More

    ಮೂಲ ಸ್ವರೂಪ ಕಂಡುಕೊಂಡ ವೃಷಭಾವತಿ ನದಿಯಲ್ಲಿ ಹರಿಯುತ್ತಿದೆ ಮಾಲಿನ್ಯರಹಿತ ತಿಳಿನೀರು

    ಬಿಡದಿ: ಬೆಂಗಳೂರಿನ ಕಲ್ಮಶವನ್ನು ಹೊತ್ತು ಬಿಡದಿ ಭಾಗದಲ್ಲಿ ಹರಿಯುತ್ತಿದ್ದ ವೃಷಭಾವತಿ ನದಿ, ಲಾಕ್‌ಡೌನ್ ಪರಿಣಾಮದಿಂದ ಹಿಂದಿನ ಮೂಲ ಸ್ವರೂಪ ಪಡೆದುಕೊಂಡು ನದಿಯಲ್ಲಿ ನೀರು ತಿಳಿಯಾಗಿ ಹರಿಯುತ್ತಿದೆ.

    ಬೆಂಗಳೂರು, ಕೆಂಗೇರಿ ಸೇರಿ ವಿವಿಧ ಬಡಾವಣೆಗಳ ಬಹುಪಾಲು ಪ್ರದೇಶಗಳ ನೀರು ವೃಷಭಾವತಿ ನದಿಯ ಮೂಲಕ ಬಿಡದಿಯ ಶ್ಯಾನುಮಂಗಲ, ತಾಳಗುಪ್ಪೆ, ಚಿನ್ನೇಗೌಡನ ದೊಡ್ಡಿ, ಅಂಚೀಪುರ, ಗೊಲ್ಲರಪಾಳ್ಯ, ಬೋಚೋ ಹಳ್ಳಿ, ಪರಸನಪಾಳ್ಯ, ಶೇಷಗಿರಿಹಳ್ಳಿ ಗ್ರಾಮಗಳ ಅಂಚಿನಲ್ಲಿ ಹರಿದು ಬೈರಮಂಗಲ ಕೆರೆಯನ್ನು ಸೇರುತ್ತಿತ್ತು. 383 ಚದರ ಕಿ.ಮೀ. ನದಿಪಾತ್ರ ಹೊಂದಿರುವ ವೃಷಭಾವತಿ ಬಿಬಿಎಂಪಿಯ 93 ವಾರ್ಡ್‌ಗಳು, 16 ವಿಧಾನಸಭೆ ಕ್ಷೇತ್ರಗಳು ಹಾಗೂ 5 ಲೋಕಸಭೆ ಕ್ಷೇತ್ರಗಳನ್ನು ಹಾದು ಹೋಗುತ್ತದೆ. ಬೆಂಗಳೂರು ನಗರ ಬೆಳೆದಂತೆಲ್ಲ ಒಂದು ನದಿಯನ್ನು ಬಲಿ ಪಡೆಯಿತು ಎಂಬ ಮಾತು ಸಾಮಾನ್ಯವಾಗಿದೆ.

    ನದಿಯನ್ನು ಮೋರಿಯಾಗಿ ಪರಿವರ್ತಿಸಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಅದರ ಶುದ್ಧೀಕರಣಕ್ಕೆ ಕೈಹಾಕಬೇಕು ಎಂದು ಸರ್ಕಾರವಷ್ಟೆ ಅಲ್ಲದೆ ಅನೇಕ ಸಂಘ ಸಂಸ್ಥೆಗಳು ನಿರಂತರ ಕಾರ್ಯ, ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿದ್ದವು. ಆದರೂ ಈ ನದಿಯನ್ನು ಶುದ್ಧೀಕರಿಸುವ ನಿರೀಕ್ಷೆ ಇರಲಿಲ್ಲ.

    ಆದರೆ, ಕರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಆಗಿರುವುದರಿಂದ ಕಳೆದ 15 ದಿನದಿಂದ ಕಾರ್ಖಾನೆಗಳು ಮುಚ್ಚಿದ್ದು, ಜನರು ಸಹ ಹಳ್ಳಿಗಳತ್ತ ಮುಖ ಮಾಡಿರುವುದರಿಂದ ಕಲುಷಿತ ವಿಷಯುಕ್ತ ನೀರಿನ ಅಂಶ ವೃಷಭಾವತಿ ನದಿಯಲ್ಲಿ ಕಡಿಮೆಯಾಗಿ ನೀರು ತಿಳಿಯಾಗಿ ಹರಿಯುತ್ತಿದೆ. ಈ ಹಿಂದೆ ಈ ಭಾಗದ ಜನರು ಮೂಗು ಮುಚ್ಚಿ ಓಡಾಟ ನಡೆಸುವ ವಾತಾವರಣದಿಂದ ಬೇಸತ್ತು ಹೋಗಿದ್ದರು. ಆದರೆ ಇದೀಗ ಸ್ವಲ್ಪಮಟ್ಟಿಗೆ ಬದಲಾಗಿರುವ ಪರಿಸರದಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಪ್ರಮುಖ ಕಾರಣ ಯಾರು?: ಸಾಮಾನ್ಯವಾಗಿ ಕಾರ್ಖಾನೆಗಳಿಂದ ಹರಿದುಬರುವ ನೀರಿನಿಂದ ನದಿಗಳು ಕಲುಷಿತವಾಗುತ್ತವೆ ಎಂಬ ನಂಬಿಕೆ ಇದೆ. ಆದರೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯೊಬ್ಬರ ಪ್ರಕಾರ, ಬಹುತೇಕ ಎಲ್ಲ ಕಾರ್ಖಾನೆಗಳಿಂದಲೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿಗೆ ಅನುಗುಣವಾಗಿ ನೀರನ್ನು ಸಂಸ್ಕರಿಸಿ ನದಿಗೆ ಬಿಡಲಾಗುತ್ತಿದೆ. ಎನ್‌ಜಿಟಿ ಆದೇಶದ ನಂತರ ಕೆಲ ಅಪಾರ್ಟ್‌ಮೆಂಟ್‌ಗಳೂ ಎಸ್‌ಟಿಪಿ ಅಳವಡಿಸಿಕೊಂಡು ಶುದ್ಧೀಕರಿಸಿದ ನೀರನ್ನು ಹೊರಗೆ ಬಿಡುತ್ತಿವೆ ಅಥವಾ ಗಾರ್ಡನ್ ಸೇರಿದಂತೆ ಮತ್ತಿತರ ಕಾರ್ಯಕ್ಕೆ ಪುನರ್ಬಳಕೆ ಮಾಡುತ್ತಿವೆ. ಆದರೆ, ವೈಯಕ್ತಿಕ ಮನೆಗಳು, ಕೊಳಚೆ ಪ್ರದೇಶಗಳು, ವಾಹನಗಳ ಸರ್ವೀಸ್ ಸ್ಟೇಷನ್‌ಗಳಿಂದ ನೀರು ನೇರವಾಗಿ ಕಾಲುವೆ ಮೂಲಕ ನದಿ ಸೇರುತ್ತಿತ್ತು. ಹಾಗೆಯೇ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬೆಂಗಳೂರು ತೊರೆದಿರುವುದೂ ನದಿ ನೀರು ತಿಳಿಯಾಗಲು ಕಾರಣವಿರಬಹುದು ಎಂದು ತಿಳಿಸಿದ್ದಾರೆ. ಆದರೆ, ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಕಾರ್ಖಾನೆಗಳೇ ಮಾಲಿನ್ಯಕ್ಕೆ ಕಾರಣ. ಅನೇಕ ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಿಳಿಸಿದ್ದರೂ ಕಾರ್ಖಾನೆಗಳ ವಿರುದ್ಧ ಅವರು ಕ್ರಮ ಕೈಗೊಂಡಿಲ್ಲ ಎಂದು ದೂರುತ್ತಾರೆ.

    ವೃಷಭಾವತಿ ನದಿಯಲ್ಲಿ ಬರುವ ತ್ಯಾಜ್ಯ ಮತ್ತು ಕಲ್ಮಶದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ಬದುಕು ಸಾಗಿಸುವುದು ಹೇಗೆಂಬ ಪ್ರಶ್ನೆ ಜನರನ್ನು ಕಾಡುತ್ತಿತ್ತು. ಕಳೆದ ಮೂರ‌್ನಾಲ್ಕು ದಿನದಿಂದ ಯಾವುದೇ ಕಲ್ಮಶ ಇಲ್ಲದೆ ತಿಳಿಯಾದ ನೀರು ಹರಿಯುತ್ತಿದ್ದು, ಸ್ವಲ್ಪ ಸಮಾಧಾನ ತಂದಿದೆ.

    ಸಿ.ಎನ್.ನಾಗರಾಜು ಚಿನ್ನೇಗೌಡನದೊಡ್ಡಿ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts