More

    ಗರಿಗೆದರಿದ ಎಂಎಲ್ಸಿ ಎಲೆಕ್ಷನ್ ; ಕಾಂಗ್ರೆಸ್‌ನಲ್ಲಿ ಪರಿಷತ್ ಟಿಕೆಟ್ ಫೈಟ್ : ಜೆಡಿಎಸ್, ಬಿಜೆಪಿಯಲ್ಲಿ ಸಮರ್ಥ ಅಭ್ಯರ್ಥಿ ಹುಡುಕಾಟ

    ತುಮಕೂರು : ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆ ಕಾವು ಜಿಲ್ಲೆಯಲ್ಲಿ ದಿನೇದಿನೆ ಹೆಚ್ಚುತ್ತಿದೆ. ಮೂರು ಪಕ್ಷಗಳಲ್ಲೂ ಚಟುವಟಿಕೆ ಗರಿಗೆದರಿದೆ. ಕಾಂಗ್ರೆಸ್‌ನಲ್ಲಿ ಈಗಾಗಲೇ ಟಿಕೆಟ್‌ಗಾಗಿ ಪೈಪೋಟಿಯೇ ಏರ್ಪಟ್ಟಿದ್ದರೆ, ಆಡಳಿತಾರೂಢ ಬಿಜೆಪಿ ಸಮರ್ಥ ಅಭ್ಯರ್ಥಿಯನ್ನು ಹುಡುಕತೊಡಗಿದೆ. ಇನ್ನು, ಶತಾಯಗತಾಯ ಹಾಲಿ ಸ್ಥಾನ ಉಳಿಸಿಕೊಳ್ಳಲು ಜೆಡಿಎಸ್ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ.

    ಜೆಡಿಎಸ್‌ನ ಹಾಲಿ ಸದಸ್ಯ ಬೆಮೆಲ್ ಕಾಂತರಾಜು ಕಾಂಗ್ರೆಸ್‌ಗೆ ಜಾರಿರುವುದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾಬಲ್ಯ ಕಾಪಾಡಿಕೊಳ್ಳಲು ಜೆಡಿಎಸ್‌ಗೆ ಪರಿಷತ್ ಸ್ಥಾನ ಗೆಲ್ಲಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕಾಂಗ್ರೆಸ್‌ನ ಟಿಕೆಟ್ ಪೈಪೋಟಿಯಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಪುತ್ರ ಆರ್.ರಾಜೇಂದ್ರ ಮುಂಚೂಣಿಯಲ್ಲಿದ್ದಾರೆ. ಆದರೆ ಪಕ್ಷದೊಳಗಿನ ಮುಖಂಡರೇ ಅವರಿಗೆ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ. ಇತ್ತ ಬಿಜೆಪಿ ಬಹಿರಂಗವಾಗಿ ಚರ್ಚಿಸದೆ ಪಕ್ಷ ಹಾಗೂ ಪರಿವಾರದ ಮಟ್ಟದಲ್ಲಿ ಅಭ್ಯರ್ಥಿಯ ತಲಾಶ್ ನಡೆಸುತ್ತಿರುವುದು ರಹಸ್ಯವಾಗೇನೂ ಉಳಿದಿಲ್ಲ.

    ಕಾಂಗ್ರೆಸ್‌ನಲ್ಲಿ ಟಿಕೆಟ್ ಫೈಟ್ : ಕಳೆದ ಬಾರಿ ಸೋಲನುಭವಿಸಿದ್ದ ರಾಜೇಂದ್ರ ಈ ಬಾರಿ ಗೆದ್ದೇ ತೀರುವ ಹಠದಲ್ಲಿದ್ದಾರೆ. ಅದಕ್ಕೆ ಪೂರಕವಾಗಿ ಗ್ರಾಪಂ ಸದಸ್ಯರ ಜತೆ ಸಂಪರ್ಕ ಸಾಧಿಸಿ, ಹಿಂದುಳಿದ ವರ್ಗಗಳ ಒಕ್ಕೂಟದ ಸಮಾವೇಶ ಆಯೋಜಿಸಿ ಚುನಾವಣೆಗೆ ಭದ್ರ ಬುನಾದಿ ಹಾಕಿಕೊಂಡಿದ್ದಾರೆ. ಈ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ಸೃಷ್ಟಿಸುವ ಮೂಲಕ ರಾಜೇಂದ್ರ ಶಕ್ತಿ ಕುಗ್ಗಿಸುವ ಪ್ರಯತ್ನ ಪಕ್ಷದೊಳಗೇ ನಡೆಯುತ್ತಿದೆ.

    ಒಕ್ಕಲಿಗ ಸಮುದಾಯದ ಯಲಚವಾಡಿ ನಾಗರಾಜ್ ಈಗಾಗಲೇ ಕೆಲವು ತಾಲೂಕುಗಳನ್ನು ಸುತ್ತಿ ಪಕ್ಷದ ಟಿಕೆಟ್‌ಗಾಗಿ ಹೋರಾಟ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ. ದಲಿತ ಎಡಗೈ ಸಮುದಾಯಕ್ಕೆ ಪರಿಷತ್‌ನಲ್ಲಿ ಅವಕಾಶ ನೀಡಬೇಕೆಂದು ಕೇಳುವ ಮೂಲಕ ಜಿಪಂ ಮಾಜಿ ಸದಸ್ಯ ಎಚ್.ಕೆಂಚಮಾರಯ್ಯ ಬಹಿರಂಗವಾಗಿ ತೊಡೆತಟ್ಟಿದ್ದಾರೆ. ಅಲ್ಲದೆ, ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಮನವಿ ಸಲ್ಲಿಸಿರುವುದು ಚುನಾವಣೆ ಹೊತ್ತಿಗೆ ಜಿಲ್ಲಾ ‘ಕೈ’ ಪಾಳಯದಲ್ಲಿ ಮತ್ತೊಂದು ರಾಜಕೀಯ ಸಂಘರ್ಷ ಹುಟ್ಟುಹಾಕಲಿದೆ. ಈ ನಡುವೆ ಕೆ.ಎನ್.ರಾಜಣ್ಣ, ಎಸ್.ಪಿ.ಮುದ್ದಹನುಮೇಗೌಡ ಅಥವಾ ಟಿ.ಬಿ.ಜಯಚಂದ್ರ ಅವರಲ್ಲಿ ಒಬ್ಬರನ್ನು ಕಣಕ್ಕಿಳಿಸುವುದು ಸೂಕ್ತ ಎಂಬ ಕೂಗೂ ಎದ್ದಿದೆ. ಒಟ್ಟಾರೆ ಪರಿಷತ್ ಚುನಾವಣೆ ಕಾವು ದಿನೇದಿನೇ ಏರುತ್ತಿದ್ದು ಮತದಾನದ ಹಕ್ಕು ಹೊಂದಿರುವ ಸ್ಥಳೀಯ ಸಂಸ್ಥೆ ಸದಸ್ಯರಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ.

    ಸಿ.ಎಂ.ಇಬ್ರಾಹಿಂ, ಡಿ.ಸಿ.ವೇಣುಗೋಪಾಲ್ ? : ತುರುವೇಕೆರೆ ವಿಧಾನಸಭೆ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಹಾಲಿ ಸದಸ್ಯ ಬೆಮೆಲ್ ಕಾಂತರಾಜು ಕೈ ತಪ್ಪಿರುವುದರಿಂದ ಜೆಡಿಎಸ್ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ಆರಂಭಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಜತೆ ಮುನಿಸಿಕೊಂಡು ಜೆಡಿಎಸ್‌ನತ್ತ ವಾಲಿರುವ ಸಿ.ಎಂ.ಇಬ್ರಾಹಿಂ ಮತ್ತೆ ತೆನೆ ಹೊರಲು ಸಿದ್ಧರಾಗಿದ್ದು ಅವರನ್ನು ಕಣಕ್ಕಿಳಿಸುವ ಮೂಲಕ ಪರಿಷತ್ ಸ್ಥಾನ ಉಳಿಸಿಕೊಳ್ಳುವ ಲೆಕ್ಕಾಚಾರ ವರಿಷ್ಠರದ್ದಾಗಿದೆ. ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಸಹೋದರ ಡಿ.ಸಿ.ವೇಣುಗೋಪಾಲ್ ಹೆಸರು ಮುನ್ನೆಲೆಗೆ ಬಂದಿದೆ. ಗ್ರಾಮಾಂತರ, ಕೊರಟಗೆರೆ ಹಾಗೂ ಮಧುಗಿರಿ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಗೌರಿಶಂಕರ್‌ಗೆ ಸಹೋದರನನ್ನು ಗೆಲ್ಲಿಸಿಕೊಳ್ಳುವುದು ಕಷ್ಟಸಾಧ್ಯವೇನಲ್ಲ. ಜೆಡಿಎಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಗ್ರಾಪಂ ಸದಸ್ಯರ ಜಿಲ್ಲಾಮಟ್ಟದ ಒಕ್ಕೂಟ ರಚಿಸಿಕೊಂಡಿರುವ ದೊಡ್ಡೇರಿ ವಿಜಯಪ್ರಕಾಶ್ ಕೂಡ ಆಕಾಂಕ್ಷಿಗಳಾಗಿದ್ದಾರೆ.

    ಕೈ ಟಿಕೆಟ್‌ಗೆ ಅರ್ಜಿ ಸಲ್ಲಿಸಲು 1 ಲಕ್ಷ ರೂ.! : ಟಿಕೆಟ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಬಯಸುವವರು ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣ ನಿಧಿಗೆ 1 ಲಕ್ಷ ರೂ., ಪಾವತಿಸಬೇಕಿದೆ. ಇದರಿಂದಾಗಿ ನಾಮ್‌ಕೇ ವಾಸ್ತೆಗೆ ಅರ್ಜಿ ಹಾಕುವವರ ಸಂಖ್ಯೆಯೂ ಕಡಿಮೆ ಆಗಲಿದೆ.

    5344 ಗ್ರಾಪಂ ಸದಸ್ಯರು : ಜಿಲ್ಲೆಯಲ್ಲಿ ಪ್ರಸ್ತುತ 329 ಗ್ರಾಪಂನ ಒಟ್ಟು 5344 ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಗುಬ್ಬಿ ತಾಲೂಕು ಅಂಕಸಂದ್ರ ಗ್ರಾಪಂಗೆ ಚುನಾವಣೆ ನಡೆಯಬೇಕಿದೆ. 1 ಮಹಾನಗರ ಪಾಲಿಕೆ, 2 ನಗರಸಭೆ (ಶಿರಾ ನಗರಸಭೆಗೆ ಇನ್ನೂ ಚುನಾವಣೆ ನಡೆದಿಲ್ಲ), 4 ಪುರಸಭೆ, 4 ಪಪಂ ಸದಸ್ಯರೂ ಸಹ ಪರಿಷತ್ ಚುನಾವಣೆಗೆ ಹಕ್ಕು ಚಲಾಯಿಸಲಿದ್ದಾರೆ. ತಾಪಂ, ಜಿಪಂ ಚುನಾವಣೆ ಸದ್ಯಕ್ಕೆ ನಡೆಯುವ ಸಾಧ್ಯತೆಗಳು ಕಡಿಮೆ.

    ಹುಲಿನಾಯ್ಕರ್, ಸೊಗಡು : ಒಮ್ಮೆ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಡಾ.ಎಂ.ಆರ್.ಹುಲಿನಾಯ್ಕರ್ ಕಳೆದ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ಕೊನೇ ಕ್ಷಣದಲ್ಲಿ ಬಿಜೆಪಿ ಸೇರಿ ಪ್ರಬಲ ಪೈಪೋಟಿ ಕೊಟ್ಟಿದ್ದರು. ಈ ಬಾರಿ ಪಕ್ಷ ಆಡಳಿತದಲ್ಲಿದ್ದು ಐವರು ಶಾಸಕರು, ಇಬ್ಬರು ಸಂಸದರು, ಇಬ್ಬರು ಪರಿಷತ್ ಸದಸ್ಯರನ್ನು ಹೊಂದಿರುವ ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆ ಕೂಡ. ಹಾಗಾಗಿ, ಮತ್ತೊಮ್ಮೆ ಕುರುಬ ಸಮುದಾಯದ ಹುಲಿನಾಯ್ಕರ್‌ಗೆ ಪಕ್ಷ ಮಣೆ ಹಾಕಲಿದೆ ಎನ್ನಲಾಗಿದೆ. ಈ ನಡುವೆ ಮಾಜಿ ಸಚಿವ ಸೊಗಡುಶಿವಣ್ಣ ಹೆಸರನ್ನು ತೇಲಿಬಿಡಲಾಗಿದೆ. ಜಿಲ್ಲೆಯ ಮೂಲೆಮೂಲೆಯನ್ನು ಬಲ್ಲ ಸೊಗಡು ಶಿವಣ್ಣರನ್ನು ಕಣಕ್ಕಿಳಿಸುವ ಲೆಕ್ಕಾಚಾರ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರದ್ದಾಗಿದೆ. ಹಿರಿಯೂರು ಬಿಜೆಪಿ ಶಾಸಕಿ ಕೆ.ಪೂರ್ಣಿಮಾ ಪತಿ ಡಿ.ಟಿ.ಶ್ರೀನಿವಾಸ್ ಸಹ ಟಿಕೆಟ್ ಕೇಳಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts