More

    ಚುನಾವಣೆಗಾಗಿ ಸಚಿವರಿಂದ ಅನಗತ್ಯ ಖರ್ಚು: ಶ್ರೀರಂಗಪಟ್ಟಣ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ

    ಮಂಡ್ಯ: ಕುಂಭಮೇಳ ಆಯೋಜನೆ ಉತ್ತರ ಭಾರತದ ಸಂಸ್ಕೃತಿ. ನಮ್ಮಲ್ಲಿ ನದಿಗಳಿಗೆ ಬಾಗಿನ ಅರ್ಪಿಸುವುದು ಸಂಪ್ರದಾಯ. ಆದರೆ ಚುನಾವಣೆ ಸಮಯದಲ್ಲಿ ಜನರನ್ನು ಮೆಚ್ಚಿಸಲು ಸಚಿವ ಕೆ.ಸಿ.ನಾರಾಯಣಗೌಡ ಐದಾರೂ ಕೋಟಿ ರೂ. ವೆಚ್ಚಲ್ಲಿ ಕುಂಭಮೇಳ ಮಾಡುತ್ತಿದ್ದಾರೆ ಎಂದು ಶ್ರೀರಂಗಪಟ್ಟಣ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.
    ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ಕುಂಭಮೇಳಕ್ಕೆ ವ್ಯಯಿಸುತ್ತಿರುವ ಹಣವನ್ನು ರಸ್ತೆ ದುರಸ್ತಿಗೆ ಕೊಟ್ಟಿದ್ದರೆ, ಜನರ ತೆರಿಗೆ ಹಣ ಸಾರ್ಥಕ ಬಳಕೆಯಾಗುತ್ತಿತ್ತು. ಇದರಿಂದ ಜನರಿಗೂ ಅನುಕೂಲವಾಗುತ್ತಿತ್ತು ಎಂದರು.
    ಜಿಲ್ಲೆಯ ಸಂಸದರು ಯಾವುದೇ ಒಂದೊಳ್ಳೆ ಕೆಲಸ ಮಾಡಿಲ್ಲ. ಶ್ರೀರಂಗಪಟ್ಟಣ ರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರ. ಈ ಹಿಂದೆ ನಿಲುಗಡೆಯಾಗುತ್ತಿದ್ದ ರೈಲುಗಳು ನಿಲುಗಡೆಯಾಗುತ್ತಿಲ್ಲ. ಈ ಬಗ್ಗೆ ಸಂಸದರಿಗೆ ಕಾಳಜಿ ಇಲ್ಲ. ಯಾವುದೇ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಿಲ್ಲ. ಬದಲಿಗೆ ಅಭಿವೃದ್ಧಿಗೆ ಅಡ್ಡಗಾಲಾಗುತ್ತಾರೆ. ಗಣಿ ಉತ್ಪನ್ನಗಳು ದೊರೆಯದೆ ಸಿವಿಲ್ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಜಿಲ್ಲೆಯ ಸಂಸದರ ಕಾರ್ಯ ಕೇಂದ್ರ, ರಾಜ್ಯ ಸಚಿವರ ಭೇಟಿ ಮತ್ತು ದಿಶಾ ಸಭೆಗಷ್ಟೇ ಸೀಮಿತವಾಗಿದೆ. ಬೆಂಗಳೂರಿನಲ್ಲಿ ವಾಸವಿರುವ ಸಂಸದರು ಯಾವ ಹಳ್ಳಿಗೆ ಭೇಟಿ ನೀಡಿ ಜನಸಂಕಷ್ಟ ಆಲಿಸಿದ್ದಾರೆ. ಹೆದ್ದಾರಿ ಅವ್ಯವಹಾರದ ಬಗ್ಗೆ ಚಕಾರವೆತ್ತದ ಸಂಸದೆ, ತಮ್ಮ ಆಪ್ತನನ್ನು ಬೆಂಗಳೂರಿನ ಎಟ್ರಿಯಾ ಹೋಟೆಲ್‌ಗೆ ಏಕೆ ಕಳುಹಿಸಿದ್ದರು. ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಆಣೆ-ಪ್ರಮಾಣಕ್ಕೆ ಕರೆಯುತ್ತಾರೆ ಎಂದು ವ್ಯಂಗ್ಯವಾಡಿದರು.
    ರಾಷ್ಟ್ರೀಯ ಹೆದ್ದಾರಿ ಅವ್ಯವಹಾರದಲ್ಲಿ ಸಂಸದೆ ಭಾಗಿಯಾಗಿದ್ದಾರೆ ಎಂದು ನಾನೆಂದೂ ಹೇಳಿಲ್ಲ. ಆದರೆ ಅವರ ಸುತ್ತಮುತ್ತ ಇರುವವರೇ ಭಾಗೀದಾರರು. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಮೈಸೂರು ಮಹಾರಾಜರು ಹಾಗೂ ಸರ್ ಎಂವಿ ಅವರ ಕೃಪೆಯಿಂದ ನಮ್ಮ ಜಿಲ್ಲೆಯ ಜಮೀನುಗಳಿಗೆ ಮೌಲ್ಯ ಬಂದಿದ್ದು, ಜಮೀನು ಕಳೆದುಕೊಳ್ಳುವ ರೈತರ ಪರ ನಾವಿದ್ದೇವೆ. ರೈತರಿಗೆ ಅನ್ಯಾಯವಾದರೆ ಬೆಂಗಳೂರು- ಮೈಸೂರು ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಪ್ರತಿಭಟಿಸಲು ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
    ಕೆಆರ್‌ಎಸ್ ಸಂಪರ್ಕ ರಸ್ತೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ. 10 ಕೋಟಿ ರೂ. ವೆಚ್ಚದಲ್ಲಿ ಶೀಘ್ರದಲ್ಲೇ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
    ಈ ವೇಳೆ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಳೇಗೌಡ, ರೈತ ಮುಖಂಡ ಚಂದ್ರಶೇಖರ್, ಇಂಡವಾಳು ಸಿದ್ದೇಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts