ವೇದಿಕೆ ಮೇಲೇ ಸಚಿವ-ಶಾಸಕರ ಜಟಾಪಟಿ; ಮೂಕಪ್ರೇಕ್ಷಕರಾದ ಪೊಲೀಸರು!

Fight
Published on

ಮಂಡ್ಯ: ಸರ್ಕಾರದ ಸಚಿವರು ಹಾಗೂ ಶಾಸಕರೊಬ್ಬರು ಸರ್ಕಾರಿ ಕಾರ್ಯಕ್ರಮದ ವೇದಿಕೆಯೊಂದರ ಮೇಲೆಯೇ ಜಗಳವಾಡಿಕೊಂಡಿದ್ದು, ಕೆಲಕಾಲ ಭಾರಿ ವಾಕ್ಸಮರ ನಡೆಸಿದ ಪ್ರಸಂಗ ಉಂಟಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಈ ಪ್ರಕರಣ ನಡೆದಿದೆ.

ಸಚಿವ ಡಾ.ಕೆ.ಸಿ. ನಾರಾಯಣ ಗೌಡ ಮತ್ತು ಜೆಡಿಎಸ್​ ಶಾಸಕ ರವೀಂದ್ರ ಶ್ರೀಕಂಠಯ್ಯ ನಡುವೆ ಈ ಜಟಾಪಟಿ ನಡೆದಿದೆ. ಕಾರ್ಯಕ್ರಮದ ಸಂದರ್ಭ ತಹಸೀಲ್ದಾರ್ ರೂಪಾ ವಿರುದ್ಧ ಶಾಸಕ ರವೀಂದ್ರ ಆಕ್ರೋಶ ವ್ಯಕ್ತಪಡಿಸಿದ್ದರು. ತಹಸೀಲ್ದಾರ್​ ಕಂದಾಯ ಅದಾಲತ್ ಮಾಡುತ್ತಿಲ್ಲ ಎಂದು‌ ರೂಪಾ ವಿರುದ್ಧ ಶಾಸಕರು ಆರೋಪ ಮಾಡಿದ್ದಕ್ಕೆ, ತಾವು ಮಾಡಿರುವ ಕೆಲಸಕ್ಕೆ ಸಾಕ್ಷಿ ನೀಡುವುದಾಗಿ ರೂಪಾ ಸ್ಪಷ್ಟನೆ ನೀಡಿದ್ದಾರೆ. ಆಗ ಶಾಸಕ ರವೀಂದ್ರ ಅವರು ತಹಸೀಲ್ದಾರ್ ವಿರುದ್ಧ ಏರುದನಿಯಲ್ಲಿ ಏಕವಚನದಲ್ಲೇ ಮಾತನಾಡಿದ್ದಾರೆ.

ಅದುವರೆಗೂ ಎಲ್ಲವನ್ನೂ ತಾಳ್ಮೆಯಿಂದ ನೋಡುತ್ತಿದ್ದ ಸಚಿವ ನಾರಾಯಣ ಗೌಡ, ಬಳಿಕ ಮಧ್ಯಪ್ರವೇಶಿಸಿ ಶಾಸಕರ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಭಾರಿ ವಾಗ್ವಾದ ನಡೆದಿದೆ. ಸ್ಥಳದಲ್ಲಿ ಪೊಲೀಸರಿದ್ದರೂ ಮೂಕಪ್ರೇಕ್ಷಕರ ಹಾಗೆ ನೋಡುವಂತಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿರುವ ಅರಿವಾಗಿ ಬಳಿಕ ಶಾಸಕ-ಸಚಿವರು ಸಮಾಧಾನಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net