More

    ಕನ್ನಡಿ ಗಂಟಾದ ಲಾಕ್​ಡೌನ್ ಪರಿಹಾರ

    ಕಾರವಾರ: ಸರ್ಕಾರ ವಿಧಿಸಿದ ಕಠಿಣ ನಿಯಮಾವಳಿ ಹಾಗೂ ತಾಂತ್ರಿಕ ತೊಂದರೆಯಿಂದ ಹೆಚ್ಚಿನ ಕಲಾವಿದರಿಗೆ ಕೋವಿಡ್ ಲಾಕ್​ಡೌನ್ ಪರಿಹಾರ ಸಿಗದಂತಾಗಿದೆ.

    ಮೇ 19 ರಂದು ಸಿಎಂ ಬಿ.ಎಸ್.ಯಡಿಯೂರಪ್ಪ ಕಲಾವಿದರಿಗೆ ತಲಾ 3 ಸಾವಿರ ರೂ. ಲಾಕ್​ಡೌನ್ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಸೇವಾ ಸಿಂಧು ಪೋರ್ಟಲ್ ಮೂಲಕ ಜೂನ್ 5 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಜಿಲ್ಲೆಯಲ್ಲಿ, ಸಂಗೀತ, ನೃತ್ಯ, ನಾಟಕ, ಜಾನಪದ, ಯಕ್ಷಗಾನ ಕಲಾವಿದರು ಸೇರಿ ಆರು ಸಾವಿರಕ್ಕೂ ಅಧಿಕ ಜನರಿದ್ದಾರೆ. ಅದರಲ್ಲಿ ಶೇ. 50ಕ್ಕಿಂತ ಹೆಚ್ಚಿನ ಕಲಾವಿದರು ತೀರ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಸಹಾಯಧನದ ಅವಶ್ಯಕತೆ ಹೊಂದಿದ್ದಾರೆ. ಆದರೆ, ಜಿಲ್ಲೆಯಲ್ಲಿ 595 ಅರ್ಜಿಗಳು ಮಾತ್ರ ಸಹಾಯಧನಕ್ಕೆ ಸಲ್ಲಿಕೆಯಾಗಿವೆ. ಹಲವು ಕಾರಣಗಳಿಂದ ಸಾಕಷ್ಟು ಕಲಾವಿದರಿಗೆ ಅರ್ಜಿ ಸಲ್ಲಿಸಲು ಸಾಧ್ಯವೇ ಆಗಿಲ್ಲ.

    ನಿಯಮಗಳೇನು..?: 35 ವರ್ಷ ವಯಸ್ಸಾಗಿರಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರಬಾರದು. 2020-21 ನೇ ಸಾಲಿನ ಸಾಮಾನ್ಯ ವಿಶೇಷ ಘಟಕ, ಗಿರಿಜನ ಉಪ ಯೋಜನೆಯಡಿ, ಸಾಂಸ್ಕೃತಿಕ ಚಟುವಟಿಕೆಗೆ ಕಲಾ ಸಂಘಗಳ ಪರವಾಗಿ ಸಹಾಯಧನ ಪಡೆದಿರಬಾರದು, ವಾದ್ಯ ಪರಿಕರ, ವೇಷಭೂಷಣ ಖರೀದಿ, ಶಿಲ್ಪಕಲೆ ಚಿತ್ರಕಲಾ ಪ್ರದರ್ಶನಕ್ಕೆ ಸಹಾಯಧನ ಪಡೆದಿರಬಾರದು. ಕಲಾವಿದರಾಗಿ ಕೆಲಸ ಮಾಡಲು ಪ್ರಾರಂಭಿಸಿ ಕನಿಷ್ಠ 10 ವರ್ಷವಾಗಿರಬೇಕು ಎಂಬ ನಿಯಮಾವಳಿಗಳನ್ನು ವಿಧಿಸಲಾಗಿದೆ. ಇದರಿಂದ ಯುವ ಕಲಾವಿದರು, ಇಲಾಖೆಯ ಸಹಾಯಧನ ಪಡೆಯದವರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ.

    ತಾಂತ್ರಿಕ ತೊಂದರೆ: ಮೇ 28 ರಿಂದ ಜೂನ್ 5 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಆ ಅವಧಿಯಲ್ಲಿ ಸಂಪೂರ್ಣ ಲಾಕ್​ಡೌನ್ ಇದ್ದ ಕಾರಣ ಜನ ಹೊರ ಬರಲು ಸಾಧ್ಯವಾಗಿಲ್ಲ. ಸೇವಾ ಸಿಂಧು ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಲು ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಇದೆ. ಶಹರದಲ್ಲೂ ಯಾವುದೇ ಇಂಟರ್​ನೆಟ್ ಸೆಂಟರ್​ಗಳು ತೆರೆದಿರಲಿಲ್ಲ. ಹಲವು ಹಿರಿಯ ಕಲಾವಿದರಿಗೆ ಆಧುನಿಕ ತಂತ್ರಜ್ಞಾನದ ಮಾಹಿತಿಯ ಕೊರತೆ ಇದೆ. ಇನ್ನು ಕೆಲವರು ಸ್ವತಃ ಪ್ರಯತ್ನ ಪಟ್ಟರೂ ವಿವಿಧ ತಾಂತ್ರಿಕ ಕಾರಣಗಳಿಂದ ಅರ್ಜಿ ಸಲ್ಲಿಸಲು ಸಾಧ್ಯವೇ ಆಗಿಲ್ಲ. ಆಧಾರ ಕಾರ್ಡ್​ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗದೇ ಇದ್ದಲ್ಲಿ ಒಟಿಪಿ ಬರದೇ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ.

    ಕಠಿಣ ಲಾಕ್​ಡೌನ್ ಜಾರಿಯಲ್ಲಿದ್ದಾಗಲೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇಂಟರ್​ನೆಟ್ ಕೇಂದ್ರಗಳು ಬಂದ್ ಆಗಿದ್ದವು. ಸಮೀಪದ ಗ್ರಾಪಂಗೆ ಹೋದರೆ ಅಲ್ಲೂ ನೆಟ್ವರ್ಕ್ ಸಮಸ್ಯೆ ಇದೆ. ಇದರಿಂದ ಹೆಚ್ಚಿನ ಕಲಾವಿದರು ಸರ್ಕಾರದ ಕೋವಿಡ್ ಪರಿಹಾರ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದರಿಂದ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಬೇಕು.

    | ಗಜಾನನ ನಾಯ್ಕ ದೇವಳಮಕ್ಕಿ ಕಾರವಾರ, ರಂಗಭೂಮಿ ಕಲಾವಿದರ ವೇದಿಕೆ ಅಧ್ಯಕ್ಷ

    ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಯಕ್ಷಗಾನ ಕಲಾವಿದರೇ ಇದ್ದಾರೆ. ಇತರ ಜಾನಪದ ಕಲೆ ಹಾಗೂ ನಾಟಕ ಕಲಾವಿದರೂ ಸೇರಿ ಆರು ಸಾವಿರಕ್ಕೂ ಅಧಿಕ ಜನರಿರಬಹುದು. ಸಾಕಷ್ಟು ಜನ ಪರಿಹಾರದ ತೀರ ಅವಶ್ಯಕತೆ ಇರುವವರಿದ್ದಾರೆ. ಸರ್ಕಾರ ನಿಯಮಾವಳಿ ಸಡಿಲಿಸಿ, ತಾಂತ್ರಿಕ ಸಮಸ್ಯೆ ಬಗೆಹರಿಸಿ ಅಂಥವರಿಗೆ ಪರಿಹಾರ ಸಿಗುವಂಥ ವ್ಯವಸ್ಥೆ ಮಾಡಬೇಕು.

    | ನಾಗರಾಜ ಜೋಷಿ ಯಕ್ಷಗಾನ ಕಲಾವಿದ

    ಸೇವಾ ಸಿಂಧು ಪೋರ್ಟಲ್​ನಲ್ಲಿ ಸಲ್ಲಿಸಿದ, ದಾಖಲೆ ಸಮರ್ಪಕವಾಗಿರುವ ಎಲ್ಲ ಅರ್ಜಿಗಳನ್ನು ಪರಿಶೀಲನೆ ನಡೆಸಿ, ನಮ್ಮ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ಕಳಿಸಲಾಗಿದೆ. ಅಲ್ಲಿಂದ ಅನುಮೋದನೆ ದೊರೆತ ಬಳಿಕ ಕಲಾವಿದರ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗಲಿದೆ.

    | ಎನ್.ಜಿ.ನಾಯಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts