ಇಂಫಾಲ್ : ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ತಮ್ಮ ಹಳ್ಳಿಯಿಂದ ಇಂಫಾಲ್ನಲ್ಲಿದ್ದ ಕ್ರೀಡಾ ತರಬೇತಿ ಕೇಂದ್ರಕ್ಕೆ ತಲುಪಲು ಪ್ರತಿನಿತ್ಯ 25 ಕಿಲೋಮೀಟರ್ ಪ್ರಯಾಣಿಸಬೇಕಿತ್ತು. ಆ ಸಮಯದಲ್ಲಿ ಅವರಿಗೆ ಲಿಫ್ಟ್ ಕೊಟ್ಟು ಸಹಾಯ ಮಾಡಿದ್ದವರು ನಿತ್ಯ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಟ್ರಕ್ ಚಾಲಕರು. ಅವರಿಗೆ ಕೃತಜ್ಞತೆ ಅರ್ಪಿಸಲು ನಿನ್ನೆಯ ದಿನ ಮಣಿಪುರದ ತಮ್ಮ ನಿವಾಸದ ಬಳಿ 150 ಟ್ರಕ್ ಚಾಲಕರನ್ನು ಚಾನು ಸನ್ಮಾನಿಸಿದ್ದಾರೆ.
ಪ್ರತಿನಿತ್ಯ ಅಷ್ಟು ದೂರದ ಪ್ರಯಾಣ ನಡೆಸಲು ಆರ್ಥಿಕ ಅನುಕೂಲ ಇಲ್ಲದ ಚಾನುಗೆ ಹಲವು ವರ್ಷಗಳು ಮರಳು ಸಾಗಣೆ ಟ್ರಕ್ ಚಾಲಕರು ಬೆಂಬಲವಾಗಿದ್ದರು ಎಂದು ತಿಳಿಸಿದ್ದಾರೆ. ತಮ್ಮ ಸಾಧನೆಯಲ್ಲಿ ಅವರದ್ದು ದೊಡ್ಡ ಪಾತ್ರವಿದೆ ಎಂದಿರುವ ಚಾನು, ಗುರುವಾರ ಟ್ರಕ್ ಚಾಲಕರನ್ನು ಭೇಟಿ ಮಾಡಿದಾಗ ಭಾವುಕರಾಗಿ ಧನ್ಯವಾದ ಹೇಳಿದರು ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಸೆಮಿ ಫೈನಲ್ ಪ್ರವೇಶಿಸಿದ ‘ಭಜರಂಗ್’, ಕುಸ್ತಿಯಲ್ಲಿ ಮತ್ತೊಂದು ಪದಕದ ನಿರೀಕ್ಷೆ
ಸ್ಟಾರ್ ವೇಯ್ಟ್ಲಿಫ್ಟರ್ ಮೀರಾಬಾಯಿ ಚಾನು ಅವರು ಮಣಿಪುರದ ಪಾರಂಪರಿಕ ಪೋಷಾಕು ತೊಟ್ಟು, ಟ್ರಕ್ ಚಾಲಕರನ್ನು ಕುರ್ಚಿಗಳ ಮೇಲೆ ಕೂರಿಸಿ, ಪ್ರತಿಯೊಬ್ಬರಿಗೂ ಒಂದು ಶರ್ಟ್ ಮತ್ತು ಮಣಿಪುರಿ ಶಾಲು ನೀಡಿ ಸತ್ಕರಿಸಿದ್ದಾರೆ. ಜೊತೆಗೆ ಮಣಿಪುರಿ ಶೈಲಿಯ ಮೃಷ್ಟಾನ್ನ ಭೋಜನ ಹಾಕಿಸಿದ್ದಾರೆ. (ಏಜೆನ್ಸೀಸ್)