More

    ಮನೆಯಂಗಳದಲ್ಲಿ ಬಹುವಿಧ ಕೃಷಿ

    ಸಂದೀಪ್ ಸಾಲ್ಯಾನ್ ಬಂಟ್ವಾಳ
    ಮನೆ ಸುತ್ತಲೂ ಮಲ್ಲಿಗೆ ಗಿಡ, ಅಂಗಳದಲ್ಲಿ ತೊಂಡೆ ಗಿಡದ ಚಪ್ಪರ, ಚಪ್ಪರದಡಿ ನಾಟಿ ಕೋಳಿ ಸಾಕಣೆ, ಎಡ ಪಾರ್ಶ್ವದಲ್ಲಿ ಅಡಕೆ ತೋಟ, ಸ್ವಲ್ಪ ತರಕಾರಿ ಬೆಳೆ, ಮೀನು ಸಾಕಣೆಗೆ ಕೆರೆ. ಸರಪಾಡಿ ಗ್ರಾಮದ ಬೀಯಪಾದೆ ಪಕ್ಕಿಬೆಟ್ಟು ನಿವಾಸಿ ವಿಶ್ವನಾಥ ಬಿ.ಪೂಜಾರಿ ಕೈಗೊಂಡಿರುವ ಬಹುವಿಧದ ಕೃಷಿ ಕಾರ್ಯವಿದು.

    ಮುಂಬೈನಲ್ಲಿ ಹೋಟೆಲ್ ವೃತ್ತಿಯಲ್ಲಿದ್ದ ವಿಶ್ವನಾಥ ಪೂಜಾರಿ ಲಾಕ್‌ಡೌನ್‌ನಿಂದ ಐದು ತಿಂಗಳ ಹಿಂದೆ ಊರಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. 150ಕ್ಕಿಂತಲೂ ಅಧಿಕ ಹೂ ಬಿಡುವ ಮಲ್ಲಿಗೆ ಗಿಡಗಳು ಇವರ ತೋಟದಲ್ಲಿದ್ದು, ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿರುವ ಪತ್ನಿ ಸೌಮ್ಯಲತಾ ಇದರ ನಿರ್ವಹಣೆ ನೋಡಿಕೊಳ್ಳುತ್ತಾರೆ.

    ಮುಂಬೈಯಲ್ಲಿ ಇರುವಾಗಲೇ ಕಾರ್ಮಿಕರ ಮೂಲಕ ಊರಲ್ಲಿ ಸಿಮೆಂಟ್ ಆಧಾರ ಕಂಬ ಬಳಸಿ ಬಸಳೆ ಕೃಷಿ ಮಾಡಿಸುತ್ತಿದ್ದರು. ಊರಿಗೆ ಮರಳಿದ ಬಳಿಕ ತಾವೇ ತರಕಾರಿ ಬೆಳೆಯತೊಡಗಿದ್ದಾರೆ. ಮನೆ ಮುಂಭಾಗ ತೊಂಡೆಕಾಯಿ ಚಪ್ಪರ ನಿರ್ಮಿಸಿ, ಸುತ್ತಲೂ ಹಸಿರು ನೆಟ್ ಹಾಕಿ, ಒಳಗೆ ಕೋಳಿ ಸಾಕಣೆೆ ಮಾಡುತ್ತಿದ್ದಾರೆ. ಮನೆಯ ಬಲ ಭಾಗ ಅರ್ಧ ಎಕರೆ ಜಮೀನಿನಲ್ಲಿ ಅಡಕೆ ತೋಟ ಇದೆ. ಇದರ ಸುತ್ತ ಬಾಳೆ, ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ.

    ಸಿಹಿ ನೀರಿನ ಮೀನುಗಾರಿಕೆ: ವಿಶ್ವನಾಥರು ಮುಂಬೈನಲ್ಲಿದ್ದಾಗ ಒಂದು ಎಕರೆ ವಿಸ್ತೀರ್ಣದ ಜಮೀನಿನಲ್ಲಿ 4 ಕೆರೆಗಳನ್ನು ನಿರ್ಮಿಸಿ ಲೀಸ್‌ಗೆ ಕೊಟ್ಟಿದ್ದರು. ಈಗ ಊರಿಗೆ ಮರಳಿದ ಬಳಿಕ ಒಂದು ಕೆರೆಯಲ್ಲಿ ಮೀನುಗಾರಿಕೆ ಆರಂಭಿಸಿದ್ದಾರೆ. ಪ್ರಸ್ತುತ ಒಂದು ಹೊಂಡದಲ್ಲಿ ಕಾಟ್ಲ, ರೋಹು, ಸಾಮಾನ್ಯ ಗೆಂಡೆ ಮೀನಿನ ತಳಿ ಇದ್ದು, ಮತ್ತೆರಡು ಹೊಂಡಗಳ ಪೈಕಿ ಒಂದರಲ್ಲಿ ಕಾಟ್ಲ, ಜಯಂತಿ ರೋಹು ಹಾಗೂ ಸಾಮಾನ್ಯ ಗೆಂಡೆ, ಮತ್ತೊಂದರಲ್ಲಿ ಪಿಂಪಿಯೇಟರ್, ಕಾಟ್ಲ, ಸಾಮಾನ್ಯ ಗೆಂಡೆ ಸಾಕುವ ಯೋಜನೆ ಇದೆ.

     ಪತ್ನಿ ಮಲ್ಲಿಗೆ ಕೃಷಿ ನೋಡಿಕೊಳ್ಳುತ್ತಾಳೆ. ಒಂದು ಕೆರೆಯಲ್ಲಿ 10 ಸಾವಿರ ಮೀನಿನ ಮರಿಗಳನ್ನು ಹಾಕಲಾಗಿದೆ. ಸಿಮೆಂಟ್ ಕಂಬ ಬಳಸಿ ಬಸಳೆ ಹಾಗೂ ತೊಂಡೆ ಬೆಳೆಯುತ್ತಿದ್ದು, ಈ ತರಕಾರಿ ಮಾಡಲಿಚ್ಛಿಸುವ ಕೃಷಿಕರಿಗೆ ಸಿಮೆಂಟ್ ಕಂಬಗಳನ್ನು ಒದಗಿಸುವುದರ ಜತೆಗೆ ಪ್ರಾಥಮಿಕ ಸಿದ್ಧತೆ ಮಾಡಿಕೊಡುತ್ತೇನೆ.
    ವಿಶ್ವನಾಥ ಪೂಜಾರಿ ಕೃಷಿಕ (ಮೊಬೈಲ್ 9731789916)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts