More

    ಮೊಳಕಾಲ್ಮೂರಲ್ಲಿ ನಿರಂತರ ದಾಸೋಹ

    ಮೊಳಕಾಲ್ಮೂರು: ಆಹಾರದ ಕಿಟ್ ಕೊಡುವ ಬದಲು ಎಲ್ಲ ವರ್ಗದ ಜನರಿಗೆ ಮಧ್ಯಾಹ್ನ ಒಂದೊತ್ತಿನ ಊಟ ಸಿಗಲೆಂಬ ಸದುದ್ದೇಶದಿಂದ ಸಚಿವ ಬಿ.ಶ್ರೀರಾಮುಲು, ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ದಾಸೋಹ ಮಂದಿರ ತೆರೆಯಲು ನಿರ್ಧರಿಸಿದ್ದಾರೆ.

    ದಾಸೋಹ ಮಂದಿರದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಒಂದೆರಡು ದಿನದಲ್ಲಿ ಅಡುಗೆ ಕೋಣೆ, ಕುಡಿವ ನೀರಿನ ವ್ಯವಸ್ಥೆ ಇತ್ಯಾದಿ ಕಾರ್ಯಗಳು ಪೂರ್ಣಗೊಳ್ಳಲಿವೆ. ಬಳಿಕ ಇದಕ್ಕೆ ಸಚಿವರು ಚಾಲನೆ ನೀಡಲಿದ್ದಾರೆ.

    ಲಾಕ್‌ಡೌನ್‌ನಿಂದ ಎಲ್ಲ ವರ್ಗದ ಜನ ಸಂಕಷ್ಟದಲ್ಲಿದ್ದಾರೆ. ಆಹಾರ ಧಾನ್ಯದ ಕಿಟ್ ನೀಡುವುದು ಶಾಶ್ವತ ಪರಿಹಾರವಲ್ಲ. ಅಲ್ಲದೆ ತಾಲೂಕಿನಲ್ಲಿ ಬಡ ವರ್ಗದ ಜನ ಬಹುಸಂಖ್ಯೆಯಲ್ಲಿದ್ದಾರೆ. ಇವರ ಅನುಕೂಲಕ್ಕೆ ನಿರಂತರ ಕಾರ್ಯನಿರ್ವಹಿಸುವ ಕ್ಯಾಂಟೀನ್ ಅಗತ್ಯ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

    ಪ್ರಸ್ತುತ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ನಾನೂ ಸಚಿವನಾಗಿದ್ದೇನೆ. ಮೊಳಕಾಲ್ಮೂರು ನನ್ನ ಸ್ವಕ್ಷೇತ್ರವಾಗಿದ್ದು ಇದರ ಪ್ರಗತಿ ಮೊದಲ ಆದ್ಯತೆಯಾಗಿದೆ. ಕಾಲಮಿತಿಯಲ್ಲಿ ಶಾಶ್ವತ ಕಲ್ಯಾಣ ಕಾರ್ಯಗಳನ್ನು ಪೂರ್ಣಗೊಳಿಸುವ ಮೂಲಕ ತಾಲೂಕಿನ ಚಿತ್ರಣ ಬದಲಿಸಲಾಗುವುದು. ಬಳ್ಳಾರಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಸಾಮೂಹಿಕ ಕಲ್ಯಾಣೋತ್ಸವ ಮತ್ತು ಅನ್ನದಾಸೋಹದಂತಹ ಕಾರ್ಯ ಕೈಗೊಂಡಿದ್ದು, ಇದನ್ನು ಮೊಳಕಾಲ್ಮೂರು ಕ್ಷೇತ್ರದ ಜನರಿಗೂ ವಿಸ್ತರಿಸಲು ದಾಸೋಹ ಮಂದಿರ ತೆರೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಜನ ಕಲ್ಯಾಣ ಕಾರ್ಯಕ್ಕೆ ಕ್ರಮ: ತಾಲೂಕನ್ನು ನೀರಾವರಿ ಯೋಜನೆಗೆ ಒಳಪಡಿಸಿ ಕೃಷಿ ಮತ್ತು ತೋಟಗಾರಿಕೆ, ರೇಷ್ಮೆ ಉದ್ಯಮಕ್ಕೆ ಉತ್ತೇಜನ, ಜವಳಿ ಪಾರ್ಕ್ ನಿರ್ಮಾಣ, ಸಾರಿಗೆ ಸೌಲಭ್ಯ, ವಸತಿಯುತ ಉನ್ನತ ಶಿಕ್ಷಣ ಕೇಂದ್ರಗಳ ಆರಂಭ, ಆಯ್ದ ಗ್ರಾಮಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರ ತೆರೆಯುವುದು, ಪ್ರತಿ ಹಳ್ಳಿಯಲ್ಲೂ ಶುದ್ಧ ನೀರಿನ ಘಟಕ ಸ್ಥಾಪನೆ, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ಇತ್ಯಾದಿ ಜನಕಲ್ಯಾಣ ಕಾರ್ಯಗಳ ಕೈಪಿಡಿ ಸಚಿವರ ಕೈಯಲ್ಲಿದೆ. ಇವನ್ನು ಕಾಲಕ್ರಮೇಣ ಕಾರ್ಯರೂಪಕ್ಕೆ ತರಲು ಸಿದ್ಧತೆ ನಡೆಸಿದ್ದು, ಮೊದಲ ಹಂತದಲ್ಲಿ ಬಡವರ ಹಸಿವು ನೀಗಿಸಲು ಆದ್ಯತೆ ನೀಡಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಡಾ.ಮಂಜುನಾಥ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts