More

    ಕರುನಾಡಿಗೆ ಇನ್ನಷ್ಟು ಬಿಸಿಲುಘಾತ:ಮತದಾನ ಮೇಲೆ ಪರಿಣಾಮ

    ಬೆಂಗಳೂರು:ಬಿಸಿಲುಘಾತದಿಂದ ತತ್ತರಿಸಿರುವ ರಾಜ್ಯಕ್ಕೆ ಮುಂದಿನ ಐದು ದಿನ ಗರಿಷ್ಠ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಈ ಮೂಲಕ ಉಷ್ಣ ಅಲೆಗೆ ಕರುನಾಡು ಇನ್ನಷ್ಟು ತತ್ತರಿಸುವಂತಾಗಿದೆ.

    ಮಂಡ್ಯ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಗದಗ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಏ.26ರಿಂದ ಏ.29ರವರೆಗೆ ಬಿಸಿಗಾಳಿ ಬೀಸಲಿದೆ. ಈ ಮೇಲಿನ ಜಿಲ್ಲೆಗಳಲ್ಲಿ ಈಗಾಗಲೇ ಉಷ್ಣ ಅಲೆಗೆ ತುತ್ತಾಗಿವೆ. ಮುಕ್ಕಾಲು ರಾಜ್ಯದ ಪ್ರದೇಶಗಳಲ್ಲಿ ಉಷ್ಣಾಂಶ 40ರ ಗಡಿ ದಾಟಿದೆ. ದಕ್ಷಿಣ ಒಳನಾಡಿನ ಒಂದೆರೆಡು ಜಿಲ್ಲೆಗಳಲ್ಲಿ ವಾಡಿಕೆಗಿಂತ 5 ಡಿ.ಸೆ. ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ಕರಾವಳಿ ಭಾಗದ ಜಿಲ್ಲೆಗಳಲ್ಲಿ ವಾಡಿಕೆಗಿಂತ 2-3 ಡಿ.ಸೆ.ಹೆಚ್ಚು ವರದಿಯಾಗುತ್ತಿದೆ. ಗುರುವಾರ ರಾಯಚೂರಿನಲ್ಲಿ 44.5 ಡಿ.ಸೆ.ದಾಖಲಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನದಲ್ಲಿ 37 ಡಿ.ಸೆ. ಕಂಡುಬಂದಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

    ಬರಗಾಲದಿಂದ ಮಣ್ಣಿನಲ್ಲಿ ತೇವಾಂಶ ಕೊರತೆ, ಕೆರೆ,ಗುಂಟೆಗಳಲ್ಲಿ ನೀರು ಬರಿದಾಗಿರುವುದು, ತೇವಾಂಶ ಭರಿತ ಮೋಡ ಇಲ್ಲದಿರುವುದು, “ಎಲ್​ ನಿನೋ’ ಪ್ರಬಾವ ಸೇರಿ ಇತರ ಕಾರಣಗಳಿಂದ ಬಿಸಿಲು ಹೆಚ್ಚಿದೆ. ಹೀಗಾಗಿ, ಚಿಕ್ಕ ಮಕ್ಕಳು, ವೃದ್ಧರು, ದೀರ್ಕಾಲದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಬಿಸಿಲು ಪ್ರಖರತೆ ಇರುವ ಸಂದರ್ಭದಲ್ಲಿ ಹೊರಗಡೆ ಓಡಾಡುವುದನ್ನು ತಪ್ಪಿಸುವುದು ಒಳಿತು.

    ಮತದಾನ ಮೇಲೆ ಪರಿಣಾಮ
    ಮುರ್ನಾಲ್ಕು ದಿನಗಳಿಂದ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶ 40ರ ಗಡಿ ದಾಟಿದೆ.ತುಮಕೂರು, ಕೋಲಾರ, ಮಂಡ್ಯ, ಚಾಮರಾಜನಗರ, ರಾಮನಗರ, ಕೋಲಾರದಲ್ಲಿಯೂ ಗರಿಷ್ಠ ತಾಪಮಾನದಲ್ಲಿ 40 ಡಿ.ಸೆ.ಉಷ್ಣಾಂಶ ಕಂಡುಬಂದಿದೆ.ಮೈಸೂರು,ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಬೆಂಗಳೂರು. ಬೆಂ.ಗ್ರಾಮಾಂತರದಲ್ಲಿ ಸರಾಸರಿ 37-38 ಉಷ್ಣಾಂಶ ವರದಿಯಾಗಿದೆ.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಜಿಲ್ಲೆಗಳಿಗೆ ಶುಕ್ರವಾರ (ಏ.26) ನಡೆಯಲಿರುವ ಮೊದಲ ಹಂತ ಮತದಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.ತಾಪಮಾನ ಹೆಚ್ಚಿದರೆ ಮತದಾರರು ಮತಗಟ್ಟೆ ಕೇಂದ್ರಗಳಿಗೆ ತೆರಳಿ ಮತ ಹಾಕಲು ಹಿಂದೇಟು ಹಾಕಲಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಆತಂಕ ಕಾಡುತ್ತಿದೆ.

    ಉಷ್ಣಾಂಶ ವಿವರ:
    ಜಿಲ್ಲೆ                            ತಾಪಮಾನ
    ರಾಯಚೂರು                    44.5
    ಕಲಬುರಗಿ                       44.3
    ಬಳ್ಳಾರಿ                          43.5
    ಕೊಪ್ಪಳ                         42.8
    ಯಾದಗಿರಿ                       42.4
    ವಿಜಯಪುರ                      42.2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts