More

    10 ತಿಂಗಳಿಂದ ಅತ್ಯಾಚಾರ ಎಸಗುತ್ತಿದ್ದ ಅಬಕಾರಿ ಎಸ್​ಐ ಅನ್ನು ಹಿಡಿದುಕೊಟ್ಟ ಬಾಲೆ

    ಭೋಪಾಲ್​: ತನ್ನ ಮೇಲೆ 10 ತಿಂಗಳಿಂದ ನಿರಂತರವಾಗಿ ಅತ್ಯಾಚಾರ ಎಸಗುತ್ತಿದುದ್ದಲ್ಲದೆ, ಕೆಲಸ ಬಿಡದಂತೆ ತಡೆಯುತ್ತಿದ್ದ ಅಬಕಾರಿ ಇಲಾಖೆಯ ಸಬ್​ ಇನ್​ಸ್ಪೆಕ್ಟರ್​ (ಎಸ್​ಐ) ಅನ್ನು ಸ್ವತಃ ಬಾಲಕಿಯೇ ಪೊಲೀಸರ ವಶಕ್ಕೆ ಒಪ್ಪಿಸಿದ್ದಾಳೆ.

    ಮಧ್ಯಪ್ರದೇಶ ಅಬಕಾರಿ ಇಲಾಖೆಯ ಎಸ್​ಐ ಪಂಕಜ್​ ಜೈನ್​ ಬಂಧಿತರು. ಉಜ್ಜೈನ್​ನಲ್ಲಿನ ಹೋಟೆಲ್​ಗೆ ಬರುವಂತೆ ಬಾಲಕಿಗೆ ಸೂಚಿಸಿದ್ದ ಎಸ್​ಐ, ಬೇರೊಬ್ಬರ ಹೆಸರಿನಲ್ಲಿ ಕೊಠಡಿಯನ್ನು ಕಾಯ್ದಿರಿಸಿದ್ದರು. ಅಲ್ಲಿಗೆ ಪೊಲೀಸ್​ ತಂಡದೊಂದಿಗೆ ಹೋದ ಬಾಲಕಿ ಎಸ್​ಐ ಅವರನ್ನು ಹಿಡಿದುಕೊಟ್ಟಳು ಎನ್ನಲಾಗಿದೆ.

    ಪಂಕಜ್​ ಜೈನ್​ ಮನೆಯಲ್ಲಿ 17 ವರ್ಷದ ಬಾಲಕಿ ಮನೆಗೆಲಸ ಮಾಡುತ್ತಿದ್ದಳು. ಕಳೆದ 10 ತಿಂಗಳಿಂದ ಆಕೆಯ ಮೇಲೆ ಎಸ್​ಐ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದರು. ಇವರ ಪೀಡನೆಗೆ ಬೇಸತ್ತು ಆಕೆ ಕೆಲಸ ಬಿಡಲು ಮುಂದಾದಾಗ, ಸುಳ್ಳು ಪೊಲೀಸ್​ ಕೇಸ್​ನಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಅನ್​​ಲಾಕ್​-2: ಇನ್ಮುಂದೆ ರಾಜ್ಯದಲ್ಲಿ ರಾತ್ರಿ 9 ಗಂಟೆಯಿಂದ ಕರ್ಫ್ಯೂ…

    ಸೋಮವಾರದಂದು (ಜು.20) ಉಜ್ಜೈನ್​ನ ಹೋಟೆಲ್​ ಬರುವಂತೆ ತಾಕೀತು ಮಾಡಿದ್ದ ಎಸ್​ಐ, ಬೇರೊಬ್ಬರ ಹೆಸರಿನಲ್ಲಿ ಕೊಠಡಿ ಕಾಯ್ದಿರಿಸಿದ್ದರು ಎನ್ನಲಾಗಿದೆ. ಪೀಡನೆಯಿಂದ ಬೇಸತ್ತಿದ್ದ ಬಾಲಕಿ ಇವರಿಂದ ಬಿಡುಗಡೆ ಪಡೆಯಲೇ ಬೇಕು ಎಂಬ ಗಟ್ಟಿ ನಿರ್ಧಾರ ಕೈಗೊಂಡು, ಸ್ಥಳೀಯ ಪೊಲೀಸ್​ ತಂಡದೊಂದಿಗೆ ಹೋಟೆಲ್​ಗೆ ತೆರಳಿದ್ದಳು.

    ಮೊದಲು ಒಳ ಹೋದ ಪೊಲೀಸರಿಗೆ ಪಂಕಜ್​ ಜೈನ್​ ಏನೇನೋ ಸಬೂಬು ಹೇಳಿ ಸಾಗಹಾಕಲು ಯತ್ನಿಸಿದ್ದರು. ಆದರೆ, ಬಾಲಕಿ ಕೊಠಡಿಗೆ ಬಂದು ವಾಸ್ತವವನ್ನು ವಿವರಿಸಿದ ನಂತರದಲ್ಲಿ ನಿರುತ್ತರರಾದ ಪಂಕಜ್​ ಜೈನ್​ ಪೊಲೀಸರಿಗೆ ಶರಣಾದರು ಎನ್ನಲಾಗಿದೆ.

    ಈ ವಿಷಯವನ್ನು ತಿಳಿಸಿದ ಉಜ್ಜೈನ್​ನ ಸಿಎಸ್​ಪಿ ರಜನೀಶ್​ ಕಶ್ಯಪ್​, ಸದ್ಯ ಪಂಕಜ್​ ಜೈನ್ ಅವರನ್ನು ಬಂಧಿಸಲಾಗಿದೆ. ಪೋಕ್ಸೋ ಕಾಯ್ದೆಯಡಿ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts