More

    ಮೇಲುಕೋಟೆ ಅಭಿವೃದ್ಧಿಗೆ ಮಾಸ್ಟರ್ ಪ್ಲಾೃನ್ ರೂಪಿಸಿ: ಅಧಿಕಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆ

    ಮೇಲುಕೋಟೆ: ಧಾರ್ಮಿಕ ಪ್ರವಾಸಿತಾಣ ಮೇಲುಕೋಟೆಯ ಅಭಿವೃದ್ಧಿಗೆ ಮೊದಲು ಮಾಸ್ಟರ್ ಪ್ಲಾೃನ್ ಮಾಡಿ ಜಿಲ್ಲಾಧಿಕಾರಿಯಿಂದ ಅನುಮೋದನೆ ಪಡೆದು ನೀಡಿದರೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧಿಕಾರಿಗಳಿಗೆ ತಿಳಿಸಿದರು.
    ಮೇಲುಕೋಟೆ ಆಡಳಿತ ಕಚೇರಿ ಆವರಣದಲ್ಲಿ ಸಾರ್ವಜನಿಕರು ಹಾಗೂ ದೇವಾಲಯದ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ಮೇಲುಕೋಟೆಯಲ್ಲಿ ಅರ್ಧಕ್ಕೆ ಕೆಲಸ ನಿಲ್ಲಿಸಿದ್ದ ಇನ್‌ಫೋಸಿಸ್ ಸುಧಾಮೂರ್ತಿ ಅವರನ್ನು ಸಹ ಮನವೊಲಿಸಿದ್ದು, ನಮ್ಮೊಡನೆ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಲಿದ್ದಾರೆ. ಹೀಗಾಗಿ ಶುದ್ಧೀಕರಿಸಿದ ಕುಡಿಯುವ ನೀರಿನ ಘಟಕಗಳು ಮತ್ತು ಶೌಚಗೃಹಗಳು ಎಲ್ಲಿರಬೇಕು? ಯಾವ ವಿನ್ಯಾಸದಲ್ಲಿ ಇರಬೇಕು? ಅಂದಾಜು ವೆಚ್ಚ ಎಷ್ಟು? ಯಾವ ಇಲಾಖೆಯಿಂದ ಅನುಷ್ಠಾನಗೊಳಿಸಬೇಕು? ಎಂಬಿತ್ಯಾದಿ ವಿಚಾರಗಳ ಬಗ್ಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅಂದಾಜು ವೆಚ್ಚದೊಡನೆ ಯೋಜನೆ ಸಿದ್ಧ ಮಾಡಬೇಕು. ನೀಲಿನಕ್ಷೆ ತಯಾರಿಸದೆ ಕೇವಲ ಪಟ್ಟಿ ಮಾಡಿದರೆ ಯಾವುದೇ ಪ್ರಯೋಜನವೂ ಆಗುವುದಿಲ್ಲ. ಈ ಬಗ್ಗೆ ಆಡಳಿತಾಧಿಕಾರಿಗಳಾದ ಎಡಿಸಿ ಮತ್ತು ಜಿಲ್ಲಾಧಿಕಾರಿ ಜತೆ ಚರ್ಚಿಸುತ್ತೇನೆ ಎಂದು ತಿಳಿಸಿದರು.
    ದೇಗುಲದ ಆದಾಯ ಹೆಚ್ಚಿಸಿ: ದೇವಾಲಯದ ಆದಾಯ ಹೆಚ್ಚಾಗಬೇಕಾದ ಅಗತ್ಯವಿದ್ದು, ವಾರ್ಷಿಕವಾಗಿ ಖರ್ಚು ಕಳೆದು 3 ಲಕ್ಷ ರೂ. ಉಳಿತಾಯ ಮಾತ್ರ ತೋರಿಸಲಾಗಿದೆ. ಆದಾಯ ಹೆಚ್ಚಳಕ್ಕೆ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ, ಆದಾಯದ ಮೂಲಗಳನ್ನು ಹೆಚ್ಚಿಸಲು ಸೇವೆಗಳನ್ನು ಜಾರಿಗೆ ತನ್ನಿ. ವಂಶಪಾರಂಪರ್ಯ ಸೇವೆಗಳನ್ನು ಹೊರತುಪಡಿಸಿ ಸರ್ಕಾರಿ ಸೇವೆಗಳನ್ನು ನಡೆಸಲು ಭಕ್ತರಿಗೆ ಅವಕಾಶ ನೀಡಿ ಪಟ್ಟಿಯನ್ನು ನನಗೆ ಸಲ್ಲಿಸಬೇಕು ಎಂದು ದೇವಾಲಯದ ಇಒ ಮಹೇಶ್‌ಗೆ ಸೂಚಿಸಿದರು.
    ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ, ರಾಮಾನುಜರ ಸನ್ನಿಧಿ ಅರ್ಚಕ ಆನಂದಾಳ್ವಾರ್ ಮಾತನಾಡಿದರು. ಪ್ರೀತಿ ಮಹದೇವ್, ರೈತಸಂಘದ ಮುಖಂಡರಾದ ಹೊಸಕೋಟೆ ವಿಜಯಕುಮಾರ್, ನ್ಯಾಮನಹಳ್ಳಿ ಶಿವರಾಮೇಗೌಡ ದಿಲೀಪ್, ಸುಬ್ಬಣ್ಣ, ಕಾಡೇನಹಳ್ಳಿ ಚಂದ್ರ ಪ್ರಕಾಶ್, ನೀಲನಹಳ್ಳಿ ದೇವರಾಜು, ಕದಲಗೆರೆ ನವೀನ್, ಕಾಂಗ್ರೆಸ್ ಮುಖಂಡರಾದ ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts