More

    ಮೊಳಕಾಲ್ಮೂರಲ್ಲಿ ಅರಳಿದ ಕಮಲ

    ಮೊಳಕಾಲ್ಮೂರು: ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಪಿ.ಲಕ್ಷ್ಮಣ, ಉಪಾಧ್ಯಕ್ಷೆಯಾಗಿ ಶುಭಾ ಪೃಥ್ವಿರಾಜ್ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದು, ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ.

    ಎರಡು ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದವು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಲಕ್ಷ್ಮಣ, ಕಾಂಗ್ರೆಸ್‌ನ ಅಬ್ದುಲ್ಲಾ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಶುಭಾ, ಪಕ್ಷೇತರ ಸದಸ್ಯ ಮಂಜುನಾಥ, ಕಾಂಗ್ರೆಸ್‌ನ ಪದ್ಮಾವತಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪಕ್ಷೇತರ ಸದಸ್ಯ ಮಂಜುನಾಥ ನಂತರ ಹಿಂಪಡೆದರು. 10 ಮಂದಿ ಸದಸ್ಯರು, ಒಬ್ಬ ಸಂಸದರು ಸೇರಿ 11 ಸಂಖ್ಯಾ ಬಲದಲ್ಲಿ ಕಮಲ ಪಾಳೆಯಕ್ಕೆ ಎರಡು ಸ್ಥಾನಗಳು ಸುಲಭವಾಗಿ ಲಭಿಸಿದವು. ಚುನಾವಣಾಧಿಕಾರಿ, ತಹಸೀಲ್ದಾರ್ ಮಲ್ಲಿಕಾರ್ಜುನ ಅಂತಿಮವಾಗಿ ಆಯ್ಕೆ ಘೋಷಿಸಿದರು.

    16 ಸದಸ್ಯ ಬಲದ ಪಪಂನಲ್ಲಿ ಪಕ್ಷೇತರರಿಬ್ಬರು ಸೇರಿ ಬಿಜೆಪಿಗೆ ಸಂಖ್ಯಾ ಬಲವಿದ್ದರೂ ಪಕ್ಷದಲ್ಲಿಯೇ ಗದ್ದುಗೆ ಅಲಂಕರಿಸಲು ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಳೆದ ಒಂದೂವರೆ ತಿಂಗಳಿಂದ ತೆರೆಮರೆಯಲ್ಲಿ ಕಸರತ್ತು ನಡೆದಿತ್ತು. ಸಚಿವ ಶ್ರೀರಾಮುಲು ಹಾಗೂ ಪಕ್ಷದ ಮುಖಂಡರು ಸದಸ್ಯರ ಸಭೆ ನಡೆಸಿ ಒಮ್ಮತ ಅಭಿಪ್ರಾಯದ ಮೇರೆಗೆ ಅಂತಿಮ ತೀರ್ಮಾನಕ್ಕೆ ಬಂದ ಕಾರಣ ದಾರಿ ಸುಗಮವಾಯಿತು.

    ಪಟ್ಟು: ಬೆಳಗ್ಗೆ ಕೆಗಳಹಟ್ಟಿ ತಿಪ್ಪೇಸ್ವಾಮಿ ಅವರ ತೋಟದ ಮನೆಯಲ್ಲಿ ಸಚಿವ ಶ್ರೀರಾಮುಲು, ಸಂಸದ ನಾರಾಯಣಸ್ವಾಮಿ ಹಾಗೂ ಪಕ್ಷದ ಮುಖಂಡರು ಸಭೆ ನಡೆಸಿ ಅಂತಿಮವಾಗಿ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ಅವರ ಹೆಸರು ಸೂಚಿಸುತ್ತಿದ್ದಂತೆ ಮತ್ತೊಬ್ಬ ಆಕಾಂಕ್ಷಿ ಟಿ.ರವಿಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನನ್ನನ್ನೇ ಅಧ್ಯಕ್ಷನನ್ನಾಗಿ ಮಾಡಬೇಕು ಎಂದು ಕೆಲ ಕಾಲ ಪಟ್ಟು ಹಿಡಿದರು. ಅವರನ್ನು ಸಮಾಧಾನಪಡಿಸುವಲ್ಲಿ ಸಚಿವರು, ಸಂಸದರು ಯಶಸ್ವಿಯಾದರು. ನಾಮಪತ್ರ ಹಿಂಪಡೆಯುವುದಿಲ್ಲ ಎಂದು ಬಿಗಿ ನಿಲುವು ತಾಳಿದ್ದ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿ, ಪಕ್ಷೇತರ ಸದಸ್ಯ ಮಂಜುನಾಥರನ್ನು ಸಂಸದರು ಮನವೊಲಿಸಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಜಯಪಾಲ, ಮಂಡಲ ಅಧ್ಯಕ್ಷರಾದ ಡಾ.ಪಿ.ಎಂ.ಮಂಜುನಾಥ, ರಾಮರೆಡ್ಡಿ, ಮಹೇಶ್, ಡಿವೈಎಸ್ ಶ್ರೀಧರ್, ಸಿಪಿಐ ಜೆ.ಬಿ.ಉಮೇಶ್ ನಾಯಕ, ಪಿಎಸ್‌ಐ ಬಸವರಾಜ್, ಪಪಂ ಮುಖ್ಯಾಧಿಕಾರಿ ಎಚ್.ಕಾಂತರಾಜ್ ಇದ್ದರು.

    ಸಂಸದ ನಾರಾಯಣಸ್ವಾಮಿ ಮಾತನಾಡಿ, ಹಿಂದುಳಿದ ಪ್ರದೇಶ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬದಲಾವಣೆ ತರುವುದು ಬಿಜೆಪಿ ಗುರಿ. ಶಾಶ್ವತ ಕುಡಿಯುವ ನೀರು, ಶಿಕ್ಷಣ, ಸಾರಿಗೆ ವ್ಯವಸ್ಥೆ ಮೊದಲಾಗಬೇಕಿದೆ. ಪಟ್ಟಣದ ಸರ್ವಾಂಗೀಣ ಪ್ರಗತಿಗೆ ಆದ್ಯತೆ ನೀಡಿ ಸಾಮಾಜಿಕ ಕಳಕಳಿ ಇರುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿದೆ. ಮೂಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸದ್ಯದಲ್ಲೇ ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುವುದು ಎಂದರು.

    ಪಪಂ ನೂತನ ಅಧ್ಯಕ್ಷ ಲಕ್ಷ್ಮಣ ಮಾತನಾಡಿ, ಪಕ್ಷದ ತತ್ವ, ಸಿದ್ಧಾಂತದಡಿ ವಹಿಸಿದ ಕೆಲಸವನ್ನು ನಿಷ್ಠೆಯಿಂದ ಮಾಡಿದ್ದರಿಂದ ಅಧ್ಯಕ್ಷ ಸ್ಥಾನ ಲಭಿಸಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶಕ್ತಿ ಮೀರಿ ದುಡಿಯುತ್ತೇನೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts