More

    ಸ್ವಾಭಿಮಾನದ ನಾಡು ಭಾರತ

    ಮೊಳಕಾಲ್ಮೂರು: ಭಾರತ ಕೋಮುವಾದಿ ರಾಷ್ಟ್ರವಲ್ಲ, ಗುರು, ಸಂತ ಪರಂಪರೆಯ ಸ್ವಾಭಿಮಾನ ನಾಡು ಎಂದು ಯೋಗ ಗುರು ಬಾಬಾ ರಾಮ್‌ದೇವ್ ಹೇಳಿದರು.

    ಪಟ್ಟಣದ ಸ್ವಕುಳಸಾಳಿ ಸಮಾಜದ ಪ್ರಥಮ ಪೀಠಾಧ್ಯಕ್ಷರ ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಶನಿವಾರ ಜಿಹ್ವೇಶ್ವರಾನಂದ ಸ್ವಾಮೀಜಿಗೆ ಕಿರೀಟ ಧಾರಣೆ ಮಾಡಿ ಆಶೀರ್ವಚನ ನೀಡಿದರು.

    ಭಾರತ ಸನಾತನ ಸಂಪ್ರದಾಯ ಹೊಂದಿರುವ ಜಾತ್ಯಾತೀತ ದೇಶ. ವಿವಿಧತೆಯಲ್ಲಿ ಏಕತೆ ಸಾರಿ ಅನ್ಯ ದೇಶಗಳಿಗೆ ಮಾದರಿಯಾಗಿದೆ. ಎಲ್ಲ ಸಂಪ್ರದಾಯಗಳನ್ನು ಗೌರವಿಸಿ ಮುನ್ನೆಡೆಸುವವನೆ ಯೋಗಿ. ವ್ಯಕ್ತಿ ಅಲ್ಲ ವ್ಯಕ್ತಿತ್ವದ ಪೂಜೆ, ಚಿತ್ರ ಅಲ್ಲ ಚರಿತ್ರೆಯ ಪೂಜೆ ಆಗಬೇಕು. ಆಧ್ಯಾತ್ಮ, ಯೋಗ, ಧ್ಯಾನದಲ್ಲಿ ದೇಶ ವಿಶ್ವವನ್ನೇ ಮೀರಿಸಿದೆ ಎಂದರು.

    ಪ್ರಕೃತಿಯೇ ದೇವರು. ಎಲ್ಲವೂ ಮನುಷ್ಯನ ಸೇವೆ ಮಾಡುತ್ತವೆ. ಸಾಧನೆಯ ದಾರಿಯಲ್ಲಿ ಎಲ್ಲರ ಪಾಲು ಇರಲಿ. ಜಿಹ್ವೇಶ್ವರ ಗುರು ಸ್ವಕುಳಸಾಳಿ ಸಮಾಜಕ್ಕೆ ಸಿಕ್ಕಿರುವುದೇ ಭಾಗ್ಯ. ಹರಿದ್ವಾರದಲ್ಲಿ ನನ್ನ ಗರಡಿಯಲ್ಲಿ ಬೆಳೆದ ಅವರಿಗೆ ನಾನೇ ದೀಕ್ಷೆ ನೀಡಿದ್ದೆ. ಈಗ ಒಂದು ಸಮಾಜದ ಗುರುವಾಗಿ ಪಟ್ಟಾಧಿಕಾರವನ್ನು ನನ್ನಿಂದಲೇ ಸ್ವೀಕಾರ ಮಾಡುವ ಅವರು ತೇಜಸ್ವಿ ಗುಣ ಹೊಂದಿ ಸಮಾಜದ ಪ್ರಗತಿಗೆ ಶ್ರಮಿಸಲಿ ಎಂದು ತಿಳಿಸಿದರು.

    ಶ್ರೀ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಮಠಾಧೀಶರನ್ನು ಒಳಗೊಂಡಿರುವ ಭರತ ಭೂಮಿಯಲ್ಲಿ ಜಾತ್ಯಾತೀತ ನಿಲುವಿನ ಸಮೃದ್ಧ ಸಮಾಜ ಕಟ್ಟುವ ಜವಾಬ್ದಾರಿ ಇದೆ. ಜಾತಿ, ಪಂಥ ತೊರೆದು ಮೌಲ್ಯಾಧಾರಿತ ಜೀವನ ನಡೆಸಬೇಕು ಎಂದರು.

    ಮಾನವ ದೊಡ್ಡವನಲ್ಲ; ಮಾನವೀಯತೆ ದೊಡ್ಡದು. ಅಂತಃಕರಣದಲ್ಲಿ ಪರಿಶುದ್ಧತೆ ಬೆಳೆಸಿಕೊಂಡು ಸಮಾಜ ಸುಧಾರಣೆಗೆ ದುಡಿಯುವವನೆ ನಿಜವಾದ ಪ್ರಗತಿಪರರಾಗುತ್ತಾನೆ ಎಂದು ತಿಳಿಸಿದರು.

    ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ವಿಶ್ವವೇ ಕೊಂಡಾಡುವಂಥ ಯೋಗಗುರು ಬಾಬಾ ರಾಮ್‌ದೇವ್ ಅವರ ಕೃಪೆಯಿಂದ ಸ್ವಕುಳಸಾಳಿ ಸಮಾಜಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದರು.

    ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿದರು. ಸಮಾಜದ ರಾಜ್ಯಾಧ್ಯಕ್ಷ ಚಂದ್ರಕಾಂತ್ ಎನ್.ಭಂಡಾರೆ ಅಧ್ಯಕ್ಷತೆ ವಹಿಸಿದ್ದರು. ಬಾಲೇಹೊಸೂರು ದಿಗಾಂಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಹೊಳೆ ಐರಣಿ ಮಠದ ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಮರಮಹಂಸಾನಂದ ಸ್ವಾಮೀಜಿ, ಶಂಭುಲಿಂಗ ಗುರೂಜಿ, ಭಗೀರಥ ಮಠದ ಶ್ರೀ, ಸೇವಾಲಾಲ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಪಟ್ಟಾಧಿಕಾರ ಮಹೋತ್ಸವ: ಮಧ್ಯಾಹ್ನ 4ಕ್ಕೆ ಪಟ್ಟಾಧಿಕಾರ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಯೋಗಗುರು ಬಾಬಾ ರಾಮ್‌ದೇವ್ ಜಿಹ್ವೇಶ್ವರಾನಂದ ಸ್ವಾಮೀಜಿಗೆ ಕೀಟಾಧಾರಣೆ ಮಾಡಿಸಿದರು. ರಾಜ್ಯ ಮತ್ತು ನೆರೆ ರಾಜ್ಯದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮಠದ ಪ್ರಗತಿ ಮತ್ತು ನಿತ್ಯ ಅನ್ನದಾಸೋಹಕ್ಕಾಗಿ ಸಮಾಜದ ಮುಖಂಡರು 1 ಲಕ್ಷದಿಂದ 5 ಲಕ್ಷ ರೂ. ವರೆಗೆ ಒಟ್ಟು 25 ಲಕ್ಷ ರೂ. ಮೌಲ್ಯದ ಚೆಕ್ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts