More

    ಮಾಜಿ ಶಾಸಕರಿಗೆ ಸ್ವಗ್ರಾಮಗಳಲ್ಲಿ ಬೀಳಲಿಲ್ಲ ಕನಿಷ್ಠ 50 ಮತ​! ಫಲಿತಾಂಶದ ಮೇಲಿನ ಅನುಮಾನ ಶುರು

    ಭೋಪಾಲ್​: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದೆ. ಆದರೆ, ಚುನಾವಣಾ ಫಲಿತಾಂಶದ ಮೇಲೆ ಮಾಮೂಲಿಯಂತೆಯೇ ಅನುಮಾನ ವ್ಯಕ್ತವಾಗಿದೆ. ತಮ್ಮ ಸ್ವಂತ ಗ್ರಾಮಗಳಲ್ಲಿ ಕೇವಲ 50 ಮತಗಳನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಕೆಲ ಮಾಜಿ ಶಾಸಕರು ದೂರು ನೀಡಿದ್ದು, ಚುನಾವಣಾ ಅಕ್ರಮ ನಡೆದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್​ ಸಂಸದ ದಿಗ್ವಿಜಯ ಸಿಂಗ್​ ಮಧ್ಯಪ್ರದೇಶದ ಪ್ರಮುಖ ನಾಯಕರುಗಳಲ್ಲಿ ಒಬ್ಬರು. ಎಲೆಕ್ಟ್ರಾನಿಕ್​ ವೋಟಿಂಗ್​ ಮೆಶಿನ್​ (ಇವಿಎಂ)ನ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಚಿಪ್​ ಇರುವ ಯಂತ್ರವನ್ನು ಸುಲಭವಾಗಿ ಹ್ಯಾಕ್​ ಮಾಡಬಹುದು ಎಂದಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಢ ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ ಎರಡೇ ದಿನಕ್ಕೆ ದಿಗ್ವಿಜಯ ಸಿಂಗ್​ ಇಂಥದ್ದೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ.

    ಮಧ್ಯಪ್ರದೇಶವು ಒಟ್ಟು 230 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, ಬಿಜೆಪಿ 163 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಕೇವಲ 66 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಕಾಂಗ್ರೆಸ್‌ ನೇತೃತ್ವ ವಹಿಸಿದ್ದ ಕಮಲನಾಥ್, ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ಹಿಂದಿರುವ ಕಾರಣಗಳನ್ನು ವಿಶ್ಲೇಷಿಸಲು ಸೋತ ಮತ್ತು ಗೆಲುವು ಸಾಧಿಸಿದ ಅಭ್ಯರ್ಥಿಗಳ ಜತೆಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

    ಇವಿಎಂ ಹ್ಯಾಕಿಂಗ್ ಕುರಿತು ಕೆಲವು ಕಾಂಗ್ರೆಸ್​ ನಾಯಕರು ಮಾಡಿರುವ ಆರೋಪದ ಬಗ್ಗೆ ಪ್ರಶ್ನಿಸಿದಾಗ, ಚರ್ಚೆಯನ್ನು ನಡೆಸದೆ ಈಗಲೇ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಮೊದಲು ನಾನು ಎಲ್ಲರೊಂದಿಗೆ ಮಾತನಾಡುತ್ತೇನೆ ಎಂದರು. ಆದರೆ, ಚುನಾವಣೆ ಫಲಿತಾಂಶ ಬಗ್ಗೆ ಇದೇ ಸಂದರ್ಭದಲ್ಲಿ ಅಚ್ಚರಿ ವ್ಯಕ್ತಪಡಿಸಿದರು. ಸಾರ್ವಜನಿಕರ ಮನಸ್ಥಿತಿ ಕಾಂಗ್ರೆಸ್​ ಪರವಾಗಿತ್ತು. ನಿಮಗೂ ಇದು ಗೊತ್ತಿದೆ. ನೀವೇಕೆ ನನ್ನನ್ನು ಕೇಳುತ್ತಿದ್ದೀರಿ? ಜನರನ್ನು ಕೇಳಿ ಎಂದು ಮಾಧ್ಯಮದವರಿಗೆ ಹೇಳಿದರು.

    ತಮ್ಮ ತಮ್ಮ ಸ್ವಂತ ಗ್ರಾಮಗಳಲ್ಲೇ ಕೇವಲ 50 ಮತಗಳನ್ನು ಸಹ ಪಡೆಯಲಾಗಲಿಲ್ಲ ಎಂದು ಕೆಲ ಶಾಸಕರುಗಳು ಹೇಳುತ್ತಿದ್ದಾರೆ. ಇದು ಹೇಗೆ ಸಾಧ್ಯವೆಂದು ಪ್ರಶ್ನೆ ಮಾಡಿದರು. ಒಂದು ವಾತಾವರಣವನ್ನು ನಿರ್ಮಿಸಲು ಮತಗಟ್ಟೆ ಸಮೀಕ್ಷೆಗಳನ್ನು ನಡೆಸಲಾಗುತ್ತದೆ. ಯಾರಾದರೂ ಫಲಿತಾಂಶವನ್ನು ಮೊದಲೇ ತಿಳಿದಿದ್ದರೆ, ಅವರು ಎಕ್ಸಿಟ್ ಪೋಲ್‌ಗಳನ್ನು ಮಾಡಬಹುದು ಎನ್ನುವ ಮೂಲಕ ಚುನಾವಣಾ ಫಲಿತಾಂಶದ ಮೇಲೆ ಅನುಮಾನ ವ್ಯಕ್ತಪಡಿಸಿದ ಕಮಲನಾಥ್​, ಹೆಚ್ಚಿಗೆ ಮಾತನಾಡಲು ನಿರಾಕರಿಸಿದರು.

    ಇದಕ್ಕೂ ಮುನ್ನ ಕಮಲನಾಥ್ ಅವರು ಜನರು ನೀಡಿದ ತೀರ್ಪನ್ನು ಸ್ವೀಕರಿಸುತ್ತೇನೆ ಮತ್ತು ಕಾಂಗ್ರೆಸ್ ಪ್ರತಿಪಕ್ಷವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತದೆ ಎಂದಿದ್ದರು. (ಏಜೆನ್ಸೀಸ್​)

    ಸಾರಾ ತೆಂಡೂಲ್ಕರ್ ಅಲ್ಲ, ಈ ನಟಿಯೊಂದಿಗೆ ಲಂಡನ್‌ನಲ್ಲಿ ಸುತ್ತಾಡಿದ ಶುಭಮನ್ ಗಿಲ್, ಏನ್ ವಿಷ್ಯಾ?

    ಹೃದಯಾಘಾತದಿಂದ ಖಲಿಸ್ತಾನ್​ ಉಗ್ರ ಲಖ್ಬೀರ್ ಸಿಂಗ್ ರೋಡ್ ಮೃತ – ಪಾಕ್​ನಲ್ಲಿ ನೆಲೆಸಿದ್ದ ಭಯೋತ್ಪಾದಕ

    ಇಂದು ತೆಲಂಗಾಣದ ನೂತನ ಮುಖ್ಯಮಂತ್ರಿ ಆಯ್ಕೆ ಅಂತಿಮ; ಸಿಎಂ ರೇಸ್‍ನಲ್ಲಿ ಮುಂದಿದ್ದಾರೆ ಈ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts