More

    ಗಾಣದ ಎಣ್ಣೆ ದುಬಾರಿಯಾದರೂ ಆರೋಗ್ಯಕರ

    ಚಿಕ್ಕಮಗಳೂರು: ಇಂದಿನ ಕಲಬೆರಕೆ ಕಾಲದಲ್ಲಿ ಶುದ್ಧ ಎಣ್ಣೆ ಪೂರೈಸುವ ಎಣ್ಣೆ ಗಾಣಗಳು ಮರೆಯಾಗಿದ್ದವು. ಈಗ ಮತ್ತೆ ಹಿಂದಿನ ಪದ್ಧತಿಗೆ ಮಾರುಹೋಗುವ ಅನಿವಾರ್ಯತೆ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

    ತಾಲೂಕಿನ ಲಕ್ಯಾ ಹೋಬಳಿ ಬೆಳವಾಡಿಯ ಶ್ರೀ ಉದ್ಭವ ಗಣಪತಿ ಸುಸ್ಥಿರ ಕೃಷಿಕರ ಸಂಘ ಕೆ.ಬಿ.ಹಾಳ್ ಹ್ಯಾಂಡ್​ಪೋಸ್ಟ್ ಬಳಿ ಸ್ಥಾಪಿಸಿರುವ ಆಧುನಿಕ ಮಾದರಿಯ (ಕೋಲ್ಡ್ ಪ್ರೆಸ್ಡ್) ಎಣ್ಣೆ ಗಾಣಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

    ಚಿಕ್ಕಮಗಳೂರಿನ ಹನುಮಂತಪ್ಪ ಸರ್ಕಲ್ ಸುತ್ತಮುತ್ತ 20ಕ್ಕೂ ಹೆಚ್ಚು ಎಣ್ಣೆ ಗಾಣಗಳಿದ್ದವು. ಈಗ ಎಲ್ಲವೂ ಕಣ್ಮರೆಯಾಗಿವೆ. ಇದಕ್ಕೆ ಕಾರಣ ಶುದ್ಧ ಎಣ್ಣೆ ಬೆಲೆ ದುಬಾರಿ. ಜನ ಮಾರುಕಟ್ಟೆಯಲ್ಲಿ ಸಿಗುವ ಕಲಬೆರಕೆ ಎಣ್ಣೆಯನ್ನೇ ಖರೀದಿಸಿ ಬಳಸುತ್ತಿದ್ದಾರೆ. ಶುದ್ಧವಾದದ್ದನ್ನು ಬಿಟ್ಟು, ಕಳಪೆ ವಸ್ತು ಬಳಸುವಂತಾಗಿದೆ ಎಂದರು.

    ಸುಸ್ಥಿರ ಕೃಷಿಕರ ಸಂಘವು ರೈತ ಉತ್ಪಾದಕರ ಸಂಘ ರಚಿಸಿ ಈ ಭಾಗದ ರೈತರಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ. ಈಗ ಎಣ್ಣೆ ಗಾಣ ನಿರ್ವಿುಸಿ ಶುದ್ಧ ಎಣ್ಣೆಯನ್ನು ಅನ್ನದಾತರು ಬಳಸಲು ಅನುಕೂಲ ಮಾಡಿಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಭೂಮಿ ಸಂಸ್ಥೆಯ ಜಯಪ್ರಸಾದ್ ಬಳ್ಳೇಕೆರೆ ಮಾತನಾಡಿ, ಈ ಭಾಗದಲ್ಲಿ ಮಳೆ ಕಡಿಮೆ ಬೀಳುವುದರಿಂದ ಕಡಿಮೆ ನೀರು ಬಯಸುವ ಸೂರ್ಯಕಾಂತಿ, ಕಡ್ಲೆಬೀಜ, ಎಳ್ಳು, ಹುಚ್ಚೆಳ್ಳು, ಕೊಬ್ಬರಿ, ಹರಳು ಬೆಳೆದು ರೈತರು ಹೆಚ್ಚಿನ ಆದಾಯ ಗಳಿಸಬಹುದು. ಸಂಘದ ಉದ್ದೇಶಗಳಾದ ಎಣ್ಣೆಕಾಳು ಬೆಳಗೆ ಪ್ರೋತ್ಸಾಹಿಸಿ ಉತ್ತಮ ಬೆಲೆ ನೀಡುವುದು. ಗ್ರಾಹಕರಿಗೆ ಶುದ್ಧ ಅಡುಗೆ ಎಣ್ಣೆ ಸರಬರಾಜು ಮಾಡುವುದು ಮತ್ತು ಸ್ಥಳೀಯ ರೈತರ ಮಕ್ಕಳಿಗೆ ಉದ್ಯೋಗ ಸೃಷ್ಟಿಸಬಹುದು ಎಂದರು.

    ತಾಪಂ ಸದಸ್ಯೆ ಶುಭಾ ಸತ್ಯಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಬಸವರಾಜು ಬೆಳವಾಡಿ, ವೈದ್ಯ ಡಾ. ಡಿ.ಪಿ.ಮೋಹನ್, ಹಾಸನ ಕೊಡಗು ಸಾವಯವ ಒಕ್ಕೂಟದ ಅಧ್ಯಕ್ಷ ವೈ.ಸಿ.ರುದ್ರಪ್ಪ, ಸಂಘದ ವ್ಯವಸ್ಥಾಪಕ ನಾರಾಯಣ, ಬೀರೇಗೌಡ, ಕೆ.ಬಿ.ಹಾಳ್, ಮಾಚೇನಹಳ್ಳಿ, ಬೆಳವಾಡಿ ಗ್ರಾಪಂ ಅಧ್ಯಕ್ಷರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts