More

    ಕೆ.ಸಿ.ಜನರಲ್ ಆಸ್ಪತ್ರೆಯನ್ನು 152 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ: ಸಿಎಂ

    ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ನಗರದ ಕೆ.ಸಿ. ಜನರಲ್ ಆಸ್ಪತ್ರೆಯನ್ನು 152 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

    ನಗರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮ ಹಾಗೂ ರಾಜ್ಯ ಸರ್ಕಾರದ ಅನುದಾನದಡಿ ಉಚಿತ ಡಯಾಲಿಸಿಸ್ ಸೇವೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ನೂತನವಾಗಿ ತಾಯಿ-ಮಕ್ಕಳ ಚಿಕಿತ್ಸಾ ಘಟಕ ನಿರ್ಮಾಣ ಮತ್ತು ಹೇಳಿಯ ಬೋಧಕ ವಿಭಾಗದ ಕಟ್ಟಡ, ಅಡುಗೆ ಮನೆ, ಲಾಂಡ್ರಿ, ಶವಾಗಾರ, ತ್ಯಾಜ್ಯ ಸಂಸ್ಕರಣೆ, ನಿರ್ವಹಣೆ ಘಟಕಗಳನ್ನು ಮೇಲ್ದರ್ಜೆಗೆ ಏರಿಸಿ ಸೇರಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು 152 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಆರೋಗ್ಯ ಇಲಾಖೆ ಸಲ್ಲಿಸಿದೆ. ಇದನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದರು.

    ಕಿಡ್ನಿ ವೈಲ್ಯಕ್ಕೆ ಡಯಾಲಿಸಿಸ್ ಪರಿಹಾರ: ಕಿಡ್ನಿ ಸಮಸ್ಯೆ ಮಕ್ಕಳಿಂದ ಹಿರಿಯರವರೆಗೂ ಎಲ್ಲಾ ವಯೋಮಾನದವರಲ್ಲೂ ಕಂಡು ಬರುತ್ತಿದೆ. ಇದಕ್ಕೆ ಕಾರಣ ಬೇರೆ ಬೇರೆ ಇದ್ದರೂ, ಈ ಸಮಸ್ಯೆಗೆ ಡಯಾಲಿಸಿ ಒಂದೇ ಪರಿಹಾರ. ಹಾಗಾಗಿ ಸಮಸ್ಯೆಗೆ ಒಳಗಾದವರು ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಸೇವೆ ಪಡೆಯಬೇಕು. ಇದಕ್ಕಾಗಿ ಸಾವಿರಾರು ರೂ. ಖರ್ಚಾಗುತ್ತದೆ. ಅಷ್ಟೊಂದು ವೆಚ್ಚ ಬಡವರಿಗೆ ಭರಿಸಲು ಕಷ್ಟವಾಗುತ್ತದೆ. ಹೀಗಾಗಿ ಉಚಿತ ಸೇವೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ಉಚಿತ ಡಯಾಲಿಸಿಸ್ ಸೇವೆ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

    ಅಸಮಾನತೆ ನಿವಾರಿಸುವ ಪ್ರಯತ್ನ: ಸಮಾಜದಲ್ಲಿ ಬಡವ, ಶ್ರೀಮಂತ, ಮೇಲು, ಕೀಳು ಎಂಬ ಅಸಮಾನತೆ ಇದೆ. ಇದನ್ನು ತೊಡೆದು ಹಾಕಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸರ್ಕಾರದಿಂದ ಪ್ರಮುಖವಾಗಿ ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನಾವು ನುಡಿದಂತೆ ನಡೆದಿದ್ದೇವೆ, ಮುಂದೆಯೂ ನಡೆದುಕೊಳ್ಳುತ್ತೇವೆ ಎಂದರು.

    ಏಕಬಳಕೆಯ ಡಯಾಲೈಸರ್: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಈ ಹಿಂದೆ ಬಹುಬಳಕೆಯ ಡಯಾಲೈಸರ್ ಯಂತ್ರಗಳ ಬಳಕೆ ಮಾಡಲಾಗುತ್ತಿತ್ತು. ಇದರಿಂದ ರೋಗಿಗಳಿಗೆ ಸೋಂಕು ಸೇರಿ ನಾನಾ ರೀತಿಯ ಆರೋಗ್ಯ ಸಮಸ್ಯೆ ಆಗುತ್ತಿತ್ತು. ಹಾಗಾಗಿ ಈ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಏಕಬಳಕೆಯ ಡಯಾಲೈಸರ್ ಅಳವಡಿಸಲು ತೀರ್ಮಾನಿಸಲಾಯಿತು. ರಾಜ್ಯದಲ್ಲಿ 219 ಡಯಾಲಿಸಿಸ್ ಕೇಂದ್ರಗಳಿದ್ದು, ಹೊಸದಾಗಿ 800 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಆರು ಸಾವಿರ ರೋಗಿಗಳು ಉಚಿತ ಸೇವೆ ದೊರೆಯಲಿದ್ದು, ವಾರ್ಷಿಕ 108 ಕೋಟಿ ರೂ. ವೆಚ್ಚ ಆಗಲಿದ್ದು, ಕೇಂದ್ರ ಸರ್ಕಾರ ಶೇ. 40 ಹಾಗೂ ರಾಜ್ಯ ಸರ್ಕಾರ ಶೇ. 60 ಭರಿಸಲಿದೆ ಎಂದು ತಿಳಿಸಿದರು.

    ಡಯಾಲಿಸಿಸ್ ಯಂತ್ರಗಳನ್ನು ಸೇವೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಘಟಕದಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳೊಂದಿಗೆ ಮಾತನಾಡಿ ಅವರ ಆರೋಗ್ಯ ವಿಚಾರಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ. ರಂದೀಪ್, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕ ಡಾ. ನವೀನ್ ಭಟ್, ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಇಂದಿರಾ ಕಬಾಡೆ ಇತರರು ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts