More

    ಸರ್ಕಾರಿ ಅಧಿಕಾರಿಗಳ ತಲೆ ತಗ್ಗಿಸಿದೆ ಪಿಎಸ್‌ಐ ಹಗರಣ

    ಮೊಳಕಾಲ್ಮೂರು: ಸರ್ಕಾರಿ ನೌಕರರು ಪ್ರಸ್ತುತ ಇಕ್ಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಎಲ್ಲರ ನಿದ್ದೆಗೆಡಿಸಿದೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಹಿರಿಯ ಅಧಿಕಾರಿಗಳೇ ಶಾಮೀಲಾಗಿ ನಮ್ಮ ತಲೆ ತಗ್ಗಿಸುವಂತೆ ಮಾಡಿದ್ದು, ರಾಜ್ಯವನ್ನೇ ತಲ್ಲಣಗೊಳಿಸಿದೆ ಎಂದು ಲೋಕಾಯುಕ್ತ ಡಿವೈಎಸ್‌ಪಿ ಮಂಜುನಾಥ ಕಳವಳ ವ್ಯಕ್ತಪಡಿಸಿದರು.

    ಇಲ್ಲಿನ ಪಪಂ ಸಭಾಂಗಣದಲ್ಲಿ ಲೋಕಾಯುಕ್ತ ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗು ಕುಂದು ಕೊರತೆ ಹಿನ್ನೆಲೆಯಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದರು.

    ಪ್ರಸ್ತುತದಲ್ಲಿ ಸರ್ಕಾರಿ ಅಧಿಕಾರಿಗಳು, ನೌಕರರು ರಾಜಕೀಯ ಕ್ಷೇತ್ರದ ಪ್ರಭಾವಕ್ಕೆ ಒಳಗಾಗಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೆಲಸ ಮಾಡುವಂತಾಗಿದೆ. ಪಿಎಸ್‌ಐ ಹಗರಣ ಪೊಲೀಸ್ ಅಧಿಕಾರಿಗಳ ನಡೆಯನ್ನು ಜನತೆ ಸಂಶಯದಿಂದ ನೋಡುವಂತೆ ಮಾಡಿದೆ ಎಂದರು.

    ಏಂಜಲು ಕಾಸಿಗೇಕೆ ಕೈಯೊಡ್ಡಬೇಕು: ಸರ್ಕಾರಿ ಸೇವಾ ನಿರತರಿಗೆ ಕೈ ತುಂಬಾ ಸಂಬಳ ಸಿಗುತ್ತದೆ. ಹಾಗಿದ್ದರೂ ಎಂಜಲು ಕಾಸಿಗೇಕೆ ಕೈಯೊಡ್ಡಬೇಕು? ಲಂಚ ಎನ್ನುವುದು ವಿಷದ ಜಾಲ ಇದ್ದಂತೆ. ಹಣ, ಆಸ್ತಿಯ ಬೆನ್ನತ್ತಿ ಹೋಗಿ ಜೀವನ ಪರ್ಯಂತ ಕಳಂಕ, ಅಪವಾದಕ್ಕೆ ಗುರಿಯಾಗಬೇಕಾಗುತ್ತದೆ. ಕೆಲಸ ಕಳೆದುಕೊಂಡು ಕುಟುಂಬವೇ ಬೀದಿಗೆ ಬೀಳುತ್ತದೆ. ಹಾಗಾಗಿ ಎಚ್ಚರ ವಹಿಸಿ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

    ಪ್ರಾಮಾಣಿಕ ಸೇವೆಗೆ ಬದ್ಧತೆ ತೋರಿ: ಕಾನೂನು ಚೌಕಟ್ಟಿನಲ್ಲಿ ಪ್ರಾಮಾಣಿಕ ಸೇವೆಗೆ ಬದ್ಧತೆ ಮೆರೆಯಬೇಕು. ದಕ್ಷ ಆಡಳಿತ ನಡೆಸಿದರೆ ವರ್ಗಾವಣೆ ಮಾಡಬಹುದಷ್ಟೇ. ಆದರೆ ನಾವು ಎಲ್ಲದಕ್ಕೂ ಸಿದ್ಧವಾಗಿರಬೇಕು. ತಪ್ಪು ಮಾಡದೆ ನೌಕರಿ ತೆಗೆಯುವ ಅಧಿಕಾರ ಯಾರಿಗೂ ಇಲ್ಲ. ಹಾಗಾಗಿ ಭ್ರಷ್ಟಾಚಾರಕ್ಕೆ ಕೈ ಜೋಡಿಸಿ ಐಶಾರಾಮಿ ಜೀವನಕ್ಕೆ ತಲೆಬಾಗಬಾರದು ಎಂದು ಆತ್ಮಸ್ಥೈರ್ಯ ತುಂಬಿದರು.

    ನೌಕರರು ಯಾರ ಮುಲಾಜಿಗೋ ಮಣಿದು ಕರ್ತವ್ಯಲೋಪ ಎಸಗಿದರೆ ವೃತ್ತಿ ಧರ್ಮಕ್ಕೆ ಕಳಂಕ ತಂದಂತೆ. ಮಾನ ಹರಾಜು ಹಾಕಿಸಿಕೊಳ್ಳುವ ಬದಲು ಎಚ್ಚೆತ್ತುಕೊಂಡು ನಮ್ಮ ನಡೆ-ನುಡಿ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಾದ ಡಾ.ರಂಗಪ್ಪ, ಡಿ.ಚಿದಾನಂದಪ್ಪ, ಮಾಲತಿ, ಚಂದ್ರಮ್ಮ, ಗಣೇಶ್, ಸವಿತಾ, ಪಾತಲಿಂಗಪ್ಪ, ಅಂಜಿನಪ್ಪ, ಪ್ರಾಣೇಶ್, ನಂದೀಶ್, ಪಿ.ಕಾಂತರಾಜ್, ಉಮೇಶ್, ಜಿ.ಎಂ.ತಿಪ್ಪೇಸ್ವಾಮಿ, ಎಸ್.ಜಿ.ಸತೀಶ್, ಮಾರುತಿ ಇತರರಿದ್ದರು.

    ಜನ ಸೇವೆಯಲ್ಲಿ ಇಲಾಖೆ ಮಾನದಂಡ ಮೀರಬಾರದು. ಉದ್ಧಟತನ ತೋರಬಾರದು, ಸಾರ್ವಜನಿಕರನ್ನು ವಿನಾಕಾರಣ ಅಲೆದಾಡಿಸಿದರೆ ತಾಳ್ಮೆ ಕಳೆದುಕೊಂಡು ಜನ ಛೀಮಾರಿ ಹಾಕುತ್ತಾರೆ. ಇಂಥದ್ದಕ್ಕೆ ಆಸ್ಪದ ಕೊಡಬಾರದು. ಜನರ ಸಮಸ್ಯೆಗಳನ್ನ ಆಲಿಸಿ ತ್ವರಿತವಾಗಿ ಪರಿಹರಿಸಲು ಸಮನ್ವಯ ಬೆಳೆಸಿಕೊಳ್ಳಬೇಕು.
    ಟಿ.ಸುರೇಶಕುಮಾರ್, ತಹಸೀಲ್ದಾರ್
    ರಾಜ್ಯದಲ್ಲಿ ನೌಕರರು ಯಾವುದೇ ಆಸೆ ಆಮಿಷಕ್ಕೆ ಬಲಿಯಾಗದೆ ಪಾರದರ್ಶಕವಾಗಿ ದುಡಿಯುತ್ತಿದ್ದಾರೆ. ದೇಶದಲ್ಲೇ ಅತ್ಯುತ್ತಮ ಸೇವಾ ನಿರತರೆಂಬ ಪ್ರಶಂಸೆಗೆ ಪಾತ್ರರಾಗಿದ್ದೇವೆ. ಅದನ್ನ ಉಳಿಸಿಕೊಳ್ಳುವುದು ನಮ್ಮೆಲ್ಲರ ಧರ್ಮ. ರಾಜಕೀಯದ ಪ್ರಭಾವಕ್ಕೆ ಮಣಿಯದೆ ಪಾರದರ್ಶಕ ಆಡಳಿತವೇ ನಮ್ಮ ಹೆಗ್ಗುರುತಾಗಬೇಕು.
    ಜಾನಕಿರಾಮ್, ತಾಪಂ ಇಒ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts