More

    ರೈಲ್ವೆ ಕೆಳಸೇತುವೆ ವಿಳಂಬ ಸವಾರರಿಗೆ ನಿತ್ಯ ಕಿರಿಕಿರಿ

    ಕೆ.ಕೆಂಚಪ್ಪ ಮೊಳಕಾಲ್ಮೂರು: ಮೊಳಕಾಲ್ಮೂರಿನ ಕೋನಸಾಗರ ರಸ್ತೆಯಲ್ಲಿ ಬರುವ ರೈಲ್ವೆ ಕೆಳ ಸೇತುವೆ ಕಾಮಗಾರಿ ವಿಳಂಬದಿಂದ ಸವಾರರು ಸುತ್ತುವರಿದು ಸಂಚರಿಸಬೇಕಾದ ಕಾರಣ ಹೈರಾಣಾಗುತ್ತಿದ್ದಾರೆ.

    ಪಟ್ಟಣದ ಎನ್.ಸಿ.ಬಡಾವಣೆ ಸಮೀಪದ ರೈಲ್ವೆ ಹಳಿ ಕೆಳಸೇತುವೆ ನಿರ್ಮಿಸಲು 1.30 ಕೋಟಿ ರೂ. ಟೆಂಡರ್ ನೀಡಲಾಗಿತ್ತು. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಟೆಂಡರ್ ಪಡೆದಿದ್ದ ಗುತ್ತಿಗೆದಾರ ಆರೇಳು ತಿಂಗಳಾದರೂ ಸಂಚಾರಕ್ಕೆ ಮುಕ್ತಗೊಳಿಸಿಲ್ಲ.

    ಕೋನಸಾಗರ, ಬಿ.ಜಿ.ಕೆರೆ ಮುಂತಾದ ಕಡೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಪ್ರತಿನಿತ್ಯವು ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಆದರೀಗ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ವಾಹನ ಸವಾರರು ಐದಾರು ಕಿಮೀ ಸುತ್ತುಬಳಸಿ ಕಿರಿದಾದ ಹಳಿ ದಾಟಿ ಸಾಗಬೇಕಾಗಿದೆ.

    ರೈಲ್ವೆ ಹಳಿ ಪಕ್ಕದಲ್ಲೇ ಸಾರ್ವಜನಿಕ ಸಂಚಾರಕ್ಕಾಗಿ ನಿರ್ಮಿಸಿರುವ ತಾತ್ಕಾಲಿಕ ರಸ್ತೆ ಕಿರಿದಾಗಿದ್ದು, ರಾತ್ರಿ ವೇಳೆ ಸಂಚರಿಸುವುದು ಅಪಾಯಕಾರಿಯಾಗಿದೆ. ಶಾಲಾ ವಾಹನಗಳು, ಹಳ್ಳಿಗಳ ಜನರು ಸಂಚಾರ ಮಾಡುತ್ತಿರುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ತಪ್ಪಿದ್ದಲ್ಲ.

    ಈ ಕಾಮಗಾರಿ ವೀಕ್ಷಿಸಿದ ತಹಸೀಲ್ದಾರ್, ರೈಲ್ವೆ ಇಂಜಿನಿಯರ್ ಶೀಘ್ರ ಕಾಮಗಾರಿ ಮುಗಿಸುವಂತೆ ತಾಕೀತು ಮಾಡಿದರೂ ಪ್ರಯೋಜನವಾಗಿಲ್ಲ. ಕಾಮಗಾರಿ ಕೈಗೊಂಡಾಗ ಅಡ್ಡಬಂದ ಕಲ್ಲುಬಂಡೆಯನ್ನು ನಿಯಮ ಮೀರಿ ಸಿಡಿಸಲಾಗಿದೆ.

    ಇದರಿಂದ ಮನೆಗಳಿಗೆ ಧಕ್ಕೆ ಉಂಟಾಗಿದ್ದು, ನಿವಾಸಿಗಳು ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಂಬಂಧಿತ ಇಲಾಖೆಯ ಮೇಲಧಿಕಾರಿಗಳು, ಜಿಲ್ಲಾಡಳಿತ ಶೀಘ್ರವೇ ಪೂರ್ಣಗೊಳಿಸಿ ಸಂಚಾರ ಮುಕ್ತಗೊಳಿಸಬೇಕೆಂಬುದು ಜನರ ಆಗ್ರಹವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts