More

    ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರು ರಾಯಚೂರಿಗೆ ವಾಪಸ್

    ರಾಯಚೂರು: ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಸ್ಥಳೀಯ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ಪತ್ತೆಯಾಗಿದ್ದು, ಸೋಮವಾರ ರಾತ್ರಿ ಇಬ್ಬರು ಹಾಗೂ ಮಂಗಳವಾರ ಬೆಳಗಿನ ಜಾವ ಇಬ್ಬರು ರಾಯಚೂರಿಗೆ ಮರಳಿದ್ದಾರೆ.

    ಕಾಲೇಜಿಗೆ ಹೋಗುವುದಾಗಿ ಹೇಳಿ ಶನಿವಾರ ಬೆಳಗ್ಗೆ ಮನೆಯಿಂದ ತೆರಳಿದ್ದ ವಿದ್ಯಾರ್ಥಿನಿಯರು ಮನೆಗೆ ವಾಪಸ್ ಬಾರದಿರುವ ಹಿನ್ನೆಲೆಯಲ್ಲಿ ಮಹಿಳಾ ಠಾಣೆಗೆ ಪಾಲಕರು ಭಾನುವಾರ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ವಿದ್ಯಾರ್ಥಿನಿಯರು ಹುಬ್ಬಳ್ಳಿಯಲ್ಲಿರುವುದು ತಿಳಿದು ಬಂದಿತ್ತು.

    ಮಾಧ್ಯಮಗಳಲ್ಲಿ ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಸುದ್ದಿ ಪ್ರಸಾರವಾಗುತ್ತಿದ್ದಂತೆ ಇಬ್ಬರು ವಿದ್ಯಾರ್ಥಿನಿಯರು ಬಸ್ ಹತ್ತಿ ಸೋಮವಾರ ರಾತ್ರಿಯೇ ರಾಯಚೂರಿಗೆ ಹಿಂದಿರುಗಿದ್ದಾರೆ. ಹುಬ್ಬಳ್ಳಿಯಲ್ಲಿದ್ದ ಇನ್ನಿಬ್ಬರು ವಿದ್ಯಾರ್ಥಿನಿಯರನ್ನು ಪತ್ತೆ ಹಚ್ಚಿ ಅವರೊಂದಿಗಿದ್ದ ಇಬ್ಬರು ಯುವಕರನ್ನು ಠಾಣೆಗೆ ಕರೆದುಕೊಂಡು ಹೋಗಿ ನಂತರ ರಾಯಚೂರಿಗೆ ಕಳುಹಿಸಲಾಗಿದೆ.

    ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದಾಗ ಸ್ನೇಹಿತೆಯ ಪ್ರೇಮ ಪ್ರಕರಣ ಹಿನ್ನೆಲೆಯಲ್ಲಿ ಮದುವೆ ಮಾಡಿಸಲು ಹೋಗಿರುವುದಾಗಿ ವಿದ್ಯಾರ್ಥಿನಿಯರು ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಜತೆಗೆ ವಿದ್ಯಾರ್ಥಿನಿಯರು ಹಲವು ದಿನಗಳಿಂದ ಕಾಲೇಜಿಗೂ ಸರಿಯಾಗಿ ಹೋಗುತ್ತಿರಲಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. ಪ್ರಸ್ತುತ ಪೊಲೀಸರ ವಶದಲ್ಲಿರುವ ವಿದ್ಯಾರ್ಥಿನಿಯರ ವಿಚಾರಣೆ ನಡೆಯುತ್ತಿದ್ದು, ಅಪ್ರಾಪ್ತರಾಗಿರುವ ಕಾರಣ ವಿಚಾರಣೆ ನಂತರದಲ್ಲಿ ಅವರನ್ನು ಪಾಲಕರಿಗೆ ಒಪ್ಪಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts