More

    ಲಕ್ಷ ಮೀರಿದ ಪವಿತ್ರ ವೃಕ್ಷಗಳು!

    ಶಿರಸಿ: ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣೆಗೆ ಕಂಕಣ ಕಟ್ಟಿಕೊಂಡ ಪರಿಸರಪ್ರಿಯ ಸ್ವಾಮೀಜಿ ಎಂದೇ ಜನಪ್ರಿಯರಾಗಿರುವ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶರು ಚಾತುರ್ಮಾಸ್ಯದ ಅವಧಿಯಲ್ಲಿ ಮಠಕ್ಕೆ ಬರುವ ಶಿಷ್ಯರಿಗೆ ಹಸಿರು ಮಂತ್ರಾಕ್ಷತೆ ನೀಡುತ್ತಿದ್ದಾರೆ. 2006ರಲ್ಲಿ ಶುಭಾರಂಭಗೊಂಡ ಈ ಅಭಿಯಾನದಡಿ ನೀಡಲಾದ ಸಸ್ಯಗಳ ಸಂಖ್ಯೆ ಈಗ ಲಕ್ಷ ದಾಟಿದೆ!

    ವೃಕ್ಷ ಮಂತ್ರಾಕ್ಷತೆಯೊಂದಿಗೆ ಗಿಡ ನೆಡುವ ಪದ್ಧತಿ ವರ್ಷದಿಂದ ವರ್ಷಕ್ಕೆ ಪರಿಸರ ಸಂರಕ್ಷಣೆಯ ಯಜ್ಞವಾಗಿ ವಿಸ್ತಾರಗೊಳ್ಳುತ್ತಿರುವುದು ಮಾದರಿ ಕೈಂಕರ್ಯವಾಗಿದೆ.

    ಚಾತುರ್ಮಾಸ್ಯ ಸಂಕಲ್ಪದ ಬಳಿಕ ಮಠಕ್ಕೆ ಶಿಷ್ಯರು ಅವರವರ ಸೀಮಾ, ಭಾಗಿಯ ಆಧಾರದಲ್ಲಿ ಬಂದು ಪಾದಪೂಜೆ, ಕುಂಕುಮಾರ್ಚನೆ ಹಾಗೂ ಇತರ ಸೇವೆ ಸಲ್ಲಿಸುವುದು ಸಂಪ್ರದಾಯ. ಹೀಗೆ ಸೇವೆ ಸಲ್ಲಿಸಿದ ಶಿಷ್ಯರಿಗೆ ಗುರುಗಳು ಆಶೀರ್ವಚನದ ಮೂಲಕ ಪವಿತ್ರ ಸಂದೇಶ ದಯಪಾಲಿಸಿ, ವೃಕ್ಷ ಮಂತ್ರಾಕ್ಷತೆ ನೀಡಿ ಚೆನ್ನಾಗಿ ಬೆಳೆಸುವಂತೆ ಸೂಚಿಸುತ್ತಾರೆ. ಗುರುಗಳು ಕೊಟ್ಟ ಗಿಡವನ್ನು ಶಿಷ್ಯರು ಅತೀವ ಶ್ರದ್ಧೆಯಿಂದ ಬೆಳೆಸುತ್ತಾರೆ.

    ಸ್ವರ್ಣವಲ್ಲೀಯದು ಪರಿಸರ ಸಂರಕ್ಷಣಾ ಪೀಠ. ಹಿಂದಿನ ಯತಿಗಳಾದ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳೂ ಪರಿಸರ ಕಾಳಜಿ ಹೊಂದಿದ್ದರು. 33 ವರ್ಷಗಳ ಹಿಂದೆ ಪೀಠಾರೋಹಣಗೈದ ಈಗಿನ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳಿಗೆ ಹಸಿರು ಸಂರಕ್ಷಣೆ ಬಗ್ಗೆ ವಿಶೇಷ ಪ್ರೀತಿ. ವೃಕ್ಷಾರೋಪಣ, ಸಸ್ಯಲೋಕ ಸೃಷ್ಟಿಯ ಜತೆಗೆ 2006ರಿಂದ ಶ್ರೀಗಳು ವೃಕ್ಷ ಮಂತ್ರಾಕ್ಷತೆ ನೀಡುತ್ತಿದ್ದಾರೆ. ಪ್ರಸಕ್ತ ಸಾಲಿನ ಚಾತುರ್ಮಾಸ್ಯದ ವೇಳೆ ಮಠದ ಈ ಕೈಂಕರ್ಯಕ್ಕೆ ಅರಣ್ಯ ಇಲಾಖೆ ಅಪರೂಪದ ವನಸ್ಪತಿ ಗಿಡಗಳನ್ನು ನೀಡುವ ಮೂಲಕ ಹೆಗಲು ಕೊಟ್ಟಿದೆ.

    ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಪೀಠಾರೋಹಣದ 25, 30ನೇ ವರ್ಷದ ಆಚರಣೆ ಸಂದರ್ಭದಲ್ಲೂ ಸಸ್ಯಾರೋಪಣವನ್ನು ಅಭಿಯಾನದ ಮಾದರಿಯಲ್ಲಿ ನಡೆಸಲಾಗಿತ್ತು. ಪ್ರತಿ ವರ್ಷದ ಚಾತುರ್ಮಾಸ್ಯದಲ್ಲೂ ಕನಿಷ್ಠ 5 ಸಾವಿರ ವನಸ್ಪತಿ ಹಾಗೂ ಇತರ ಜಾತಿವಾರು ಗಿಡಗಳನ್ನು ನೀಡಲಾಗುತ್ತಿದ್ದು, ಈಗಾಗಲೇ ಲಕ್ಷ ಮೀರಿದೆ. ಬಸವನಪಾದ, ಅಶೋಕ, ಹಲಸು, ಮಾವು, ರಕ್ತ ಚಂದನ, ಪೇರಲ, ಗೇರು ಸೇರಿದಂತೆ ಒಳ್ಳೊಳ್ಳೆ ಜಾತಿಯ ಸಸಿಗಳನ್ನು ನೀಡಲಾಗಿದೆ. ನಮ್ಮ ಕೊರತೆ ನೀಗಿಸಲು ಅರಣ್ಯ ಇಲಾಖೆ ಸಹಕಾರ ನೀಡಿದೆ ಎನ್ನುತ್ತಾರೆ ಸಸ್ಯ ಲೋಕದ ಉಸ್ತುವಾರಿ ಮಹಾಬಲೇಶ್ವರ ಗುಮ್ಮಾನಿ.

    ಶಿಷ್ಯರಲ್ಲಿ ಪರಿಸರ ಪ್ರೀತಿಯನ್ನು ಬೆಳೆಸಿ, ಪ್ರಕೃತಿಯ ಸಂರಕ್ಷಣೆಗೆ ಆಯ್ದುಕೊಂಡ ಒಂದು ಮಾರ್ಗ ವೃಕ್ಷ ಮಂತ್ರಾಕ್ಷತೆ. ಗಿಡಗಳನ್ನು ವಿತರಿಸುವಾಗ ನಮಗೆ ಖುಷಿ ಇದೆ. ಶಿಷ್ಯರೂ ಗಿಡ ನೆಟ್ಟು ಬೆಳೆಸುತ್ತಿರುವುದು ಗಮನಕ್ಕಿದೆ.
    I ಸ್ವರ್ಣವಲ್ಲೀ ಶ್ರೀಗಳು

    ಸ್ವರ್ಣವಲ್ಲೀ ಪೀಠದಿಂದ ವೃಕ್ಷ ಮಂತ್ರಾಕ್ಷತೆ ಅಭಿಯಾನದ ಮೂಲಕ ಶಿಷ್ಯ ವರ್ಗದಲ್ಲಿ ವೃಕ್ಷ ಪ್ರೀತಿ ಬೆಳೆಸುತ್ತಿರುವುದು ಇಡೀ ರಾಜ್ಯಕ್ಕೆ ಮಾದರಿ. ಪರಿಸರ ಸಂರಕ್ಷಣೆಯಲ್ಲಿ ಇಂಥ ಸಹಭಾಗಿತ್ವದ ಕೊಡುಗೆಗಳು ಕೂಡ ದೊಡ್ಡವು.
    I ಡಾ. ಅಜ್ಜಯ್ಯ, ಡಿಎಫ್‌ಓ, ಶಿರಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts