More

    ಸೂಕ್ತ ಪರಿಹಾರ ಕೊಟ್ರೆ ಮಾತ್ರ ತೆರವು

    ಮೊಳಕಾಲ್ಮೂರು: ವಿಸ್ತರಣೆಗೊಳ್ಳುವ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳ ಮನೆ ಸೇರಿ ಇತರೆ ಆಸ್ತಿಯ ಮೌಲ್ಯಮಾಪನ ನಡೆಸಿ ನ್ಯಾಯಯುತ ಪರಿಹಾರ ಕೊಡಿಸುವ ತನಕ ತೆರವಿಗೆ ಅವಕಾಶ ನೀಡುವುದಿಲ್ಲ ಎಂದು ಕೊಮ್ಮನಪಟ್ಟಿ ಗ್ರಾಮಸ್ಥರು ಆಗ್ರಹಿಸಿದರು.

    ಗ್ರಾಮದ ಮಧ್ಯೆ ಅಂಡರ್‌ಪಾಸ್ ನಿರ್ಮಿಸುವಂತೆ ದೂರು ನೀಡಿದ್ದರಿಂದ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಗ್ರಾಮಸ್ಥರು ಕೆಲ ಆಕ್ಷೇಪ ವ್ಯಕ್ತಪಡಿಸಿದರು.

    ಚತುಷ್ಪದ ರಸ್ತೆ ವಿಸ್ತರಣೆಯ ವ್ಯಾಪ್ತಿಗೆ ಒಳಪಡುವ ಗ್ರಾಮದ ಮನೆ, ದೇವಸ್ಥಾನಗಳ ಸುತ್ತಳತೆ ಮತ್ತು ಕಟ್ಟಡಗಳ ಬಾಬ್ತು ಮೌಲ್ಯಮಾಪನದಂತೆ ಪರಿಹಾರ ಹಣ ಕೊಟ್ಟಿಲ್ಲ ಎಂದು ಉಪ ವಿಭಾಗಾಧಿಕಾರಿ ಅವರಲ್ಲಿ ಅಳಲು ತೋಡಿಕೊಂಡರು.

    ಎಸಿ ಪ್ರಸನ್ನಕುಮಾರ್ ಮಾತನಾಡಿ, ರಸ್ತೆ ಪ್ರಾಧಿಕಾರದ ನಿಯಮದಂತೆ ನಾಲ್ಕು ಪಟ್ಟು ಪರಿಹಾರ ಅರ್ಹರಿಗೆ ಸಿಗುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಆಸ್ತಿ ದಾಖಲೆ ಒದಗಿಸಬೇಕು. ಇಲ್ಲದಿದ್ದರೆ ವಿಳಂಬವಾಗಲಿದೆ ಎಂದು ಮನವರಿಕೆ ಮಾಡಿದರು.

    ಇದಕ್ಕೆ ಗ್ರಾಮಸ್ಥರು, ಇಲ್ಲಿನ ಕೊಲ್ಲಾರಮ್ಮ ದೇವಿ, ಮಂಜುನಾಥ ಸ್ವಾಮಿ ದೇಗುಲಗಳ ತೆರವು ಮಾಡಲೆಂದು ಅಧಿಕಾರಿಗಳು ಏಕಾಏಕಿ 2 ಡಿಆರ್ ವ್ಯಾನ್, 50 ಪೊಲೀಸರನ್ನು ಕರೆಸುವ ಅಗತ್ಯ ಏನಿತ್ತು ಎಂದು ತರಾಟೆಗೆ ತೆಗೆದುಕೊಂಡರು.

    ದೇವಸ್ಥಾನಗಳ ಕಟ್ಟಡದ ಬಾಬ್ತು ಹಣ ಕೊಟ್ಟಿದ್ದಾರೆ. ಆದರೆ, ಜಾಗದ ಹಣ ಬಂದಿಲ್ಲ. ಕೆಲವು ಮನೆಗಳದ್ದು ಇದೇ ಸಮಸ್ಯೆ ಆಗಿದೆ. ಕೆಲವರಿಗೆ ಆಗಿರುವ ತಾರತಮ್ಯ ಸರಿಪಡಿಸಿ ನ್ಯಾಯಯುತವಾಗಿ ಪರಿಹಾರದ ಪೂರ್ತಿ ಹಣವನ್ನು ಕೊಡಬೇಕು ಎಂದು ಪಟ್ಟುಹಿಡಿದರು.

    ಇದಕ್ಕೆ ಪ್ರತಿಕ್ತಿಯಿಸಿದ ಗ್ರಾಮಸ್ಥರು, ಮನೆ, ದೇವಸ್ಥಾನಗಳ ತೆರವಿಗೆ ಕಾಲಾವಕಾಶ ಕೊಡಬೇಕು. ಜನ, ಶಾಲಾ ಮಕ್ಕಳು ರಸ್ತೆ ದಾಟಲು ಅಂಡರ್ ಪಾಸ್ ನಿರ್ಮಿಸದಿದ್ದರೆ ರಸ್ತೆ ತಡೆ ಚಳವಳಿ ನಡೆಸಲಾಗುವುದು ಎಂದು ಗ್ರಾಮಸ್ಥರಾದ ತಿಪ್ಪೇಸ್ವಾಮಿ, ಶಂಕ್ರಣ್ಣ, ಓಬಣ್ಣ, ನಾಗರಾಜ್, ಸಿದ್ದಣ್ಣ, ಪರಮೇಶಿ, ಶ್ರೀನಿವಾಸ, ಸಿದ್ದಪ್ಪ, ಗಂಗಮ್ಮ, ಅಕ್ಕಮ್ಮ, ಮಂಜುಳಮ್ಮ, ತಿಪ್ಪಕ್ಕ, ಬೊಮ್ಮಕ್ಕ ಎಚ್ಚರಿಕೆ ನೀಡಿದರು.

    ತಹಸೀಲ್ದಾರ್ ಎಂ.ಬಸವರಾಜ್, ಭೂಸ್ವಾಧೀನ ಅಧಿಕಾರಿ ಗೀತಾ, ಸಿಪಿಐ ಗೋಪಾಲನಾಯಕ, ಪಿಎಸ್‌ಐಗಳಾದ ಆರ್.ಬಸವರಾಜ್, ಗುಡ್ಡಪ್ಪ, ರಸ್ತೆ ವಿಸ್ತರಣೆ ಪ್ರಾಜೆಕ್ಟ್ ಅಧಿಕಾರಿ ನಾಯ್ಡು, ಹಾನಗಲ್ ಗ್ರಾಪಂ ಅಧ್ಯಕ್ಷ ಶಿವಣ್ಣ, ಕಂದಾಯ ಅಧಿಕಾರಿ ಉಮೇಶ್, ವಾಲೇಕರ್ ಇತರರಿದ್ದರು.

    ದೇವಸ್ಥಾನಗಳ ಜಾಗವು ಖಾಸಗಿಯಾಗಿದ್ದು, ಮಾಲೀಕರ ಒಪ್ಪಿಗೆ ಪತ್ರ ಪಡೆದು ಅದರ ಆಧಾರದ ಮೇಲೆ ಸ್ಥಳೀಯ ಗ್ರಾಪಂ ಸಭಾ ನಡಾವಳಿ ತೀರ್ಮಾನದ ಶಿಫಾರಸು ಕಳಿಸಿದರೆ, ದೇವಸ್ಥಾನ ಸಮಿತಿ ಹೆಸರಿಗೆ ಹಣ ಬಿಡುಗಡೆ ಮಾಡಿಸಲಾಗುವುದು. ಊರಿನ ಪಕ್ಕದಲ್ಲೇ ಸೂಕ್ತ ಜಾಗ ಖರೀದಿಸಿ ದೇವಸ್ಥಾನ ಕಟ್ಟಿಕೊಳ್ಳಬಹುದು. ಮನೆಗಳ ಮಾಲೀಕರಿಗೆ ಬರುವ ಪರಿಹಾರ ಹಣದಲ್ಲಿ ಅನ್ಯಾಯವಾಗಿದ್ದರೆ ಸರಿಪಡಿಸಲಾಗುವುದು.
    ಪ್ರಸನ್ನಕುಮಾರ್
    ಉಪವಿಭಾಗಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts