More

    ಮಲೆನಾಡಿನಲ್ಲಿ ಕೊಂಚ ಬಿರುಸು ಪಡೆದ ಮುಂಗಾರು ಮಳೆ

    ಶಿವಮೊಗ್ಗ: ಜಿಲ್ಲೆಯ ಹಲವೆಡೆ ಮುಂಗಾರು ಮತ್ತೆ ಕೊಂಚ ಬಿರುಸುಗೊಂಡಿದೆ. ಹಲವು ತಾಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿದ್ದುಜತೆಗೆ ಗಾಳಿಯ ರಭಸ ಕೂಡ ಹೆಚ್ಚುತ್ತಿದೆ. ಇದರಿಂದ ಮಂಡಗದ್ದೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದಿದ್ದು ಕೆಲ ಗಂಟೆಗಳ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.

    ಶಿವಮೊಗ್ಗ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಡಗದ್ದೆ ಹಾಗೂ ಮುಡುಬ ನಡುವಿನ ನಿಡಗಳಲೆ ಸಮೀಪ ಬುಧವಾರ ಮಧ್ಯಾಹ್ನ ಬೃಹತ್ ಗಾತ್ರದ ಮರವೊಂದು ರಸ್ತೆ ಮೇಲೆಯೆ ಉರುಳಿ ಬಿದ್ದಿದೆ. ಪರಿಣಾಮ ರಸ್ತೆ ಸಂಚಾರ ಕೆಲ ಕಾಲ ಬಂದ್ ಆಗಿತ್ತು. ವಿದ್ಯುತ್ ಕಂಬಗಳು ಕೂಡ ಧರೆಗುರುಳಿದ್ದು ವಯರ್‌ಗಳು ತುಂಡಾಗಿದ್ದರಿಂದ ಈ ಭಾಗದ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಿತ್ತು.
    ಉಳಿದಂತೆ ಎಲ್ಲ ತಾಲೂಕುಗಳಲ್ಲೂ ಮಳೆ ಆಗುತ್ತಿದ್ದು ಜಲಾಶಯಗಳ ನೀರಿನ ಮಟ್ಟದಲ್ಲೂ ಕೊಂಚ ಏರಿಕೆ ಕಂಡಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 220.50 ಮಿ.ಮೀ. ಮಳೆಯಾಗಿದ್ದು, ಸರಾಸರಿ 31.50 ಮಿ.ಮೀ. ಮಳೆ ದಾಖಲಾಗಿದೆ. ಜುಲೈನ ಸಾಮಾನ್ಯ ವಾಡಿಕೆ ಮಳೆ ಸರಾಸರಿ ಪ್ರಮಾಣ 687.87 ಮಿ.ಮೀ. ಇದ್ದು, ಇದುವರೆಗೆ ಸರಾಸರಿ 310.84 ಮಿ.ಮೀ. ಮಳೆ ದಾಖಲಾಗಿದೆ. ಶಿವಮೊಗ್ಗದಲ್ಲಿ 6.30, ಭದ್ರಾವತಿಯಲ್ಲಿ 5.30, ತೀರ್ಥಹಳ್ಳಿಯಲ್ಲಿ 56.50, ಸಾಗರದಲ್ಲಿ 47.90, ಶಿಕಾರಿಪುರದಲ್ಲಿ 12.40, ಸೊರಬದಲ್ಲಿ 30.30 ಹಾಗೂ ಹೊಸನಗರ ತಾಲೂಕಿನಲ್ಲಿ 61.80 ಮಿ.ಮೀ. ಮಳೆಯಾಗಿದೆ.
    1819 ಅಡಿ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1758.95 ಡಿಗೆ ಏರಿಕೆಯಾಗಿದೆ. 20,792 ಕ್ಯೂಸೆಕ್ ನೀರಿನ ಒಳಹರಿವಿದ್ದು ಒಂದೇ ದಿನ 1.65 ಅಡಿ ನೀರು ಹರಿದುಬಂದಿದೆ. ಜಲಾಶಯದಿಂದ 1,733.90 ಕ್ಯೂಸೆಕ್ ನೀರನ್ನು ನದಿಗೆ ಹೊರಬಿಡಲಾಯಿತು. 186 ಅಡಿ ಸಾಮರ್ಥ್ಯದ ಭದ್ರಾ ಜಲಾಶಯವು 141.70 ಅಡಿಗೆ ಏರಿಕೆ ಕಂಡಿದೆ. 1,518 ಕ್ಯೂಸೆಕ್ ನೀರಿನ ಒಳಹರಿವಿದ್ದು 164 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
    ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿದ್ದು 14,038 ಕ್ಯೂಸೆಕ್ ನೀರಿನ ಒಳಹರಿವಿದ್ದು ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಯಿತು. ಮಾಣಿ ಚೆಕ್ ಡ್ಯಾಂನ ನೀರಿನ ಮಟ್ಟ 574.88 ಎಂಎಸ್‌ಎಲ್‌ಗೆ ಏರಿಕೆಯಾಗಿದ್ದು 4,144 ಕ್ಯೂಸೆಕ್ ಒಳಹರಿವಿದೆ. ಪಿಕ್‌ಅಪ್ ಜಲಾಶಯಕ್ಕೆ 1,367 ಕ್ಯೂಸೆಕ್ ನೀರಿನ ಒಳಹರಿವಿದ್ದು 762 ಕ್ಯೂಸೆಕ್ ನೀರನ್ನು ಹೊರಬಿಡಲಾಯಿತು. ಚಕ್ರ ಚೆಕ್ ಡ್ಯಾಂಗೆ 1,979 ಕ್ಯೂಸೆಕ್, ಸಾವೆಹಕ್ಲು ಜಲಾಶಯಕ್ಕೆ 885 ಕ್ಯೂಸೆಕ್ ನೀರಿನ ಒಳಹರಿವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts