More

    ನೌಕಾಪಡೆಗೆ ಇನ್ನಷ್ಟು ಸ್ಕಾರ್ಪೀನ್ ಬಲ

    ಫ್ರಾನ್ಸ್ ತಂತ್ರಜ್ಞಾನದ ಬೆಂಬಲದೊಂದಿಗೆ ಮುಂಬೈನ ಮಜಗಾಂವ್ ಡಾಕ್​ನಲ್ಲಿ ಈಗಾಗಲೇ 5 ಸ್ಕಾರ್ಪಿನ್ ಸಬ್​ವುರೀನ್​ಗಳನ್ನು ತಯಾರಿಸಿ ನೌಕಾಪಡೆಯ ಸೇವೆಗೆ ಒದಗಿಸಲಾಗಿದ್ದು, ಇನ್ನೊಂದು ಶೀಘ್ರದಲ್ಲೇ ಕಾರ್ಯಾಚರಣೆಗೆ ಅಣಿಯಾಗಲಿದೆ. ಇದಲ್ಲದೆ, ಮತ್ತೆ 3 ಸ್ಕಾರ್ಪೀನ್​ಗಳನ್ನು ಖರೀದಿಸುವುದಕ್ಕೆ ರಕ್ಷಣಾ ಸ್ವಾಧೀನ ಮಂಡಳಿ ಈಗ ಒಪ್ಪಿಗೆ ಸೂಚಿಸಿದೆ. ಸ್ಕಾರ್ಪೀನ್ ವೈಶಿಷ್ಟ್ಯಗಳೇನು‘? ನೌಕಾಪಡೆಗೆ ಮತ್ತಷ್ಟು ಅವಶ್ಯಕತೆ ಏಕಿದೆ? ಎಂಬ ಸಂಗತಿಗಳತ್ತ ಒಂದು ನೋಟ.

    ಭಾರತದ ಸಶಸ್ತ್ರ ಪಡೆಗಳಿಗೆ ಮಿಲಿಟರಿ ಉಪಕರಣಗಳನ್ನು ಖರೀದಿಸುವ ಕುರಿತು ಉನ್ನತ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾದ ರಕ್ಷಣಾ ಸ್ವಾಧೀನ ಮಂಡಳಿಯು (ಡಿಫೆನ್ಸ್ ಅಕ್ವಿಸಿಷನ್ ಕಮಿಟಿ- ಡಿಎಸಿ) ನೌಕಾಪಡೆಗೆ ಮೂರು ಹೆಚ್ಚುವರಿ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳು (ಸಬ್​ವುರೀನ್) ಹಾಗೂ 26 ರಫೆಲ್ ಮೆರೈನ್ ಫೈಟರ್ ಜೆಟ್​ಗಳನ್ನು ಖರೀದಿಸುವ ಸಹಸ್ರಾರು ಕೋಟಿ ರೂಪಾಯಿ ಮೌಲ್ಯದ ಪ್ರಸ್ತಾವನೆಗಳಿಗೆ ಅನುಮತಿ ನೀಡಿದೆ.

    ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳು ಮತ್ತು ರಫೆಲ್ ಮೆರೈನ್ ಫೈಟರ್ ಜೆಟ್​ಗಳನ್ನು ಪೂರೈಸುವ ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್​ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿರುವ ಸಂದರ್ಭದಲ್ಲಿಯೇ ಈ ನಿರ್ಧಾರವು ಹೊರಹೊಮ್ಮಿದೆ. ಪ್ರಧಾನಿ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್ ಅವರು ಇದಕ್ಕೆ ಸಹಮತವನ್ನೂ ವ್ಯಕ್ತಪಡಿಸಿದ್ದಾರೆ.

    ಭಾರತವು ಈಗಾಗಲೇ ಸ್ಕಾರ್ಪೀನ್ ಶ್ರೇಣಿಯ ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ. ಮುಂಬೈನಲ್ಲಿರುವ ಮಜಗಾಂವ್ ಡಾಕ್ ಶಿಪ್​ಬಿಲ್ಡರ್ಸ್ ಲಿಮಿಟೆಡ್​ನಲ್ಲಿ (ಎಂಡಿಎಲ್)ಇವುಗಳನ್ನು ನಿರ್ವಿುಸಲಾಗಿದೆ. ಇದಕ್ಕೆ ಅಗತ್ಯವಿರುವ ತಂತ್ರಜ್ಞಾನವನ್ನು ಫ್ರಾನ್ಸ್ ಪೂರೈಸಿದೆ.

    Scorpian

    ಎಂಡಿಎಲ್ ಯೋಜನೆ -75ರ ಅಡಿಯಲ್ಲಿ ಫ್ರಾನ್ಸ್ ಸಹಯೋಗದೊಂದಿಗೆ ಆರು ಸ್ಕಾರ್ಪೀನ್ ಶ್ರೇಣಿಯ ಜಲಾಂತರ್ಗಾಮಿ ನೌಕೆಗಳನ್ನು ನಿರ್ವಿುಸಲಾಗುತ್ತಿದೆ. ಈ ಕುರಿತಂತೆ 2005ರ ಅಕ್ಟೋಬರ್​ನಲ್ಲಿ 3.75 ಶತಕೋಟಿ ಡಾಲರ್ (30,779 ಕೋಟಿ ರೂಪಾಯಿ) ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದ ಭಾಗವಾಗಿ ಜಲಾಂತರ್ಗಾಮಿಯನ್ನು ಎಂಡಿಎಲ್​ನಲ್ಲಿ ತಯಾರಿಸಲು ಫ್ರೆಂಚ್ ರಕ್ಷಣಾ ಸಂಸ್ಥೆಯಾದ ನೇವಲ್ ಗ್ರೂಪ್​ನಿಂದ ತಂತ್ರಜ್ಞಾನವನ್ನು ವರ್ಗಾಯಿಸಲು ಅವಕಾಶ ಕಲ್ಪಿಸಲಾಗಿದೆ. ಈ ಪೈಕಿ ಐದು ಜಲಾಂತರ್ಗಾಮಿ ನೌಕೆಗಳನ್ನು ಈಗಾಗಲೇ ತಯಾರಿಸಿ ಸೇವೆಗೆ ನಿಯೋಜಿಸಲಾಗಿದೆ. ಕೊನೆಯದಾದ ಇನ್ನೊಂದು ಜಲಾಂತರ್ಗಾಮಿ ನೌಕೆಯು ಮುಂದಿನ ವರ್ಷದ ಆರಂಭದಲ್ಲಿ ಸೇವೆಗೆ ನಿಯೋಜನೆಗೊಳ್ಳುವ ಸಾಧ್ಯತೆ ಇದೆ. ಮೊದಲ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಯನ್ನು 2012ರಲ್ಲಿಯೇ ನೌಕಾಪಡೆಗೆ ಹಸ್ತಾಂತರಿಸಲು ಸಮಯ ನಿಗದಿಪಡಿಸಲಾಗಿದ್ದರೂ ಸಾಕಷ್ಟು ವಿಳಂಬವಾಗಿದೆ. ಎಂಡಿಎಲ್ ಯೋಜನೆ -75ರಲ್ಲಿ ಜಲಾಂತರ್ಗಾಮಿ ನೌಕೆಗಳಾದ ಐಎನ್​ಎಸ್ ಕಲ್ವರಿ, ಐಎನ್​ಎಸ್ ಖಂಡೇರಿ, ಐಎನ್​ಎಸ್ ಕರಂಜ್ ಮತ್ತು ಐಎನ್​ಎಸ್ ವೇಲಾವನ್ನು 2017 ಮತ್ತು 2021ರ ನಡುವೆ ತಯಾರಿಗೆ ಸೇವೆಗೆ ಒದಗಿಸಲಾಗಿದೆ. ಐದನೇ ಜಲಾಂತರ್ಗಾಮಿಯಾದ ಐಎನ್​ಎಸ್ ವಜೀರ್ ಅನ್ನು ಈ ವರ್ಷದ ಜನವರಿಯಲ್ಲಿ ಸೇವೆಗೆ ನಿಯೋಜಿಸಲಾಗಿದೆ. ಆರನೇ ಜಲಾಂತರ್ಗಾಮಿ ವಾಗ್​ಶೀರ್ ತನ್ನ ಸಮುದ್ರಯಾನ ಪ್ರಯೋಗಗಳನ್ನು ಈ ವರ್ಷದ ಮೇ ತಿಂಗಳಲ್ಲಿ ಪ್ರಾರಂಭಿಸಿದೆ.

    ಪರಮಾಣು ಜಲಾಂತರ್ಗಾಮಿ ಖರೀದಿ ಏಕಿಲ್ಲ?

    ಸಾಂಪ್ರದಾಯಿಕ ಜಲಾಂತರ್ಗಾಮಿಗಳಲ್ಲದೆ, ಪರಮಾಣು ಜಲಾಂತರ್ಗಾಮಿಗಳು ಕೂಡ ಬಳಕೆಯಲ್ಲಿವೆ. ಭಾರತವು ಪ್ರಸ್ತುತ ಅರಿಹಂತ ಶ್ರೇಣಿಯ ಪರಮಾಣು ಶಕ್ತಿಯ ಎರಡು ಜಲಾಂತರ್ಗಾಮಿಗಳನ್ನು ಹೊಂದಿದೆ. ಇವು ಬ್ಯಾಟರಿಗಳಿಂದ ಚಾಲಿತವಾಗುವುದಿಲ್ಲ. ಪರಮಾಣು ಇಂಧನದ ಮೂಲಕ ಕಾರ್ಯನಿರ್ವಹಿಸುತ್ತವೆ. ಇದಕ್ಕಾಗಿ ಜಲಾಂತರ್ಗಾಮಿ ನೌಕೆಯಲ್ಲಿ ಪರಮಾಣು ಸ್ಥಾವರ ನಿರ್ವಿುಸಲಾಗಿರುತ್ತದೆ. ಇವು 30 ವರ್ಷಗಳವರೆಗೆ ಬಾಳಿಕೆ ಸಾಮರ್ಥ್ಯ ಹೊಂದಿರುತ್ತವೆ. ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳಿಗಿಂತ ಇವು ಹೆಚ್ಚು ವೇಗವಾಗಿ ಚಲಿಸಬಲ್ಲವು. ಸಾಂಪ್ರದಾಯಿಕ ಜಲಾಂತಗಾರ್ವಿುಗಳ ರೀತಿಯಲ್ಲಿ ಇಂಧನ ಮರುಭರ್ತಿಗೆ ಇವುಗಳು ನೀರಿನ ಮೇಲ್ಮೈಗೆ ಬರುವುದಿಲ್ಲ. ನೌಕೆಯಲ್ಲಿನ ಸಿಬ್ಬಂದಿಗೆ ಅಗತ್ಯವಿರುವ ಸಾಮಗ್ರಿಗಳ ಪಡೆದುಕೊಳ್ಳಲು ಮಾತ್ರ ಮೇಲೆ ಬರುತ್ತವೆ. ಹೀಗೆ ಅನೇಕ ಅನುಕೂಲಗಳಿದ್ದರೂ ಭಾರತೀಯ ನೌಕಾಪಡೆಯು ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಲು ಏಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪರಮಾಣು ಜಲಾಂತರ್ಗಾಮಿ ನೌಕೆಗಳು ದುಬಾರಿಯಾಗಿರುತ್ತವೆ. ಇವುಗಳ ಕಾರ್ಯಾಚರಣೆಗೆ ವಿಶೇಷ ಅನುಭವದ ಅಗತ್ಯವೂ ಇರುತ್ತದೆ. ಇದಲ್ಲದೆ, ಡೀಸೆಲ್- ಎಲೆಕ್ಟ್ರಿಕ್ ತಂತ್ರಜ್ಞಾನದಲ್ಲಿ ಈಗ ಸಾಕಷ್ಟು ಪ್ರಗತಿಯಾಗಿರುವುದರಿಂದ ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳ ಕಾರ್ಯಕ್ಷಮತೆ ಕೂಡ ಹೆಚ್ಚಾಗಿದೆ. ಬ್ಯಾಟರಿಗಳ ಮೂಲಕ ಕಾರ್ಯನಿರ್ವಹಿಸುವಾಗ ಜಲಾಂತರ್ಗಾಮಿ ನೌಕೆಗಳ ಸದ್ದು ಬಹುತೇಕ ಇರುವುದಿಲ್ಲ. ಶಾಫ್ಟ್ ಬೇರಿಂಗ್​ಗಳು, ಪೊ›ಪೆಲ್ಲರ್ ಮತ್ತು ಹಲ್​ನ ಸುತ್ತಮುತ್ತಲಿನ ಒಂದಿಷ್ಟು ಶಬ್ದ ಮಾತ್ರ ಇರುತ್ತದೆ. ಜಲಾಂತರ್ಗಾಮಿಗಳು ಸದ್ದಿಲ್ಲದೆ ರಸಹ್ಯವಾಗಿ ಚಲಿಸಲು ಅನುಕೂಲವಾಗುತ್ತದೆ. ಈ ಕಾರಣದಿಂದಾಗಿ ಸಾಂಪ್ರದಾಯಿಕ ಜಲಾಂತರ್ಗಾಮಿಗಳ ಖರೀದಿಗೆ ನೌಕಾಪಡೆ ಮುಂದಾಗಿದೆ.

     Scorpian

    ಸ್ಕಾರ್ಪೀನ್ ವೈಶಿಷ್ಟ್ಯಗಳು

    ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳು ಸಾಂಪ್ರದಾಯಿಕ ದಾಳಿಯ ಸಬ್​ವುರೀನ್​ಗಳಾಗಿವೆ. ಅಂದರೆ, ಕದನದ ಸಂದರ್ಭದಲ್ಲಿ ಎದುರಾಳಿ ನೌಕಾ ಹಡಗುಗಳನ್ನು ಗುರಿಯಾಗಿಸುವ ಮತ್ತು ಮುಳುಗಿಸುವ ಸಾಮರ್ಥ್ಯದೊಂದಿಗೆ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಟಾರ್ಪಿಡೊಗಳು (ಹಡಗುಗಳನ್ನು ಗುರಿಯಾಗಿಸಿಕೊಂಡು ಜಲಾಂತ ರ್ಗಾಮಿಯಿಂದ ಉಡಾವಣೆಯಾಗುವ ಕೊಳವೆ ಆಕಾರದ ಬಾಂಬ್​ಗಳು) ಮತ್ತು ಕ್ಷಿಪಣಿಗಳನ್ನು ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿವೆ. ಇವುಗಳಲ್ಲಿ ದೂರ ಅಂತರದವರೆಗೆ ಕಣ್ಗಾವಲು ಇಡುವ ಮತ್ತು ಗುಪ್ತಚರ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಗಳು ಕೂಡ ಇವೆ. ಇವು ಅಂದಾಜು 220 ಅಡಿ ಉದ್ದ ಮತ್ತು ಅಂದಾಜು 40 ಅಡಿ ಎತ್ತರವಾಗಿವೆ. ಇವು ನೀರಿನ ಮೇಲ್ಮೈಯಲ್ಲಿ 11 ನಾಟ್ (ಪ್ರತಿ ಗಂಟೆಗೆ 20 ಕಿಮೀ) ಮತ್ತು ಮುಳುಗಿದಾಗ 20 ನಾಟ್ (ಪ್ರತಿ ಗಂಟೆಗೆ 37 ಕಿಮೀ) ಗರಿಷ್ಠ ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿವೆ. ಸ್ಕಾರ್ಪೀನ್ ಶ್ರೇಣಿಯ ಜಲಾಂತರ್ಗಾಮಿಗಳು ಡೀಸೆಲ್- ಎಲೆಕ್ಟ್ರಿಕ್ ಪ್ರಚೋದನೆ ವ್ಯವಸ್ಥೆ (ಪೊ›ಪಲ್ಷನ್ ಸಿಸ್ಟಮ್ ಒಳಗೊಂಡಿವೆ. ನೀರಿನ ಮೇಲ್ಮೈಯಲ್ಲಿ ಚಲಿಸುವಾಗ ಡೀಸೆಲ್ ಇಂಜಿನ್ ಮತ್ತು ನೀರಿನಡಿಯಲ್ಲಿ ಸಾಗುವಾಗ ಎಲೆಕ್ಟ್ರಿಕ್ ಇಂಜಿನ್ ವ್ಯವಸ್ಥೆ ಬಳಕೆಯಾಗುತ್ತದೆ. ಒಂದು ಬಾರಿ ಇಂಧನ ತುಂಬಿದರೆ ಅಂದಾಜು 50 ದಿನಗಳವರೆಗೆ ಕಾರ್ಯನಿರ್ವಹಿಸುವ ವೈಶಿಷ್ಟ್ಯ ಇವುಗಳದ್ದಾಗಿದೆ. ದೀರ್ಘಾವಧಿಯವರೆಗೆ ನೀರಿನ ಅಡಿಯಲ್ಲಿ ಕಾರ್ಯನಿರ್ವಹಿಸಿದ ನಂತರ ವಿದ್ಯುತ್ ಬ್ಯಾಟರಿಗಳನ್ನು ಡೀಸೆಲ್ ಇಂಜಿನ್​ನಿಂದ ರೀಚಾರ್ಜ್ ಮಾಡಬೇಕಾಗುತ್ತದೆ. ಹೀಗಾಗಿ, ಜಲಾಂತರ್ಗಾಮಿ ಕಾರ್ಯಾಚರಣೆಯನ್ನು ಮುಂದುವರಿಸಲು ನಿಯತಕಾಲಿಕವಾಗಿ ನೀರಿನ ಮೇಲ್ಮೈಗೆ ಬರಬೇಕಾಗುತ್ತದೆ.

    ಹೆಚ್ಚುವರಿ ಅಗತ್ಯವೇಕೆ?

    ಈಗ ಹೆಚ್ಚುವರಿಯಾಗಿ ಮೂರು ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳನ್ನು ನಿರ್ವಿುಸಲು ಎಂಡಿಎಲ್​ಗೆ ಡಿಎಸಿ ಅನುಮತಿ ನೀಡಿದೆ. ಯೋಜನೆ 75ರ ಅಡಿಯಲ್ಲಿ ಜಲಾಂತರ್ಗಾಮಿ ನೌಕೆಗಳ ವಿತರಣೆ ವಿಳಂಬವಾದ ಹಿನ್ನೆಲೆಯಲ್ಲಿ ಹಾಗೂ ಕ್ಷೀಣಿಸುತ್ತಿರುವ ಭಾರತದ ಜಲಾಂತರ್ಗಾಮಿ ಪಡೆಯ ಬಲವನ್ನು ವರ್ಧಿಸುವ ನಿಟ್ಟಿನಲ್ಲಿ ಮೂರು ಹೆಚ್ಚುವರಿ ಜಲಾಂತರ್ಗಾಮಿ ನೌಕೆಗಳನ್ನು ಸೇವೆಗೆ ನಿಯೋಜಿಸುವ ಅಗತ್ಯವನ್ನು ಮನಗಾಣಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಸಿಂಧುಘೊಷ್ ಶ್ರೇಣಿಯ ಏಳು (ರಷ್ಯನ್ ಕಿಲೋ ವರ್ಗ), ಶಿಶುಮಾರ್ ಶ್ರೇಣಿಯ ನಾಲ್ಕು (ಜರ್ಮನಿ 209 ಮಾದರಿಗಳ ಮಾರ್ಪಾಡು) ಮತ್ತು ಕಲ್ವರಿ ಶ್ರೇಣಿಯ ಐದು (ಫ್ರೆಂಚ್ ಸ್ಕಾರ್ಪೀನ್ ಮಾದರಿ) ಸೇರಿ ಪ್ರಸ್ತುತ ನೌಕಾಪಡೆಯ ಸೇವೆಯಲ್ಲಿ 16 ಸಾಂಪ್ರದಾಯಿಕ ಜಲಾಂತರ್ಗಾಮಿಗಳಿವೆ. ಆದರೆ, ನೌಕಾಪಡೆಗೆ ಸಂಪೂರ್ಣ ಕಾರ್ಯಾಚರಣೆ ಕೈಗೊಳ್ಳಲು ಕನಿಷ್ಠ ಇಂತಹ 18 ಜಲಾಂತರ್ಗಾಮಿ ನೌಕೆಗಳು ಬೇಕಾಗುತ್ತವೆ. ಇದಲ್ಲದೆ, ಅಂದಾಜು 30 ಪ್ರತಿಶತದಷ್ಟು ಜಲಾಂತರ್ಗಾಮಿ ನೌಕೆಗಳು ನವೀಕರಣಕ್ಕೆ ಹೋಗಿರುತ್ತವೆ, ಹೀಗಾಗಿ ಸೇವೆಯಲ್ಲಿರುವ ಜಲಾಂತರ್ಗಾಮಿಗಳ ಬಲವು ಮತ್ತಷ್ಟು ಕಡಿಮೆಯಾಗಿರುತ್ತದೆ. ಇತ್ತೀಚಿನ ಕಲ್ವಾರಿ ವರ್ಗದ ಜಲಾಂತರ್ಗಾಮಿ ನೌಕೆಗಳನ್ನು ಕೂಡ ಶೀಘ್ರದಲ್ಲೇ ಪುನರ್​ನಿರ್ವಣಕ್ಕೆ ಕಳಹಿಸಿಕೊಡಲು ನಿರ್ಧರಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯವಾಗಿ ಉತ್ಪಾದಿಸಿದ ಬಿಡಿಭಾಗಗಳೊಂದಿಗೆ ನಿರ್ವಿುಸಲಾದ ಹೆಚ್ಚುವರಿ ಜಲಾಂತರ್ಗಾಮಿ ನೌಕೆಗಳ ಖರೀದಿಯು ಅಗತ್ಯವಿರುವ ನೌಕಾ ಬಲ ಮಟ್ಟವನ್ನು ಪೂರೈಸುವುದಲ್ಲದೆ, ನೌಕಾಪಡೆಯ ಕಾರ್ಯಾಚರಣೆಯ ಸಿದ್ಧತೆಯನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಅಲ್ಲದೆ, ದೇಶದಲ್ಲಿ ಸಾಕಷ್ಟು ಪ್ರಮಾಣದ ಉದ್ಯೋಗಾವಕಾಶ ಸೃಷ್ಟಿಗೂ ಕಾರಣವಾಗುತ್ತದೆ. ಜಲಾಂತರ್ಗಾಮಿ ನಿರ್ವಣದಲ್ಲಿ ತನ್ನ ಸಾಮರ್ಥ್ಯ ಮತ್ತು ಪರಿಣತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಲ್ಲಿ ಇದು ಎಂಡಿಎಲ್​ಗೆ ನೆರವಾಗುತ್ತದೆ ಎಂಬುದು ರಕ್ಷಣಾ ಇಲಾಖೆಯ ಅಭಿಪ್ರಾಯವಾಗಿದೆ.

    ಆರ್​ಸಿಬಿಗೆ ಶೀಘ್ರವೇ ಹೊಸ ಕೋಚ್​ ನಿರೀಕ್ಷೆ; ಹೆಸ್ಸನ್​, ಬಂಗಾರ್​ಗೆ ಗೇಟ್​ಪಾಸ್​​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts