More

    ವಿವಿ ಸಾಗರ ನೀರಿನಲ್ಲಿ ಮೊಳಕಾಲ್ಮೂರು ಪಾಲೆಷ್ಟು

    ಕೆ.ಕೆಂಚಪ್ಪ ಮೊಳಕಾಲ್ಮೂರು: ವಿವಿ ಸಾಗರ ಜಲಾಶಯದಿಂದ ವೇದಾವತಿ ನದಿ ಮೂಲಕ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ನೀರು ಹರಿಸುವುದು ಸಮಯೋಚಿತ. ಆದರೆ, ತಾಲೂಕಿಗೆ ಎಷ್ಟು ಪ್ರಮಾಣದ ನೀರು ಹರಿಯಲಿದೆ ಎಂದು ಸ್ಪಷ್ಟಪಡಿಸುವಂತೆ ಸ್ಥಳೀಯ ರೈತರು ಆಗ್ರಹಿಸಿದ್ದಾರೆ.

    ಮೂಲಗಳ ಪ್ರಕಾರ ಸದ್ಯ ವಿವಿ ಸಾಗರದಿಂದ ಹರಿಸುತ್ತಿರುವ 0.2 ಟಿಎಂಸಿ ಅಡಿ ನೀರು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕೆಲ ಹಳ್ಳಿಗಳಿಗೆ ಸಿಗಲಿದೆ. ಇದರಲ್ಲಿ ಚಳ್ಳಕೆರೆ ತಾಲೂಕಿನ ಹಳ್ಳಿಗಳು ಸೇರಿವೆ.

    ಇಡೀ ತಾಲೂಕಿಗೆ ನೀರು ಹರಿಸುವ ಅಗತ್ಯವಿದೆ. ಈ ಕುರಿತು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಮೊಳಕಾಲ್ಮೂರಿಗೆ ಸಿಹಿ ಸುದ್ದಿ ಕೊಡುವಂತೆ ರೈತಮುಖಂಡರು ಮನವಿ ಮಾಡಿದ್ದಾರೆ.

    ವಿವಿ ಸಾಗರದ ನೀರನ್ನು ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ,ಮೊಳಕಾಲ್ಮೂರು, ಕುದಾಪುರದ ಡಿಆರ್‌ಡಿಒಗೆ ಕುಡಿಯಲು ಮೀಸಲಿಡಲಾಗಿದೆ. ಅದರಂತೆ ಮೊಳಕಾಲ್ಮೂರು ತಾಲೂಕಿಗೆ ಹರಿಸುತ್ತಿರುವ ನೀರಿನ ಪಾಲು ತೀರಾ ಕಡಿಮೆ ಇದೆ. ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿರುವ ತಾಲೂಕಿಗೆ ಪೂರ್ಣ ಪ್ರಮಾಣದ ಲಾಭ ಸಿಗುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

    ಭದ್ರಾ ಪಾಲು ಮೊಳಕಾಲ್ಮೂರಿಗೆ ಕಡಿಮೆ: ಜಿಲ್ಲೆಯ ಜನರ ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆ ಇನ್ನೇನು ಕಾರ್ಯರೂಪಕ್ಕೆ ಬಂದೇ ಬಿಡುತ್ತೆ ಎಂಬ ಲೆಕ್ಕಾಚಾರದ ಹುಮ್ಮಸ್ಸು ಮುಗಿಲು ಮುಟ್ಟಿದೆ. ಯೋಜನೆಯಡಿ ತಾಲೂಕಿಗೆ ಹಂಚಿಕೆ ಮಾಡಲಾಗಿರುವ ನೀರಿನ ಪಾಲು ಯಾವುದಕ್ಕೂ ಸಾಕಾಗುವುದಿಲ್ಲ. 0.9 ಟಿಎಂಸಿ ಅಡಿಯಲ್ಲಿ 20 ಕೆರೆಗಳು ತುಂಬಲು ಸಾಧ್ಯವಿಲ್ಲ. ಕನಿಷ್ಠ 2 ಟಿಎಂಸಿ ಅಡಿ ಮೀಸಲಿಡಬೇಕೆಂಬುದು ಜನರ ಒತ್ತಾಸೆ.

    ಪಶ್ಚಿಮಘಟ್ಟ ಪ್ರದೇಶದ ಸಣ್ಣ, ಪುಟ್ಟ ಹಳ್ಳಗಳ ಸಂಗಮದಿಂದ ಹರಿಯುವ ಸೀತಾ ನದಿಯಿಂದ ವರ್ಷಕ್ಕೆ 200 ಟಿಎಂಸಿ ಅಡಿ ನೀರು ಸಮುದ್ರ ಸೇರುತ್ತಿದೆ. ಚಿಕ್ಕಮಗಳೂರು ಬಳಿಯಿರುವ ವೇದಾವತಿ ನದಿಗೆ ಜೋಡಣೆ ಮಾಡಿ, 30 ಟಿಎಂಸಿ ಅಡಿ ಸಾಮರ್ಥ್ಯವಿರುವ ವಿವಿ ಸಾಗರಕ್ಕೆ ಹರಿಸಿದರೆ ಇಡೀ ಜಿಲ್ಲೆಯನ್ನೇ ಶಾಶ್ವತವಾಗಿ ನೀರಾವರಿ ಯೋಜನೆಗೆ ಒಳಪಡಿಸಲು ಸಾಧ್ಯ
    ಹಿರೇಹಳ್ಳಿ ದೊಡ್ಡಯ್ಯ, ನಿವೃತ್ತ ಇಂಜಿನಿಯರ್

    ಪಕ್ಕುರ್ತಿ ಕೆರೆ ಹೊರಗೆ: ಭದ್ರಾ ಮೇಲ್ದಂಡೆಯಡಿ ತಾಲೂಕಿನ 20 ಕೆರೆಗಳಿಗೆ ನೀರು ಹರಿಸಲು ಹಣ ಮೀಸಲಿಡಲಾಗಿದೆ. ಈ ನಡುವೆ ರಾಂಪುರ ಭಾಗದ 40ಕ್ಕೂ ಹೆಚ್ಚು ಹಳ್ಳಿಗಳ ಜೀವನಾಡಿ ಪಕ್ಕುರ್ತಿ ಕೆರೆ ಕೈಬಿಡಲಾಗಿದೆ ಎಂದು ರೈತರು ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts