್ರೆಗಳಲ್ಲಿ ಈಗಾಗಲೇ ಆಯಾ ತಾಲೂಕಿನ ರೋಗಿಗಳು ಹೆಚ್ಚಿದ್ದಾರೆ. ಹೀಗಾಗಿ ನಮಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ ಎಂಬುದು ಅವರ ಆರೋಪ.

    ಖಾಸಗಿ ಆಸ್ಪತ್ರೆಗೆ ತೆರಳಿ ಸಾವಿರಾರು ರೂ. ಹಣ ಕೊಟ್ಟು ಡಯಾಲಿಸಿಸ್ ಮಾಡಿಸಿಕೊಳ್ಳುವ ಶಕ್ತಿಯೂ ನಮಗಿಲ್ಲ. ಆದ್ದರಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲಿ, ನೋವು ಅನುಭವಿಸಿ ಸಾಯುವ ಬದಲು ದಯಾಮರಣಕ್ಕೆ ಅನುಮತಿ ನೀಡಿದರೆ, ಒಂದೇ ಬಾರಿಗೆ ಎಲ್ಲರೂ ಜೀವ ಬಿಡಲು ಸಿದ್ಧರಿದ್ದೇವೆ ಎಂದು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ರಾಷ್ಟ್ರಪತಿಗೆ ಬರೆದ ಅರ್ಜಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.

    ಪ್ರಾಣಬಿಟ್ಟ ನಾಲ್ವರು ರೋಗಿಗಳು: 2 ತಿಂಗಳ ಅವಧಿಯಲ್ಲಿ ಡಯಾಲಿಸಿಸ್ ಇಲ್ಲದ ಕಾರಣ ಹಲಗೇರಿ, ತಾಂಡಾ ಹಾಗೂ ನಗರದ ರೋಗಿ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ತಾಲೂಕು ಆಸ್ಪತ್ರೆಯ ಇನ್ನೊಂದು ಬದಿಯಲ್ಲಿ ಅವಕಾಶವಿದ್ದರೂ ವೈದ್ಯರು ಮಾಡುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಶಾಸಕರು ಸೇರಿ ಎಲ್ಲರಿಗೂ ಕೈ ಮುಗಿದು ಕೇಳಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ನಾಗರಾಜ ಬದಾಮಿ ಅಳಲು ತೋಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts